ವಾಡಿ: ಶ್ರಾವಣ ಮಾಸ ಎನ್ನುವುದು ಭಾರತೀಯ ಪರಂಪರೆಯಲ್ಲಿ ಶ್ರೇಷ್ಠ ತಿಂಗಳು. ಶರಣರ ಸಂಘ ಮಾಡುವುದರಿಂದ ದುರ್ಗುಣಗಳನ್ನು ದೂರ ಇಡಲು ಸಾಧ್ಯವಾಗುತ್ತದೆ ಎಂದು ಗುರುಮಠಕಲ್ ಮಠದ ಪೂಜ್ಯ ಶ್ರೀ ಶಾಂತವೀರ ಸ್ವಾಮೀಜಿ ನುಡಿದರು.
ಪಟ್ಟಣದ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ವೀರಶೈವ ಸಮಾಜದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶ್ರಾವಣ ಸಮಾರಂಭ ಹಾಗೂ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿ ಶ್ರೀಗಳು ಆಶೀರ್ವಚನ ನೀಡಿದರು.
ಬದುಕಿಗೆ ಅಂಟಿಸಿಕೊಂಡ ಕೆಟ್ಟ ಚಟಗಳನ್ನು ಬಿಟ್ಟು, ದೇವರ ಧ್ಯಾನ, ಸಜ್ಜನರ ಸಂಘ ಮತ್ತು ವಚನಗಳ ಪಠಣಕ್ಕೆ ಹೆಚ್ಚಿನ ಆದ್ಯತೆ ನೀಡಿದರೆ ಮಾತ್ರ ಶ್ರಾವಣ ಮಾಸ ಆಚರಣೆಗೆ ಅರ್ಥ ಬರುತ್ತದೆ. ಧಾರ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಮನುಷ್ಯ ಸಂಘ ಜೀವಿಯಾಗಿ ಬದುಕುವುದನ್ನು ಕಲಿತುಕೊಳ್ಳಬೇಕು ಎಂದು ಹೇಳಿದರು.
ಸಂಸಾರದ ಜಂಜಾಟ ಸಾಯುವ ವರೆಗೂ ನಮ್ಮ ಬೆನ್ನು ಹತ್ತುತ್ತದೆ. ಬದುಕಿನ ಒತ್ತಡಗಳ ಮಧ್ಯೆಯೂ ಪರರ ಸುಃಖ ಶಾಂತಿಗಾಗಿ ಸಮಯ ಮೀಸಲಿಡುವುದೇ ನಿಜವಾದ ದೇವರ ಸೇವೆಯಾಗಿದೆ. ಮನಸ್ಸು ಕೆಟ್ಟದ್ದರತ್ತ ಹೆಚ್ಚು ವಾಲುತ್ತದೆ. ಒಳ್ಳೆಯದು ಯಾವುದು ಎಂಬುದು ಗುರುತಿಸಲು ಸಾಧ್ಯವಾಗುವುದಿಲ್ಲ ಎಂದರು.
ವೀರಶೈವ ಸಮಾಜದ ಅಧ್ಯಕ್ಷ ಸಿದ್ದಣ್ಣ ಕಲಶೆಟ್ಟಿ, ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕಲ್ಯಾಣರಾವ್ ಶೆಳ್ಳಗಿ, ಪುರಸಭೆ ಸದಸ್ಯ ಭೀಮಶಾ ಜಿರೊಳ್ಳಿ, ಹಿರಿಯ ಮುಖಂಡರಾದ ಶಾಂತಪ್ಪ ಶೆಳ್ಳಗಿ, ಪರುತಪ್ಪ ಕರದಳ್ಳಿ, ಶರಣಗೌಡ ಚಾಮನೂರ, ಬಸವರಾಜ ಶೆಟಗಾರ, ಅಣ್ಣಾರಾವ ಪಸಾರೆ, ಚಂದ್ರಶೇಖರ ಗೋಳಾ, ನಿಂಗಣ್ಣ ದೊಡ್ಡಮನಿ ಮತ್ತಿತರರು ಶ್ರೀ ಮಲ್ಲಿಕಾರ್ಜುನ ದೇವರ ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡಿದ್ದರು.