Advertisement
ಈ ಮಧ್ಯೆ ತನ್ನನ್ನು ಪ್ರಮೋಶನ್ ಕಾರ್ಯಕ್ಕೆ ಬಳಸಿಕೊಳ್ಳುತ್ತಿಲ್ಲ ಮತ್ತು ಪೂಜಾ ಗಾಂಧಿಯನ್ನೇ ಚಿತ್ರತಂಡದವರು ಹೆಚ್ಚು ಪ್ರಮೋಟ್ ಮಾಡುತ್ತಿದ್ದಾರೆಂದು ಸಂಜನಾ ಎಲ್ಲೋ ಹೇಳಿಕೊಂಡಿದ್ದಾರೆ ಎಂಬ ಸುದ್ದಿಯೊಂದು ಹರಡಿಬಿಟ್ಟಿತು. ಈ ಮಾತು ಪೂಜಾ ಗಾಂಧಿ ಕಿವಿಗೂ ಬಿದ್ದಿದೆ. ಪೂಜಾ ಗಾಂಧಿ ಈ ಬಗ್ಗೆ ಸಂಜನಾ ಹೆಸರು ಹೇಳದೆಯೇ ಫೇಸ್‌ಬುಕ್‌ನಲ್ಲಿ ಈ ವಿವಾದದ ಬಗ್ಗೆ ಬರೆದುಕೊಂಡಿದ್ದಾರೆ. ಇತ್ತ ಕಡೆ ಸಂಜನಾ ಕೂಡಾ “ಉದಯವಾಣಿ’ ಜೊತೆ “2′ ಸಿನಿಮಾ ವಿವಾದದ ಬಗ್ಗೆ ಮಾತನಾಡಿದ್ದಾರೆ. ಅದು ಅವರವರ ಮಾತುಗಳಲ್ಲೇ …
ಪ್ರಮೋಶನ್‌ನಿಂದ ದೂರವಿಡಲು ನಾನು ಕಾರಣ ಎಂದು ನನ್ನ ವಿರುದ್ಧ ಸಿಟ್ಟಾಗಿದ್ದಾರೆನ್ನಲಾದ ಸಹಕಲಾವಿದರಿಗೆ ಕೆಲವು ವಿಷಯ ಸ್ಪಷ್ಟಪಡಿಸಲು ನಾನು ಬಯಸುತ್ತೇನೆ. ಮೊದಲನೆಯದಾಗಿ ಒಂದು ಸಿನಿಮಾದ ಪ್ರಮೋಶನ್‌ಗೆ ಯಾರು ಬರಬೇಕು, ಯಾರ ಫೋಟೋ ಬಳಸಬೇಕು, ಯಾರಿಂದ ಹೈಪ್ ಕ್ರಿಯೇಟ್ ಮಾಡಬೇಕೆಂದು ನಿರ್ಧರಿಸೋದು ಆಯಾ ಸಿನಿಮಾದ ನಿರ್ಮಾಪಕರು, ನಿರ್ದೇಶಕರು ಹಾಗೂ ವಿತರಕರು. ಹೀಗಿರುವಾಗ ಯಾರನ್ನಾದರೂ ಪ್ರಮೋಶನ್‌ನಲ್ಲಿ ಬಳಸಿ ಅಥವಾ ಬಳಸಿಕೊಳ್ಳಬೇಡಿ ಎಂದು ಹೇಳಲು ಹೇಗೆ ಸಾಧ್ಯ. ಇನ್ನು, “ದಂಡುಪಾಳ್ಯ-2′ ಚಿತ್ರದ ನಿರ್ಮಾಪಕರು, ನಿರ್ದೇಶಕರು ಅವರವರ ಕ್ಷೇತ್ರದಲ್ಲಿ ಪರಿಣಿತರು. ಸಿನಿಮಾಕ್ಕೆ ಪೂರಕವಾದ ನಿರ್ಧಾರವನ್ನು ತೆಗೆದುಕೊಳ್ಳುವ ಶಕ್ತಿ ಆ ಇಬ್ಬರಿಗೂ ಇದೆ. ಹೀಗಿರುವಾಗ ನಾನು ಹೇಗೆ ಶಿಫಾರಸು ಮಾಡಲಿ. ನಾನು ಮೂರೂರು ಸಿನಿಮಾಗಳನ್ನು ನಿರ್ಮಿಸುತ್ತಿದ್ದೇನೆ.
