Advertisement

ಜಾಮೀನು ಕೊಡಿಸುವ ದಂಧೆಕೋರರು ಪೊಲೀಸ್‌ ಬಲೆಗೆ

11:39 AM Feb 01, 2017 | Team Udayavani |

ಬೆಂಗಳೂರು: ಕ್ರಿಮಿನಲ್‌ ಪ್ರಕರಣದ ಜೈಲು ಸೇರುವವರಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಜಾಮೀನು ನೀಡಿ ನ್ಯಾಯಾಲಯಗಳಿಗೆ ವಂಚಿಸುತ್ತಿದ್ದ ವಕೀಲ ಸೇರಿ 9 ಮಂದಿ ಜಾಲವನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

Advertisement

ಯಲಹಂಕ ನಿವಾಸಿ ಹರಿನಾಥ್‌ ರೆಡ್ಡಿ (27), ಈತನ ಪತ್ನಿ ಸುಧಾರಾಣಿ ಅಲಿಯಾಸ್‌ ಶೋಭರಾಣಿ (26), ಕುಮಾರಸ್ವಾಮಿ ಲೇಔಟ್‌ ನಿವಾಸಿ, ವಕೀಲ  ಎನ್‌.ಪಿ.ಪ್ರಸನ್ನ ಕುಮಾರ್‌(47), ನಾಗರಬಾವಿಯ ಜಿ.ವೆಂಕಟೇಶ್‌(51), ಕೆಂಗೇರಿ ಉಪನಗರದ ಶ್ರೀನಿವಾಸ್‌(45), ನಾಗದೇವನಹಳ್ಳಿ ಶಿವರಾಜ (38), ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಆಂಜನರೆಡ್ಡಿ(41), ಮೈಸೂರಿನ ಕೆ.ಆರ್‌.ನಗರದ ಹೆಚ್‌.ಎಸ್‌.ಕುಮಾರ್‌(28), ಮಳ್ಳವಳ್ಳಿಯ ಡಿ.ಕುಮಾರ್‌ (22)ಬಂಧಿತರು ಎಂದು ನಗರ ಪೊಲೀಸ್‌ ಆಯುಕ್ತ ಪ್ರವೀಣ್‌ ಸೂದ್‌ ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮೂಲತಃ ಆಂಧ್ರದ ಚಿತ್ತೂರು ಜಿಲ್ಲೆ ಗುರುಪಲ್ಲಿ ಗ್ರಾಮದ ಹರಿನಾಥ್‌ ರೆಡ್ಡಿ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ಬಂಧಿತರ ಬಳಿ ಇದ್ದ ನಕಲಿ ಗುರುತಿನಚೀಟಿ, ಆಧಾರ್‌ಕಾರ್ಡ್‌, ಪಹಣಿ ಮತ್ತು ಮ್ಯೂಟೇಷನ್‌ ಜಪ್ತಿ ಮಾಡಲಾಗಿದೆ. ಆರೋಪಿಗಳು ಬೆಂಗಳೂರು ನಗರದ ಕೆಳ ಹಂತದ ನ್ಯಾಯಾಲಯ ಹಾಗೂ ದೇವನಹಳ್ಳಿ, ಆನೇಕಲ್‌, ತುಮಕೂರು ಮತ್ತು ಮಧುಗಿರಿ ನ್ಯಾಯಾಲಯಗಳಲ್ಲಿ ಸುಮಾರು 500ಕ್ಕೂ ಹೆಚ್ಚು ಪ್ರಕರಣಗಳಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೊಲೆ, ದರೋಡೆ, ಸುಲಿಗೆ, ಕಳ್ಳತನ ಮತ್ತು ಇತರ ಅಪರಾಧ ಕೃತ್ಯಗಳ ಆರೋಪಿಗಳಿಗೆ ಶ್ಯೂರಿಟಿ ನೀಡಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಶ್ಯೂರಿಟಿ ನಾಯ್ಡು ಎಂಬ ಉಪನಾಮ:  ಪ್ರಕರಣದ ಪ್ರಮುಖ ಆರೋಪಿ ಹರಿನಾಥ್‌ ಜಯನಗರದ ಮೃತ ಡಿ.ನರಸಿಂಹಲು ನಾಯ್ಡು ಎಂಬುವರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಪಹಣಿ ಪಡೆದಿದ್ದ. ನಾಯ್ಡು ಅವರ ಹೆಸರಿನಲ್ಲಿ ಸಿಮ್‌ ಕಾರ್ಡ್‌ ಪಡೆದಿದ್ದ. ಮೊಬೈಲ್‌ನ ಟ್ರೂ ಕಾಲರ್‌ನಲ್ಲಿ ಶ್ಯೂರಿಟಿ ನಾಯ್ಡು ಎಂದೆ ಬರುತ್ತಿತ್ತು. ನಕಲಿ ಪಹಣ ಇನ್ನಿತರ ದಾಖಲೆ ನೀಡಿ ಆರೋಪಿಗಳಿಗೆ ಶ್ಯೂರಿಟಿ ನೀಡುತ್ತಿದ್ದ. ಗ್ರಾಹಕರ ಸೋಗಿನಲ್ಲಿ ಶ್ಯೂರಿಟಿ ನೀಡುವಂತೆ ಕೇಳಿ ಹರಿನಾಥ್‌ನನ್ನು ವಶಕ್ಕೆ ಪಡೆಯಲಾಯಿತು.

