Advertisement

Charmadi ಹೆದ್ದಾರಿ ಅವ್ಯವಸ್ಥೆ: ಕೆಸರಿನಲ್ಲಿ ಹುದುಗಿದ ಬಸ್‌, ಲಾರಿ

11:30 PM Jul 19, 2024 | Team Udayavani |

ಬೆಳ್ತಂಗಡಿ: ಮುಂಜಾನೆಯಿಂದ ಬೆಳ್ತಂಗಡಿ ತಾಲೂಕಿನಾದ್ಯಂತ ಅಬ್ಬರಿಸಿದ ಮಳೆಯಿಂದ ನದಿ ನೀರಿನ ಮಟ್ಟ ಏರಿಕೆ ಒಂದೆಡೆಯಾದರೆ, ಬೆಂಗಳೂರು ಸಂಪರ್ಕಿಸುವ ಏಕೈಕ ಮಾರ್ಗ ಚಾರ್ಮಾಡಿಯಲ್ಲಿ ಟ್ರಾಫಿಕ್‌ ದಟ್ಟಣೆ ಉಂಟಾಯಿತು.

Advertisement

ಪ್ರಸ್ತುತ ರಾಜ್ಯದ ನಾನಾ ಭಾಗಕ್ಕೆ ಹೆಚ್ಚಿನ ವಾಹನಗಳು ಚಾರ್ಮಾಡಿ ಮೂಲಕ ಸಂಚರಿಸುತ್ತಿರುವ ಕಾರಣ ಬೆಳ್ತಂಗಡಿ, ಉಜಿರೆ, ಮುಂಡಾಜೆ, ನಿಡಿಗಲ್‌ ಕಕ್ಕಿಂಜೆ, ಚಾರ್ಮಾಡಿ ಮೊದಲಾದ ಭಾಗಗಳಲ್ಲಿ ಶುಕ್ರವಾರ ಟ್ರಾಫಿಕ್‌ ಜಾಮ್‌ ಕಂಡು ಬಂತು. ಹೆದ್ದಾರಿ ಅಗಲಗೊಳಿಸುವ ಕಾಮಗಾರಿಗಾಗಿ ಅಗೆದು ಕೆಸರಿನ ಪ್ರಪಾತವೇ ಸೃಷ್ಟಿಯಾದ ಪರಿಣಾಮ ಹಲವಾರು ವಾಹನಗಳು ಕೆಸರಿನಲ್ಲಿ ಹೂತು ಹೋಗಿ ನಿಡಿಗಲ್‌, ಮುಂಡಾಜೆಗಳಲ್ಲಿ ಹಲವು ಕಿ.ಮೀ. ದೂರದವರೆಗೂ ವಾಹನಗಳ ಸರದಿ ಕಂಡುಬಂತು.

ಮುಂಜಾನೆ 5.40ರ ಸುಮಾರಿಗೆ ಖಾಸಗಿ ಬಸ್ಸೊಂದು ಕೆಸರಿನಲ್ಲಿ ಹುದುಗಿ 2 ತಾಸು ಟ್ರಾಫಿಕ್‌ ಸಮಸ್ಯೆ ಉಂಟಾಯಿತು. ನಿರಂತರ ಮಳೆ ನಡುವೆ ವಾಹನಗಳ ದಟ್ಟಣೆಯಿಂದ ರಸ್ತೆ ಇನ್ನಷ್ಟು ಹದಗೆಟ್ಟಿತು. ಮುಂಡಾಜೆಯಲ್ಲಿ ರಸ್ತೆಯಲ್ಲಿ ಬೃಹತ್‌ ಗಾತ್ರದ ಹೊಂಡ ನಿರ್ಮಾಣವಾಗಿ ವಾಹನ ಸವಾರರು ಸಂಕಷ್ಟ ಅನುಭವಿಸಿದರು. ನಿಡಿಗಲ್‌ ಬಳಿ ಮತ್ತೆ ಮಧ್ಯಾಹ್ನ ಲಾರಿಯೊಂದು ಕೆಸರಿನಲ್ಲಿ ಹೂತು ಹೋಗಿ ತೆರವು ಮಾಡಲಾಗದೆ ಒದ್ದಾಟ ನಡೆಸಿತು.

ತಹಶೀಲ್ದಾರ್‌, ಪೊಲೀಸ್‌ ತಂಡ ಭೇಟಿ
ಸ್ಥಳಕ್ಕೆ ಬೆಳ್ತಂಗಡಿ ಸಂಚಾರ ಪೊಲೀಸ್‌ ಉಪನಿರೀಕ್ಷಕ ಅರ್ಜುನ್‌ ಸಹಿತ ಸಿಬಂದಿ ಸುಗಮ ಸಂಚಾರಕ್ಕೆ ಸಹಕರಿಸಿದರು. ಸಂಜೆ ತಹಶೀಲ್ದಾರ್‌ ಪೃಥ್ವಿ ಸಾನಿಕಮ್‌, ಪೊಲೀಸ್‌ ಇನ್‌ಸ್ಪೆಕ್ಟರ್‌ ಸುಬ್ಟಾಪುರ್‌ ಮಠ ಭೇಟಿ ನೀಡಿದರು. ಗುತ್ತಿಗೆದಾರ ಕಂಪೆನಿ ವತಿಯಿಂದ ಹೊಂಡ ಹಾಗೂ ಕೆಸರು ಇರುವ ಸ್ಥಳಗಳಿಗೆ 4ರಿಂದ 5 ಲೋಡ್‌ ಜಲ್ಲಿ ಹಾಸಿ ಸಮತಟ್ಟು ಮಾಡಿಸಿದರು. ಕೆಸರಿನಿಂದ ಜಲ್ಲಿ ಹೆಚ್ಚಿನ ಪ್ರಯೋಜನ ತರಲಿಲ್ಲ.

ಚಾರ್ಮಾಡಿ ಘಾಟಿಯಲ್ಲಿ ರಾಜಹಂಸ ಬಸ್‌ ಸಂಚಾರಕ್ಕೆ ನಿರ್ಬಂಧವಿದ್ದರೂ ಹಲವು ಬಸ್‌ಗಳು ಸಂಚರಿಸಿದವು. ಚಾರ್ಮಾಡಿಯಿಂದ ಬೆಳ್ತಂಗಡಿ ವರೆಗೂ ಭಾರಿ ವಾಹನ ಸಂದಣಿ ಕಂಡು ಬಂತು. ನೇತ್ರಾವತಿ ಮೃತ್ಯುಂಜಯ, ಫಲ್ಗುಣಿ ಕಪಿಲ ನದಿಗಳಲ್ಲಿ ನೀರಿನ ಮಟ್ಟ ಅಧಿಕವಾಗಿದ್ದು, ಸಂಜೆ ಮಳೆ ಕಡಿಮೆಯಾದ್ದರಿಂದ ಶಾಂತವಾಗಿ ಹರಿಯಿತು. ಭೂಕುಸಿತ ಬಂದಾರು ಗ್ರಾಮದ ಕುಂಟಾಲಪಲ್ಕೆ, ನೆರಿಯ ಗ್ರಾಮದ ನೆಕ್ಕರೆ, ಕಾಜೂರು ನೆಲ್ಲಿಗುಡ್ಡೆ, ಶಿರ್ಲಾಲು, ಮಿತ್ತಬಾಗಿಲು ಗ್ರಾಮದಲ್ಲಿ ಭೂ ಕುಸಿತವಾಗಿದೆ. ತಗ್ಗುಪ್ರದೇಶದ ಕೃಷಿ ಭೂಮಿಗೆ ನೀರು ನುಗ್ಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next