Related Articles
Advertisement
ಆ ಸಮಯದಲ್ಲಿ ಇತರ ಕೆಲಸಗಳನ್ನು ಮುಗಿಸಿಕೊಳ್ಳುತ್ತೇನೆ ಎಂದು “2′ ಚಿತ್ರದ ನಿರ್ಮಾಪಕರಿಗೆ ಹೇಳಿದ್ದೂ ಇದೆ. ಏಕೆಂದರೆ, ಅಷ್ಟೊಂದು ಟೈಟ್ ಶೆಡ್ನೂಲ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ. ಆದರೆ, ಚಿತ್ರತಂಡದ ಕರೆಯ ಮೇರೆಗೆ, ನನ್ನ ಸಿನಿಮಾ ಎಂಬ ಪ್ರೀತಿಯಿಂದ ನಾನು ಪ್ರಮೋಶನ್‌ನಲ್ಲಿ ಭಾಗವಹಿಸುತ್ತಿದ್ದೇನೆ. ನನಗೆ ಯಾರನ್ನೂ ತುಳಿದು ಮೇಲೆ ಬರುವ ಅಗತ್ಯವಿಲ್ಲ. ನಟ/ನಟಿಗೆ ಅಭದ್ರತೆ ಕಾಡುತ್ತಿರುವುದರಿಂದ ಈ ತರಹದ ಯೋಚನೆಗಳು ಬರಬಹುದು.
ಕೆಲವು ಜಾಗಕ್ಕೆ ಹೋಗದೇ ಇದ್ದರೆ ಮರ್ಯಾದೆ ಜಾಸ್ತಿ: ಸಂಜನಾಬೆಂಗಳೂರಿನಲ್ಲಿ “ದಂಡುಪಾಳ್ಯ-2′ ಚಿತ್ರದ ಪತ್ರಿಕಾಗೋಷ್ಠಿ ಇದ್ದಿದ್ದು ನನಗೆ ಗೊತ್ತೇ ಇರಲಿಲ್ಲ. ಕೆಲವು ಮಾಧ್ಯಮ ಸ್ನೇಹಿತರು ಫೋನ್ ಮಾಡಿದಾಗಷ್ಟೇ ನನಗೆ ಈ ತರಹದ ಒಂದು ಪತ್ರಿಕಾಗೋಷ್ಠಿ ಇದೆ ಎಂಬುದು ಗೊತ್ತಾಯಿತು. ಮರುದಿನ ಹೈದರಾಬಾದ್‌ನ ಪತ್ರಿಕಾಗೋಷ್ಠಿಗೆ ಚಿತ್ರತಂಡ ಕರೆಯಿತು. ಬೆಂಗಳೂರಿನ ಪತ್ರಿಕಾಗೋಷ್ಠಿಗೆ ಯಾಕೆ ಕರೆಯಲಿಲ್ಲ ಎಂದರೆ ಮುಂದಿನ ದಿನಗಳಲ್ಲಿ ನಿಮ್ಮನ್ನು ಪ್ರಮೋಶನ್‌ಗೆ ಬಳಸಿಕೊಳ್ಳುತ್ತೇನೆ ಎಂದಿತ್ತು. ಕೊನೆ ಗಳಿಗೆಯಲ್ಲಿ ಹೈದರಾಬಾದ್‌ಗೆ ಕರೆದಿದ್ದರಿಂದ ನನಗೆ ಹೋಗಲಾಗಲಿಲ್ಲ. ಕೆಲವು ಜಾಗಕ್ಕೆ ಹೋದರೆ ನಮ್ಮ ಮರ್ಯಾದೆ ಹೆಚ್ಚುತ್ತದೆ. ಇನ್ನು