Advertisement

ಬಾಡಿಲೈನ್ ಬೌಲಿಂಗ್ ಎಂಬ ಕ್ರಿಕೆಟ್ ನ ಅಪಾಯಕಾರಿ ರಣತಂತ್ರ

01:02 PM Aug 19, 2021 | Team Udayavani |
ಬಾಡಿಲೈನ್ ಬೌಲಿಂಗ್ ಗೆ ಹೆಸರಾದ ಹೆರಾಲ್ಡ್‌ ಲಾರ್‌ವುಡ್‌ ನ್ನು "ಕ್ರಿಕೆಟಿನ ಖಳನಾಯಕ' ಎಂದೇ ಕ್ರೀಡಾ ಜಗತ್ತು ಗುರುತಿಸುತ್ತಿದೆ. ಅವರು ಗತಿಸಿ 25 ವರ್ಷಗಳಾದರೂ ಈ ಕಳಂಕ ಮಾತ್ರ ಹೋಗಿಲ್ಲ, ಬಹುಶಃ ಹೋಗುವುದೂ ಇಲ್ಲ!
Now pay only for what you want!
This is Premium Content
Click to unlock
Pay with

ಕ್ರಿಕೆಟ್ ನ್ನು ಜಂಟಲ್ ಮೆನ್ ಗೇಮ್ ಎನ್ನಲಾಗುತ್ತದೆ. ಆದರೆ ಇಲ್ಲಿ ಕೂಡಾ ಈ ಸ್ಪೂರ್ತಿಗೆ ವಿರುದ್ಧವಾಗಿ ಹಲವಾರು ಘಟನೆಗಳು ನಡೆಯುತ್ತದೆ. ಟೆಸ್ಟ್ ಕ್ರಿಕೆಟ್ ನಲ್ಲಿ ಸ್ಲೆಡ್ಜಿಂಗ್ ಗಳು ಹೆಚ್ಚಾದಾಗ ವೇಗದ ಬೌಲರ್ ಗಳು ಆಟಗಾರನ ದೇಹವನ್ನು ಗುರಿಯಾಗಿಸಿಕೊಂಡು ಬೌಲಿಂಗ್ ಮಾಡುವುದಿದೆ. ಇದು ಅಪಾಯಕಾರಿ ರಣತಂತ್ರ ಇದೇ ಬಾಡಿಲೈನ್ ಬೌಲಿಂಗ್. ಇದಕ್ಕೆ ಹೆಸರಾದವರು ಹೆರಾಲ್ಡ್‌ ಲಾರ್‌ವುಡ್‌

Advertisement

ಇಂಗ್ಲೆಂಡಿನ ಘಾತಕ ವೇಗಿ ಹೆರಾಲ್ಡ್‌ ಲಾರ್‌ವುಡ್‌ ಗತಕಾಲದ ಕ್ರಿಕೆಟ್‌ ಪ್ರಿಯರಿಗೆಲ್ಲ ಗೊತ್ತು. ಬಾಡಿಲೈನ್‌ ಬೌಲಿಂಗ್‌ ಮತ್ತು ಲಾರ್‌ವುಡ್‌ ಒಂದಕ್ಕೊಂದು ಬಿಟ್ಟಿರಲಾಗದ ನಂಟು. ವಿವಾದಗಳಿಂದಲೇ ಸುದ್ದಿಯಾದ ಇವರನ್ನು “ಕ್ರಿಕೆಟಿನ ಖಳನಾಯಕ’ ಎಂದೇ ಕ್ರೀಡಾ ಜಗತ್ತು ಗುರುತಿಸುತ್ತಿದೆ. ಅವರು ಗತಿಸಿ 25 ವರ್ಷಗಳಾದರೂ ಈ ಕಳಂಕ ಮಾತ್ರ ಹೋಗಿಲ್ಲ, ಬಹುಶಃ ಹೋಗುವುದೂ ಇಲ್ಲ.

ಹಾಗಾದರೆ ಹೆರಾಲ್ಡ್‌ ಲಾರವುಡ್‌ ನಿಜಕ್ಕೂ ಕ್ರಿಕೆಟಿನ ಖಳನಾಯಕನೇ? ಎದುರಾಳಿ ಬ್ಯಾಟ್ಸ್‌ಮನ್‌ಗಳ ದೇಹವನ್ನೇ ಗುರಿಯಾಗಿಸುವ ಬಾಡಿಲೈನ್‌ ಬೌಲಿಂಗ್‌ ಇವರೇಕೆ ಮಾಡಬೇಕಿತ್ತು? ಇದೊಂದು ರೋಚಕ ಕಥನ.

