Advertisement

ಅಪಾಯದ ಅಂಚಿನಲ್ಲಿರುವ 47ವರ್ಷದ ಹಳೆಯ ಸೇತುವೆ

10:33 PM Aug 16, 2019 | Sriram |

ಉಡುಪಿ: ಅಂತಾರಾಜ್ಯ ಸಂಪರ್ಕ ರಸ್ತೆಯಾದ ರಾ.ಹೆ.66ರ ಉಡುಪಿ- ಕುಂದಾಪುರ ಮಾರ್ಗದ ಉಪ್ಪೂರು-ಹೇರೂರು ಸೇತುವೆ ಮೇಲ್ಭಾಗದಲ್ಲಿ ಬಿರುಕು ಹಾಗೂ ಅರ್ಧ ಅಡಿಗಳಷ್ಟು ಗಾತ್ರದ ಹೊಂಡ ಕಾಣಿಸಿಕೊಂಡಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

Advertisement

47 ವರ್ಷದ ಸೇತುವೆ
ಉಪ್ಪೂರು- ಹೇರೂರು ನಡುವೆ 1972ರಲ್ಲಿ ಸೇತುವೆಯನ್ನು ನಿರ್ಮಿಸಲಾಗಿತ್ತು. 47 ವರ್ಷ ಹಳೆಯ ಸೇತುವೆಯಾಗಿದೆ. ಇದೀಗ ಸುಮಾರು 200 ಮೀ. ಉದ್ದದ ಸೇತುವೆಯ ಮೇಲ್ಭಾಗ ಮಧ್ಯದಿಂದ ನೇರವಾಗಿ 150 ಮೀ. ವರೆಗೆ ಅರ್ಧ ಅಡಿ ಆಳ ಹಾಗೂ 8 ರಿಂದ 20 ಸೆ.ಮೀ. ಅಗಲದಲ್ಲಿ ಹೊಂಡಗಳು ನಿರ್ಮಾಣವಾಗಿದೆ.

ಸೇತುವೆ 50 ವರ್ಷ ಆಯುಷ್ಯ
ಸೇತುವೆಗೆ ಸುಮಾರು 50 ವರ್ಷ ಕಾಲ ಆಯುಷ್ಯವಿದೆ ಎಂದು ತಂತ್ರಜ್ಞರು ಅಭಿಪ್ರಾಯಪಡುತ್ತಾರೆ. ಆದರ ಮೇಲೆ ಓಡಾಡುವ ವಾಹನಗಳ ಮೇಲೆ ಅದರ ಆಯುಷ್ಯವನ್ನು ನಿರ್ಧಾರ ಮಾಡಬಹುದಾಗಿದೆ. ಒಂದು ವೇಳೆ ಸತತವಾಗಿ ಭಾರೀ ತೂಕದ ವಾಹನಗಳು ಹಳೆಯ ಸೇತುವೆ ಮೇಲೆ ಓಡಾಡಿದ್ದರೆ ಸೇತುವೆ ಶಿಥಿಲವಾಗುವ ಸಾಧ್ಯತೆ ಇರುತ್ತದೆ.

ಧೃಢತೆ ಪರೀಕ್ಷೆಯಲ್ಲಿ ಪಾಸ್‌
ಉಪ್ಪೂರು -ಹೇರೂರು ಸೇತುವೆ ಮೂರು ವರ್ಷಗಳ ಹಿಂದೆ ಒಂದು ತಿಂಗಳ ಕಾಲ ನಡೆಸಿದ ದೃಢತೆ ಪರೀಕ್ಷೆಯಲ್ಲಿ ಪಾಸ್‌ ಆಗಿದೆ. ಈಗ ತೋರುತ್ತಿರುವುದು ಮೌಲ್ಯಮಾಪನದ ದೋಷವೇ?

ಸೇತುವೆ ಅಪಾಯ ಸ್ಥಿತಿ
ಸೇತುವೆಯ ಡಾಮರು ಹಾಸಿನ ಮೇಲೆ ಮೂರು ವರ್ಷದ ಹಿಂದೆ ಕಾಂಕ್ರೀಟ್‌ ಹಾಕಲಾಗಿದೆ. ಇದೀಗ ಕಳೆದ 5 ದಿನಗಳಿಂದ ಸುರಿದ ನಿರಂತರ ಮಳೆಯಿಂದಾಗಿ ಹಾಗೂ ಭಾರೀ ಪ್ರಮಾಣದಲ್ಲಿ ವಾಹನ ಸಂಚರಿಸಿರುವುದರ ಪರಿಣಾಮವಾಗಿ ಹೊಂಡಗಳು ನಿರ್ಮಾಣವಾಗಿದೆ. ಈ ಹೊಂಡಗಳಿಂದ ನೀರು ಸೇತುವೆಯ ಕೆಳಭಾಗಕ್ಕೆ ಸೋರಿಕೆಯಾಗಿ ಸೇತುವೆಗೆ ಅಪಾಯವಾಗುವ ಸಾಧ್ಯತೆಯಿದೆ.

Advertisement

ಸುಗಮ ಸಂಚಾರಕ್ಕೆ ಅಡಿ
ಸೇತುವೆ ಮೇಲ್ಭಾಗದ ಹೊಂಡದಲ್ಲಿ ನೀರು ತುಂಬಿರುವುದರಿಂದ ಸುಗಮ ಸಂಚಾರ ಸಾಧ್ಯವಾಗುತ್ತಿಲ್ಲ. ದ್ವಿಚಕ್ರ, ತ್ರಿಚಕ್ರ ಕಿರು ವಾಹನ ಸವಾರರು ಪರದಾಡುತ್ತಿದ್ದಾರೆ. ಸೇತುವೆ ಹೊಂಡ ಮುಚ್ಚದೆ ಹೋದರೆ ಮುಂದಿನ ಮಳೆಗೆ ಇನ್ನಷ್ಟು ಹೊಂಡಗಳು ಸೃಷ್ಟಿಯಾಗಲಿದೆ. ಹಳೆಯ ಹೊಂಡಗಳ ಗಾತ್ರ ಹೆಚ್ಚಲಿದೆ.

ಸಂಚಾರ ದುಸ್ತರ
ರಾತ್ರಿ ಈ ಮಾರ್ಗದಲ್ಲಿ ಸಂಚರಿಸುವುದು ದುಸ್ತರ. ನಿತ್ಯ ಈ ಸೇತುವೆಯಲ್ಲಿ ಅಪಘಾತಗಳು ಸಂಭವಿಸುತ್ತಿದೆ.
-ರಾಜೇಶ್‌ ಶೇರಿಗಾರ್‌,
ಹೇರೂರು ನಿವಾಸಿ

ಎರಡು ದಿನದಲ್ಲಿ ದುರಸ್ತಿ
ಸೇತುವೆಯಲ್ಲಿ ಹೊಂಡಗಳನ್ನು ಸರಿಪಡಿಸುವಂತೆ ಗುತ್ತಿಗೆದಾರರಿಗೆ ಆದೇಶ ನೀಡಲಾಗಿದೆ. ಮುಂದಿನ 2 ದಿನದಲ್ಲಿ ಸೇತುವೆ ದುರಸ್ತಿ ಮಾಡಲಾಗುತ್ತದೆ ಎಂದು ರಾ.ಹೆ. ಪ್ರಾಧಿಕಾರ ಅಧಿಕಾರಿಗಳು ಭರವಸೆ ನೀಡಿದ್ದಾರೆ.

-ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next