ಕೆಲವು ಕಡೆ ಹೋಗದೆ ಇದ್ದರೂ ಹೆಚ್ಚುತ್ತದೆ. ನನಗೆ ಯಾರ ಮೇಲೂ ಸಿಟ್ಟಿಲ್ಲ. ಅಷ್ಟಕ್ಕೂ ಪೂಜಾ ಗಾಂಧಿಯವರು ನನ್ನನ್ನು ಪ್ರಮೋಶನ್‌ನಿಂದ ಕೈ ಬಿಡಿ ಎನ್ನಲು ಯಾರು? ಅವರು ಆ ಸಿನಿಮಾದ ನಿರ್ಮಾಪಕರಲ್ಲ, ನಿರ್ದೇಶಕರಲ್ಲ ಅಥವಾ ನನ್ನನ್ನು ಎಡಿಟ್ ಮಾಡಲು ಎಡಿಟರ್ ಅಲ್ಲ. ಆದರೆ, ಫೇಸ್‌ಬುಕ್‌ನಲ್ಲಿ ಏನೋ ಇನ್‌ಡೈರೆಕ್ಟ್ ಆಗಿ ಬರೆದುಕೊಂಡಿದ್ದಾರೆಂಬ ಸುದ್ದಿ ಕೇಳಿದೆ. ನಾನು ಆ ಬಗ್ಗೆ ಏನೂ ಮಾತನಾಡೋದಿಲ್ಲ. ನನ್ನ ಕೈಯಲ್ಲಿ ಆರು ಸಿನಿಮಾಗಳಿವೆ. ನನಗೆ ಯಾವ ಅಭದ್ರತೆಯೂ ಕಾಡುತ್ತಿಲ್ಲ. ಕನ್ನಡ, ಮಲಯಾಳಂ, ತೆಲುಗು ಸಿನಿಮಾಗಳಲ್ಲಿ ಬಿಝಿಯಾಗಿದ್ದೇನೆ. ಈ ತಿಂಗಳು ತೆಲುಗು ಸಿನಿಮಾದ ಶೂಟಿಂಗ್‌ಗಾಗಿ ಅಮೆರಿಕಾಕ್ಕೆ ಹೋಗುತ್ತಿದ್ದೇನೆ. ನಾನು ಯಾರನ್ನೂ ದ್ವೇಷಿಸುವುದಿಲ್ಲ. ಯಾರ ಬಗ್ಗೆಯೂ ಕೋಪವಿಲ್ಲ. ನಾನು ಯೋಗ ಮಾಡುತ್ತಿದ್ದೇನೆ. ಯೋಗ ನಮ್ಮ ಚಿಂತನೆಗಳನ್ನು ಬದಲಿಸುತ್ತದೆ. ಹೆಚ್ಚು ಪ್ರೌಢವಾಗಿ ಯೋಚಿಸುವಂತೆ ಮಾಡುತ್ತದೆ. ಸಣ್ಣಪುಟ್ಟ ವಿವಾದಗಳಿಂದ, ಹುಡುಗಾಟದ ಹೇಳಿಕೆಗಳಿಂದ ಸಿನಿಮಾಕ್ಕೆ ತೊಂದರೆಯಾಗಬಾರದು. ನಿರ್ಮಾಪಕರು ಕಾಸು ಹಾಕಿರುತ್ತಾರೆ, ನಿರ್ದೇಶಕರು ಕನಸು ಕಂಡಿರುತ್ತಾರೆ. ಸಿನಿಮಾ ಗೆದ್ದರೆ ಅವೆಲ್ಲವೂ ಈಡೇರುತ್ತದೆ. “ದಂಡುಪಾಳ್ಯ-2′ ಯಶಸ್ವಿಯಾಗಬೇಕು. ಆ ಸಿನಿಮಾದಲ್ಲಿ ಕೆಲಸ ಮಾಡಿದ ಎಲ್ಲರಿಗೂ ಒಳ್ಳೆಯದಾಗಬೇಕು.