ಹೆರಾಲ್ಡ್‌ ಲಾರ್‌ವುಡ್‌ ಟೆಸ್ಟ್‌ ಪದಾರ್ಪಣೆ ಮಾಡಿದ್ದು 1926ರ ಆ್ಯಶಸ್‌ ಸರಣಿಯಲ್ಲಿ. ಆಗ ಇವರು ಭೀತಿ ಹುಟ್ಟಿಸುವ ಬೌಲರ್‌ ಆಗಿರಲಿಲ್ಲ. ಆದರೆ ಇವರ ಎಸೆತಗಳು ಪ್ರಚಂಡ ವೇಗ ಪಡೆದದ್ದು ಮಾತ್ರ ಸುಳ್ಳಲ್ಲ. 1932-33ರ ವಿವಾದಾತ್ಮಕ ಬಾಡಿಲೈನ್‌ ಸರಣಿಗಿಂತ ಮೊದಲು ಆಡಿದ 16 ಟೆಸ್ಟ್‌ಗಳಲ್ಲಿ ಲಾರ್‌ವುಡ್‌ ಕೆಡವಿದ್ದು 45 ವಿಕೆಟ್‌ ಮಾತ್ರ. ಜತೆಗೆ ತಂಡದ ಖಾಯಂ ಸದಸ್ಯನೂ ಆಗಿರಲಿಲ್ಲ. ಇಂಥ ಬೌಲರ್‌ ಓರ್ವ ನಾಯಕನ ಆಣತಿಯನ್ನು ಪಾಲಿಸಲು ಹೋಗಿ ವಿಲನ್‌ ಆದದ್ದು ಮಾತ್ರ ಕ್ರಿಕೆಟಿನ ದುರಂತವೇ ಆಗಿದೆ.

ಬಲಿಪಶುವಾದ ಬೌಲರ್‌:  1930ರಲ್ಲಿ ತನ್ನದೇ ನೆಲದಲ್ಲಿ ಅನುಭವಿಸಿದ 2-1 ಅಂತರದ ಆ್ಯಶಸ್‌ ಸರಣಿ ಸೋಲಿಗೆ ಹೇಗಾದರೂ ಮಾಡಿ ಆಸ್ಟ್ರೇಲಿಯದಲ್ಲೇ ಸೇಡು ತೀರಿಸಿಕೊಳ್ಳಬೇಕು ಎಂಬ ನಾಯಕ ಡಗ್ಲಾಸ್‌ ಜಾರ್ಡಿನ್‌ ಅವರ ಹುಚ್ಚು ಹಠಕ್ಕೆ ಬಲಿಪಶುವಾದವರೇ ಹೆರಾಲ್ಡ್‌ ಲಾರ್‌ವುಡ್‌!

Advertisement

ಕಾಂಗರೂಗಳನ್ನು ಸೋಲಿಸಬೇಗಾದರೆ ಅವರ ಬಲಾಡ್ಯ ಬ್ಯಾಟಿಂಗ್‌ ಸರದಿಯ ನಡು ಮುರಿಯಬೇಕು, ಇದಕ್ಕೆ ಆಟಗಾರರ ನಡುವನ್ನೇ ಮುರಿಯಬೇಕು. ಇಂಥದೊಂದು ದುಷ್ಟ ಆಲೋಚನೆ ಹೊತ್ತ ಡಗ್ಲಾಸ್‌ ಜಾರ್ಡಿನ್‌ ಪಡೆ 1933ರಲ್ಲಿ ಆಸ್ಟ್ರೇಲಿಯಕ್ಕೆ ಬಂದಿಳಿದಿತ್ತು. ಹಿಂದಿನ ಆ್ಯಶಸ್‌ ಸರಣಿಯಲ್ಲಿ 139.14ರ ಸರಾಸರಿಯಲ್ಲಿ 974 ರನ್‌ ಸೂರೆಗೈದ ಡಾನ್‌ ಬ್ರಾಡ್‌ಮನ್‌ ಅವರನ್ನು ನಿಯಂತ್ರಿಸುವುದು ಆಂಗ್ಲರ ಮೊದಲ ಗುರಿ ಆಗಿತ್ತು. ಇದಕ್ಕಾಗಿ ಕ್ರೀಡಾಸ್ಫೂರ್ತಿಯನ್ನೇ ಮರೆಯಲು ಅವರು ಸಿದ್ಧರಾಗಿ ಬಂದಿದ್ದರು!

