Advertisement

ಕೆರೆಗೆ ಕುತ್ತು ತಂದಿಟ್ಟ ಗಣಿಗಾರಿಕೆ

05:05 PM Jun 08, 2018 | |

ಚಿತ್ರದುರ್ಗ: ಹತ್ತನೇ ಶತಮಾನದಲ್ಲಿ ನಿರ್ಮಿಸಲಾಗಿರುವ ತಾಲೂಕಿನ ಭೀಮಸಮುದ್ರ ಕೆರೆ, ಗಣಿಗಾರಿಕೆಯಿಂದ ನಲುಗಿ ಹೋಗಿದೆ. ಅಭಿವೃದ್ಧಿ ನೆಪದಲ್ಲಿ ನಡೆಯುತ್ತಿರುವ ಅದಿರು ಗಣಿಗಾರಿಕೆ ಇಡೀ ಕೆರೆಯನ್ನು ನುಂಗಿ ಹಾಕುತ್ತಿದೆ.

Advertisement

ಭೀಮಸಮುದ್ರದ ಸುತ್ತ ಮುತ್ತಲಿನ ಗುಡ್ಡ, ಬೆಟ್ಟ, ಅರಣ್ಯ ಪ್ರದೇಶದಲ್ಲಿ ನಡೆಯುತ್ತಿರುವ ನಿರಂತರ ಗಣಿಗಾರಿಕೆಯಿಂದಾಗಿ ಸಾಕಷ್ಟು ಗಣಿ ತ್ಯಾಜ್ಯ ಮತ್ತು ಹೂಳು ತುಂಬಿದೆ. ಮಳೆ ನೀರು ಕೆರೆ ಸೇರದಂತಾಗಿ ರೈತಾಪಿ ವರ್ಗ ಕಣ್ಣೀರಲ್ಲಿ ಕೈತೊಳೆಯುತ್ತಿದೆ. 

ಭೀಮಸಮುದ್ರ ಕೆರೆ ಅತ್ಯಂತ ಪುರಾತನ ಕಾಲದ್ದು ಎಂದು ಹೇಳಲಾಗುತ್ತಿದೆ. ಕೆರೆಯ ಸಮೀಪ ದೊರೆತ ಶಾಸನದ ಪ್ರಕಾರ ಕ್ರಿಶ 1066ರಲ್ಲಿ ಈ ಬೃಹತ್‌ ಕೆರೆಯನ್ನು ನಿರ್ಮಿಸಲಾಗಿದೆ. ಭೀಮಸಮುದ್ರ ಕೆರೆಯ ಒಟ್ಟು ವಿಸ್ತೀರ್ಣ 2150 ಎಕರೆ ಇದ್ದು ಅತ್ಯಂತ ವಿಶಾಲವಾದ ಕೆರೆ ಇದಾಗಿದೆ. ಕೆರೆಯ ನೀರಿನ ಒಟ್ಟು ಸಂಗ್ರಹಣಾ ಸಾಮರ್ಥ್ಯ 0.80
ಟಿಎಂಸಿ. ಕೆರೆಗೆ ನೀರು ಭರ್ತಿಯಾದಲ್ಲಿ 12 ಹಳ್ಳಿಗಳ 3050 ಎಕರೆ ಪ್ರದೇಶಕ್ಕೆ ಹತ್ತು ಕಾಲುವೆಗಳ ಮೂಲಕ ನೀರು ಪೂರೈಕೆಯಾಗುತ್ತದೆ. ಈ ಕೆರೆಯ ನೀರಿನ ಸಹಾಯದಿಂದ ಇಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. 

