ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ 17 ವರ್ಷಗಳ ಬಳಿಕ ಭಯೋತ್ಪಾದಕರು ದ್ರವ ಸ್ಫೋಟಕಗಳನ್ನು ಬಳಸಲು ಆರಂಭಿಸಿರುವ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಇತ್ತೀಚೆಗೆ ನಡೆದ ಕಾರ್ಯಾಚರಣೆಯಲ್ಲಿ ಲಷ್ಕರ್ ಉಗ್ರನ ಬಳಿ ಇದ್ದ ದ್ರವ ಸ್ಫೋಟಕಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇತ್ತೀಚೆಗೆ ಪುಲ್ವಾಮಾದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಲಷ್ಕರ್ ಉಗ್ರರಾದ ರಿಯಾಜ್ ದರ್ ಹಾಗೂ ರಾಯಿಸ್ ದರ್ ಹತ್ಯೆಯಾಗಿದ್ದರು. ಈ ಸಮಯದಲ್ಲಿ ಅವರ ಸಹಚರರನ್ನು ಬಂಧಿಸಲಾಗಿತ್ತು. ವಿಚಾರಣೆ ವೇಳೆ ಸಹಚರರು ನೀಡಿದ ಮಾಹಿತಿ ಆಧಾರದ ಮೇಲೆ ಒಟ್ಟು 6 ಕೆ.ಜಿ. ಡಿ2ಡಿ (ಡಿಫಿಕಲ್ಟ್ ಟು ಡಿಟೆಕ್ಟ್) ಸ್ಫೋಟಕಗಳನ್ನು ಪತ್ತೆಹಚ್ಚಲಾಗಿದೆ.
2007ರಲ್ಲಿ ಉಗ್ರ ಸಂಘಟನೆಗಳು ದಕ್ಷಿಣ ಕಾಶ್ಮೀರದಲ್ಲಿ ಇವುಗಳನ್ನು ಬಳಸಿದ್ದರು. ಬರೊಬ್ಬರಿ 17 ವರ್ಷಗಳ ಬಳಿಕ ಈಗ ಡಿ2ಡಿ ಸ್ಫೋಟಕ ಪತ್ತೆಯಾಗಿದ್ದು, ಪಾಕಿಸ್ತಾನ ಡ್ರೋನ್ ಮೂಲಕ ಇವುಗಳನ್ನು ಕಳಿಸಿರಬಹುದು ಎನ್ನಲಾಗಿದೆ.
ಏನಿದು ಡಿ2ಡಿ ಸ್ಫೋಟಕ?
ಡೈನಮೈಟ್‌ಗಳಲ್ಲಿ ಬಳಸುವ ನೈಟ್ರೊಗ್ಲಿಸರಿನ್ ರಾಸಾಯನಿಕ ಒಳಗೊಂಡ ಈ ಸ್ಫೋಟಕ ದ್ರವ ರೂಪದಲ್ಲಿ ಇರುತ್ತದೆ. ಡಿಟೆಕ್ಟರ್ ಯಂತ್ರದಿಂದಾಗಲೀ, ಪೊಲೀಸ್ ಶ್ವಾನಗಳಿಂದಾಗಲೀ ಇವುಗಳನ್ನು ಪತ್ತೆ ಹಚ್ಚಲಾಗದು. ಹೀಗಾಗಿ ಇದನ್ನು ಡಿ2ಡಿ (ಡಿಫಿಕಲ್ಟ್ ಟು ಡಿಟೆಕ್ಟ್) ಎಂದು ಕರೆಯುತ್ತಾರೆ. ಇದು ಬಹು ಅಪಾಯಕಾರಿ.