 ಕಪ್ತಾನನ ಕುಟಿಲ ಯೋಜನೆ: ಡಗ್ಲಾಸ್‌ ಜಾರ್ಡಿನ್‌ ಬಳಿ ಇದ್ದ ಅಸ್ತ್ರವೆಂದರೆ ಹೆರಾಲ್ಡ್‌ ಲಾರ್‌ವುಡ್‌. ಆದರೆ ಈ ಸರಣಿಗಾಗಿ ಲಾರ್‌ವುಡ್‌ ಆಯ್ಕೆ ಆಗಿರಲಿಲ್ಲ. ಆದರೆ ಆಯ್ಕೆಗಾರರ ಮೇಲೆ ಒತ್ತಡ ಹೇರಿದ ಜಾರ್ಡಿನ್‌, ಈ ಘಾತಕ ವೇಗಿಯನ್ನು ತಂಡಕ್ಕೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು! ಹೊಟೇಲಿನ ಕೋಣೆಯಲ್ಲಿ ವಿಶೇಷ ಭೋಜನ ಕೂಟವೊಂದನ್ನು ಏರ್ಪಡಿಸಿದ ಜಾರ್ಡಿನ್‌, ಲಾರ್‌ವುಡ್‌ಗೆ ತನ್ನ ಕುತಂತ್ರಗಳನ್ನೆಲ್ಲ ವಿವರಿಸಿದ್ದರು.

ಬ್ಯಾಟ್ಸ್‌ಮನ್‌ಗಳ ಮೈಯನ್ನೇ ಗುರಿಯಾಗಿಸಿಕೊಂಡು ಅಪಾಯಕಾರಿ ಶಾರ್ಟ್‌ಪಿಚ್‌ ಎಸೆತಗಳನ್ನು ಎಸೆಯುವುದು ಈ ಕುಟಿಲ ಯೋಜನೆಯಾಗಿತ್ತು. ಬ್ಯಾಟಿನಿಂದ ಈ ಎಸೆತಗಳನ್ನು ಎದುರಿಸಲು ಸಾಧ್ಯವೇ ಆಗಬಾರದಿತ್ತು…

ಅಡಿಲೇಡ್‌ನ‌ಲ್ಲಿ ನಡೆದ 4ನೇ ಟೆಸ್ಟ್‌ ಪಂದ್ಯದಲ್ಲಿ ಲಾರ್‌ವುಡ್‌ ಒಲ್ಲದ ಮನಸ್ಸಿನಿಂದಲೇ ಇಂಥ ಅಪಾಯಕಾರಿ ಎಸೆತಗಳಿಗೆ ಮುಂದಾಗಬೇಕಾಯಿತು. ಆಗ ವುಡ್‌ಫೋರ್ಡ್‌, ಓಲ್ಡ್‌ಫೀಲ್ಡ್‌ ಮೊದಲಾದ ಅಗ್ರ ಕ್ರಮಾಂಕದ ಆಸೀಸ್‌ ಆಟಗಾರರು ಮೈಗೆ ಹೊಡೆತ ತಿಂದು ವಾಪಸಾಗಬೇಕಾಯಿತು.