ಭೀಮಸಮುದ್ರ ಕೆರೆಗೆ ಈ ಮೊದಲು “ಪಿರಿಯ ಕೆರೆ’ ಅಂದರೆ ದೊಡ್ಡ ಕೆರೆ ಎಂದು ಕರೆಯಲಾಗುತ್ತಿತ್ತು. ಸದಾ ನೀರಿನ ಕೊರತೆ ಅನುಭವಿಸುತ್ತಿದ್ದರಿಂದ ವಿಜಯನಗರ ಅರಸರ ಕಾಲದಲ್ಲಿ ನಿರಂತರವಾಗಿ ನೀರಿನ ಹರಿವು ಕಲ್ಪಿಸಲು ರಾಮಬಾಣ ಕಾಲುವೆ ನಿರ್ಮಾಣ ಮಾಡಿ ನೀರಿನ ಪೂರೈಕೆಗೆ ಒತ್ತು ನೀಡಲಾಗಿತ್ತು. ಬಿಚ್ಚುಗತ್ತಿ ಭರಮಣ್ಣ ನಾಯಕರ ಕಾಲದ ಆಳ್ವಿಕೆಯಲ್ಲಿ ಅಂದರೆ 16-17ನೇ ಶತಮಾನದಲ್ಲಿ ಭೀಮಸಮುದ್ರ ಕೆರೆಗೆ ಕಾಯಕಲ್ಪ ನೀಡಿದ್ದರು. ಕೆರೆ
ಸಮೀಪ ಭೀಮೇಶ್ವರ ದೇವಸ್ಥಾನವನ್ನು ನಿರ್ಮಾಣ ಮಾಡಿದ್ದಾರೆ.

ಕೆರೆಯಲ್ಲಿ ತುಂಬಿದೆ ಹೂಳು: ಪುರಾತನ ಕೆರೆಗಳಲ್ಲಿ ಒಂದಾದ ಭೀಮಸಮುದ್ರ ಕೆರೆ ಇನ್ನೂ ಅಭಿವೃದ್ಧಿ ಕಂಡಿಲ್ಲ. 21 ಅಡಿ ಆಳದ ಕೆರೆಯಲ್ಲಿ 9 ಅಡಿ ಹೂಳು ತುಂಬಿದ್ದು 12 ಮಾತ್ರ ಆಳ ಇದೆ. ಈ ಆಳದ ಲೆಕ್ಕಾಚಾರ ನೋಡಿದರೆ 0.50 ಟಿಎಂಸಿ ನೀರು ಶೇಖರಣೆಯಾಗಲಿದೆ. ಆದ್ದರಿಂದ ಹೂಳೆತ್ತಿಸಿ ಗಿಡ ಮರ ತೆರವು ಮಾಡಬೇಕಿದೆ. 

Advertisement

ಕೆರೆಯ ಅಂಗಳವನ್ನು ಬಲಿಷ್ಠರು ಒತ್ತುವರಿ ಮಾಡಿ ಅಡಿಕೆ ತೋಟವನ್ನಾಗಿಸುತ್ತಿದ್ದಾರೆ. ಆದರೂ ಜಿಲ್ಲಾಡಳಿತವಾಗಲಿ, ಸಣ್ಣ ನೀರಾವರಿ ಇಲಾಖೆಯಾಗಲಿ ಗಮನ ನೀಡಿದಂತೆ ಕಾಣುತ್ತಿಲ್ಲ. ಇದರಿಂದಾಗಿ ಒತ್ತುವರಿ ಕಾರ್ಯ ಎಗ್ಗಿಲ್ಲದೆ ಸಾಗಿದೆ ಎಂಬುದು ಭೀಮೇಶ್ವರ ನೀರು ಬಳಕೆದಾರರ ಸಹಕಾರ ಸಂಘದ ಆರೋಪ. 

ಸುಮಾರು 2150 ಎಕರೆಗೂ ಹೆಚ್ಚು ವಿಸ್ತೀರ್ಣದ ಭೀಮಸಮುದ್ರ ಕೆರೆಗೆ 600 ವರ್ಷಗಳ ಹಿಂದೆಯೆ ರಾಮಬಾಣ ಎನ್ನುವ ಪೂರಕ ನಾಲೆ ನಿರ್ಮಿಸಿ ನೀರು ಪೂರೈಕೆ ಮಾಡಲಾಗುತ್ತಿತ್ತು. ಈ ರಾಮಬಾಣ ನಾಲೆ ನಿರ್ಮಾಣವಾದ ನಂತರ ನಾಲ್ಕೈದು ಸಲ ಕೆರೆ ಕೋಡಿ ಬಿದ್ದು ನೀರು ಕಾತ್ರಾಳ್‌ ಕೆರೆಯನ್ನು ಸೇರುತ್ತಿತ್ತು.