ಈತನ ವಿಚಾರಣೆ ಬಳಿಕ ಉಳಿದವರನ್ನು ಬಂಧಿಸಲಾಗಿದೆ ಎಂದು ಸಿಸಿಬಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದರು. ಜಾಮೀನಿಗೆ ಏಳೆಂಟು ತಿಂಗಳು ಗ್ಯಾಪ್‌: ಆರೋಪಿಗಳೆಲ್ಲರೂ, ಒಮ್ಮೆ ಜಾಮೀನು ನೀಡಿದರೆ ಬಳಿಕ ಏಳೆಂಟು ತಿಂಗಳ ವರೆಗೆ ಮತ್ತೆ ಜಾಮೀನು ನೀಡುತ್ತಿರಲಿಲ್ಲ. ಒಂದೊಮ್ಮೆ ನ್ಯಾಯಾಮೂರ್ತಿಗಳು ಬದಲಾದರೆ ಕೂಡಲೇ ಜಾಮೀನು ನೀಡುವ ಕೆಲಸಕ್ಕೆ ಕೈ ಹಾಕುತ್ತಿದ್ದರು. ತೆರೆದ ಹಾಲ್‌ನಲ್ಲಿ ಆರೋಪಿಗಳು ನ್ಯಾಯಾಮೂರ್ತಿಗಳ ಎದುರು ಶ್ಯೂರಿಟಿ ನೀಡುತ್ತಿದ್ದರು. 

Advertisement

ಶ್ಯೂರಿಟಿಗೆ 2 ರಿಂದ 3 ಸಾವಿರ ನಿಗದಿ!: ಆರೋಪಿಗಳಿಗೆ ಶ್ಯೂರಿಟಿ ನೀಡುವುದೇ ವೃತ್ತಿಯಾಗಿತ್ತು. ಒಂದು ಬಾರಿ ಶ್ಯೂರಿಟಿ ನೀಡುವುದಕ್ಕೆ 2 ಸಾವಿರದಿಂದ ಮೂರು ಸಾವಿರ ಪಡೆಯುತ್ತಿದ್ದರು. ತಿಂಗಳಿಗೆ ಓರ್ವ ಆರೋಪಿ ಸುಮಾರು 20 ಮಂದಿಗೆ ಶ್ಯೂರಿಟಿ ನೀಡುತ್ತಿದ್ದ. ನಿತ್ಯ ಯಾವುದಾದರೊಂದು ಪಾರ್ಕ್‌ನಲ್ಲಿ ಕುಳಿತುಕೊಳ್ಳುತ್ತಿದ್ದರು. ಆರೋಪಿಗಳಿಗೆ ಜಾಮೀನು ನೀಡಬೇಕಾದಾಗ ವಕೀಲ ಪ್ರಸನ್ನ ಕುಮಾರ್‌ ಇವರನ್ನು ಸಂಪರ್ಕಿಸುತ್ತಿದ್ದ ಎಂದು ಅಧಿಕಾರಿ ತಿಳಿಸಿದ್ದಾರೆ.  

ದಿನಚರಿ ನಿರ್ವಹಣೆ
ಬಂಧಿತ ಹರಿನಾಥ್‌ ರೆಡ್ಡಿ ದಿನಚರಿ ಪುಸ್ತಕ ನಿರ್ವಹಣೆ ಮಾಡುತ್ತಿದ್ದ. 150ಕ್ಕೂ ಹೆಚ್ಚು ಪ್ರಕರಣಗಳ ಆರೋಪಿಗಳಿಗೆ ನಕಲಿ ಶ್ಯೂರಿಟಿ ನೀಡಿರುವ ಬಗ್ಗೆ ತನ್ನ ದಿನಚರಿ ಪುಸ್ತಕದಲ್ಲಿ ಬರೆದಿರುವುದು ತನಿಖೆ ವೇಳೆ ಪತ್ತೆಯಾಗಿದೆ. ಅಲ್ಲದೆ, 2014ರಲ್ಲಿ ಪಾಲಿಕೆ ಸದಸ್ಯೆಯಾಗಿದ್ದ ಮಂಜುಳ ಅವರ ಪತಿ ಶ್ರೀನಿವಾಸ್‌ ಅವರನ್ನು ಹಂತಕರು ಕೆ.ಆರ್‌.ಪುರಂನಲ್ಲಿ ಹತ್ಯೆ ಮಾಡಿದ್ದರು.

ಕೊಲೆ ಪ್ರಕರಣದ ಮೂರನೇ ಆರೋಪಿ ಮೋಹನ್‌ ಅಲಿಯಾಸ್‌ ಗಂಜಲು ಎಂಬುವನಿಗೆ ಹರಿನಾಥ್‌ ಜಾಮೀನು ನೀಡಿದ್ದ ಎಂದು ತನಿಖೆ ವೇಳೆ ಪತ್ತೆಯಾಗಿದೆ. ಇನ್ನು ಬಂಧಿತರ ಪೈಕಿ ಶೋಭರಾಣಿ ನ್ಯಾಯಾಧೀಶರ ಮುಂದೆ ತಂದೆ ಅನಾರೋಗ್ಯ, ಮಗುವನ್ನು ನೋಡಿಕೊಳ್ಳಬೇಕೆಂದು ಹೇಳಿ ಜಾಮೀನು ಪಡೆದಿದ್ದಾಳೆ ಎಂದು ಅಧಿಕಾರಿ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next