ಮುಂದಿನೆರಡು ಟೆಸ್ಟ್‌ಗಳಲ್ಲೂ ಈ ಭಯಾನಕ ಬೌಲಿಂಗ್‌ ಪುನರಾವರ್ತನೆಗೊಂಡಿತು. ಆಸೀಸ್‌ ಆಟಗಾರರೆಲ್ಲ ಪೆಟ್ಟು ತಿಂದು ಕ್ರೀಸ್‌ ಬಿಡತೊಡಗಿದರು. ಜಾರ್ಡಿನ್‌ ಯೋಜನೆ ಅತ್ಯಂತ ಯಶಸ್ವಿಯಾಗಿತ್ತು. ಇಂಗ್ಲೆಂಡ್‌ 4-1 ಅಂತರದಿಂದ ಸರಣಿ ವಶಪಡಿಸಿಕೊಂಡು ಬೀಗಿತು. ಆದರೆ ಲಾರ್‌ವುಡ್‌ ಭವಿಷ್ಯ ಮಾತ್ರ ಮೂರಾಬಟ್ಟೆಯಾಯಿತು. ಅವರು ಇಂಗ್ಲೆಂಡ್‌ ಅಭಿಮಾನಿಗಳ ಪಾಲಿಗೂ ಕ್ರಿಮಿನಲ್‌ ರೀತಿಯಲ್ಲಿ ಕಂಡರು. ಬೆದರಿಕೆಯ ಕರೆಗಳ ಜತೆಗೆ ಮನೆ ಮೇಲೆ ಕಲ್ಲುಗಳನ್ನೂ ತೂರಲಾಯಿತು. ಮುಂದಿನ ವರ್ಷ ಆಸ್ಟ್ರೇಲಿಯ ತಂಡದ ಆಗಮನವಾದಗ ಇವರನ್ನು ಕೇಳುವವರೇ ಇರಲಿಲ್ಲ!

ಅಂದಿನ ಘಟನೆ ಕ್ಷಮೆಯಾಚಿಸಿ ಲಿಖೀತ ಹೇಳಿಕೆ ನೀಡುವಂತೆ ಇಂಗ್ಲೆಂಡ್‌ ಆಯ್ಕೆ ಸಮಿತಿ ಲಾರ್‌ವುಡ್‌ಗೆ ಸೂಚಿಸಿತು. ಆದರೆ ಇದರಲ್ಲಿ ತನ್ನ ತಪ್ಪೇನೂ ಇಲ್ಲ, ನಾಯಕ ಹೇಳಿದ ಕೆಲಸವನ್ನು ನಾನು ನಿರ್ವಹಿಸಿದ್ದೇನೆ, ಆತನಿಂದಲೇ ಕ್ಷಮೆ ಕೇಳಿ ಎಂದು ಮಾರುತ್ತರ ನೀಡಿದರು.

ಆಸ್ಟ್ರೇಲಿಯದಲ್ಲಿ ವಾಸ್ತವ್ಯ: 1950ರಲ್ಲಿ ಇಂಗ್ಲೆಂಡ್‌ ತೊರೆದ ಲಾರ್‌ವುಡ್‌ ಕುಟುಂಬ ಸಮೇತರಾಗಿ ಆಸ್ಟ್ರೇಲಿಯಕ್ಕೆ ಹೋಗಿ ನೆಲೆ ನಿಂತದ್ದು ಅಚ್ಚರಿಯಾಗಿ ಕಂಡಿತು. ಆದರೆ ಆಸೀಸ್‌ ಜನತೆ ಮಾತ್ರ ಇವರನ್ನು ಖಳನಂತೆ ಕಾಣಲಿಲ್ಲ. ಲೇಖಕ ಕೆವಿನ್‌ ಪರ್ಕಿಂಗ್ಸ್‌ ಈ ಆಂಗ್ಲ ಕ್ರಿಕೆಟಿಗನ ಆತ್ಮಚರಿತ್ರೆ ಬರೆದದ್ದೇ ಇದಕ್ಕೆ ಸಾಕ್ಷಿ.

1993ರಲ್ಲಿ ಬ್ರಿಟನ್‌ ಮಹಾರಾಣಿ ಲಾರ್‌ವುಡ್‌ಗೆ “ಮೆಂಬರ್‌ ಆಫ್‌ ಬ್ರಿಟಿಷ್‌ ಎಂಪಾಯರ್‌’ ಪ್ರಶಸ್ತಿ ನೀಡಿ ತನ್ನ ಅಭಿಮಾನವನ್ನು ತೋರಲೆತ್ನಿಸಿತು. ಆದರೆ ಆಗಲೇ ಲಾರ್‌ವುಡ್‌ ನ್ಯುಮೋನಿಯಾದಿಂದ ಹಾಸಿಗೆ ಹಿಡಿದಿದ್ದರು. 1995ರಲ್ಲಿ ವಿಲನ್‌ ಕಳಂಕವನ್ನು ಮೆತ್ತಿಕೊಂಡೇ ಇಹಲೋಕದ ಇನ್ನಿಂಗ್ಸ್‌ ಮುಗಿಸಿದರು.

Advertisement

Udayavani is now on Telegram. Click here to join our channel and stay updated with the latest news.