ಹೊಳಲ್ಕೆರೆ ತಾಲೂಕಿನ ಎಚ್‌.ಡಿ. ಪುರ ಸಮೀಪದ ಪುರದ ನಲ್ಲಿಕಟ್ಟೆ ಗ್ರಾಮದ ಗುಡ್ಡ ಬೆಟ್ಟಗಳಲ್ಲಿನ ಮಳೆ ನೀರನ್ನು ರಾಮಬಾಣ ಕಾಲುವೆ ಮೂಲಕ ಅಮೃತಾಪುರದ 12 ಕಣ್ಣಿನ ಸೇತುವೆ ಮಾರ್ಗವಾಗಿ ತೊಡರನಾಳ್‌, ನುಲೇನೂರು ಹಳ್ಳಿಗಳ ದೊಡ್ಡ ಹಳ್ಳದ ಮೂಲಕ ಭೀಮಸಮುದ್ರ ಕೆರೆಗೆ ಹರಿಸಲಾಗುತ್ತಿತ್ತು.

ಆದರೆ ಕೆರೆಯ ಮೇಲ್ಭಾಗದಲ್ಲಿ 20 ಕಡೆ ಚೆಕ್‌ಡ್ಯಾಂ ನಿರ್ಮಿಸಿರುವುದರಿಂದ ಈಗ ಅಲ್ಲಿಂದಲೂ ನೀರು ಹರಿದು ಬರುತ್ತಿಲ್ಲ. ಮಾಜಿ ಸಚಿವ ಎಚ್‌. ಆಂಜನೇಯ ಅವರ ಇಚ್ಛಾಶಕ್ತಿಯಿಂದಾಗಿ 420 ಕೋಟಿ ರೂ. ಅನುದಾನದಲ್ಲಿ ಸಾಸಿವೆಹಳ್ಳಿ ಏತ ನೀರಾವರಿ ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಈ ಯೋಜನೆ ಅಡಿ ತುಂಗಭದ್ರಾ ನೀರು ಕೆರೆಗೆ ಹರಿದು ಬರಲಿದ್ದು, ಆ ವೇಳೆಗೆ ಕೆರೆ ದುರಸ್ತಿ ಮಾಡಿಸಲು ಸಂಬಂಧಿಸಿದವರು ಇಚ್ಛಾಶಕ್ತಿ ತೋರಬೇಕಿದೆ

200 ಎಕರೆಯಷ್ಟು ಕೆರೆ ಒತ್ತುವರಿ ಮಾಡಲಾಗಿದೆ. ಈ ಬಗ್ಗೆ ದೂರು ನೀಡಿದ್ದರೂ ತೆರವು ಕಾರ್ಯ ಮಾಡುತ್ತಿಲ್ಲ. ಕಳೆದ 25 ವರ್ಷಗಳಿಂದ ಕೆರೆಗೆ ನೀರು ಬಂದಿಲ್ಲ. ಗಣಿಗಾರಿಕೆಯಿಂದಾಗಿ 9 ಅಡಿಯಷ್ಟು ಹೂಳು ತಂಬಿದೆ. ಹೂಳೆತ್ತುವ ಕಾರ್ಯ, ಒತ್ತುವರಿ ತೆರವು ಕಾರ್ಯ ಮಾಡಬೇಕಿದೆ.  
ಚಂದ್ರಣ್ಣ, ಅಧ್ಯಕ್ಷರು, ಭೀಮೇಶ್ವರ ನೀರು ಬಳಕೆದಾರರ ಸಹಕಾರ ಸಂಘ.

ಹರಿಯಬ್ಬೆ ಹೆಂಜಾರಪ್ಪ

Advertisement

Udayavani is now on Telegram. Click here to join our channel and stay updated with the latest news.

Next