ಕೋಟ: ಬೈಕ್‌ನಲ್ಲಿ ಅಪರಿಚಿತ ನಾಲ್ವರು ಯುವಕರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಾಯಕಾರಿಯಾಗಿ ಸವಾರಿ ಮಾಡುತ್ತಾ ತಪಾಸಣೆ ನಡೆಸಲು ಮುಂದಾದ ಪೊಲೀಸರ ಮೇಲೆ ಬೈಕ್ ಹತ್ತಿಸಲು ಯತ್ನಿಸಿದ ಘಟನೆ ಸಾಲಿಗ್ರಾಮದಲ್ಲಿ ಮೇ 24ರಂದು ಸಂಭವಿಸಿದ್ದು, ಈ ಬಗ್ಗೆ ಕೋಟ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೋಟ ಠಾಣೆಯ ಕ್ರೈಂ ವಿಭಾಗದ ಎಸ್‌ಐ ನರೇಂದ್ರ ಅವರು ಸಂಜೆ ಸಾಲಿಗ್ರಾಮ ಗಣೇಶ್ ಗ್ರ್ಯಾಂಡ್ ಹೊಟೇಲ್ ಬಳಿ ಹೆದ್ದಾರಿಯಲ್ಲಿ ಸಿಬಂದಿಯೊಂದಿಗೆ ವಾಹನ ತಪಾಸಣೆ ನಡೆಸುತ್ತಿದ್ದಾಗ ಉಡುಪಿ ಕಡೆಯಿಂದ ಕುಂದಾಪುರದ ಕಡೆಗೆ ಒಂದೇ ಬೈಕ್‌ನಲ್ಲಿ ನಾಲ್ವರು ಸವಾರಿ ಮಾಡಿಕೊಂಡು ಅತೀ ವೇಗವಾಗಿ ಬಂದಿದ್ದು, ಪೊಲೀಸರು ನಿಲ್ಲಿಸುವ ಸಂಜ್ಞೆ ಮಾಡುತ್ತಿದ್ದಂತೆ ವೇಗ ಹೆಚ್ಚಿಸಿ ಪೋಲೀಸರ ಮೈ ಮೇಲೆರಗಿ ಬಂದಂತೆ ಚಲಾಯಿಸಿಕೊಂಡು ಪರಾರಿಯಾಗಿದ್ದರು. ಘಟನೆಯಲ್ಲಿ ಕೂದಲೆಳೆಯ ಅಂತರದಿಂದ ಪೊಲೀಸರು ಪಾರಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಕೆ.ಎ. 20 ವಿ. 9992 ವಾಹನದ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗೆ ಶೋಧ ಕಾರ್ಯ ನಡೆಸುತ್ತಿದ್ದಾರೆ.