ದಾಂಡೇಲಿ : ಆಶ್ರಯ ಮನೆಗಾಗಿ ಕಳೆದ 8 ವರ್ಷಗಳಿಂದ ಪರಿತಪಿಸಿಕೊಂಡು ಬರುತ್ತಿರುವ ದಾಂಡೇಲಿ ಸಮೀಪದಲ್ಲಿರುವ ಜೋಯಿಡಾ ತಾಲೂಕು ವ್ಯಾಪ್ತಿಯ ಪ್ರಧಾನಿ ಗ್ರಾ.ಪಂ. ವ್ಯಾಪ್ತಿಯ ಮಾನಾಯಿ ಗ್ರಾಮದ ಮಹಿಳೆಯೋರ್ವರು ನಮಗೆ ಆಶ್ರಯ ಮನೆ ನೀಡಿ ಇಲ್ಲವೇ ವಿಷ ಕೊಟ್ಟು ಬಿಡಿ ಎಂದು ಪ್ರಧಾನಿ ಗ್ರಾಮ ಪಂಚಾಯತ್‌ಗೆ ಮನವಿ ಮಾಡಿದ್ದಾರೆ.
ಪರಿಶಿಷ್ಟ ಜಾತಿ ಜನಾಂಗದ ಬಡ ಮಹಿಳೆ ಲಕ್ಷ್ಮೀ ಶೇಖಪ್ಪ ಚಲವಾದಿ ಎಂಬವರು ಮನವಿ ಮಾಡಿಕೊಂಡಿದ್ದಾರೆ.
ಅವರು ದಾಂಡೇಲಿ ಸಮೀಪದಲ್ಲಿರುವ ಜೋಯಿಡಾ ತಾಲೂಕು ವ್ಯಾಪ್ತಿಯ ಮಾನಾಯಿ ಗ್ರಾಮದಲ್ಲಿ ಮಾಧ್ಯಮದ ಮೂಲಕ ಪ್ರಧಾನಿ ಗ್ರಾಮ ಪಂಚಾಯ್ತಿಗೆ ಮನವಿ ಮಾಡಿದರು.
ಆಶ್ರಯ ಮನೆ ಮಂಜೂರಾಗಿದೆ ಎಂದು ಇದ್ದ ಮನೆಯನ್ನು ಬಲವಂತವಾಗಿ ನಮ್ಮಿಂದ ನೆಲಸಮಗೊಳಿಸಿ ವರ್ಷ 8 ಕಳೆದರೂ, ಮನೆ ಮಾತ್ರ ಇನ್ನೂ ನೀಡಿಲ್ಲ. ಆದರೆ ಗ್ರಾಮ ಪಂಚಾಯ್ತಿಯ ಕಂಪ್ಯೂಟರಿನಲ್ಲಿ ನಮ್ಮ ಹಳೆ ಮನೆಯ ಪೊಟೋ ತೋರಿಸಿ, ನಿಮಗೆ ಮನೆಯಿದೆ ಎಂದು ಹೇಳುತ್ತಿದ್ದಾರೆ. ಈಗಲೂ ಗ್ರಾಮ ಪಂಚಾಯ್ತಿಯ ಕಂಪ್ಯೂಟರಿನಲ್ಲಿ ನಮ್ಮ ಹಳೆ ಮನೆ ಇದೆ. ಆದರೆ ಮನೆ ಮಾತ್ರ ಇನ್ನೂ ಆಗಿಲ್ಲ. ಪಂಚಾಂಗ ಹಾಕಿಟ್ಟಿದ್ದೇವೆ. ಶೆಡ್ ಮಾಡ್ಕೊಂಡು ಜೀವನ ಸಾಗಿಸುತ್ತಿದ್ದೇವೆ. ಇಂತಹ ಮನೆಯಲ್ಲಿ ಹೆಣ್ಮಕ್ಕಳು ಇರಲು ಸಾಧ್ಯವೆ? ಆದರೂ ನಾಳೆಯ ಕನಸ್ಸನ್ನೇರಿ ಬದುಕು ನಡೆಸುತ್ತಿದ್ದೇವೆ ಎಂದರು.
ಇನ್ನಾದರೂ ನಮ್ಮ ಕಷ್ಟವನ್ನು ನೋಡಿ ಪ್ರಧಾನಿ ಗ್ರಾಮ ಪಂಚಾಯ್ತಿಯವರು ಮನೆ ನೀಡಬೇಕು, ಮನೆ ನೀಡಲು ಆಗದೇ ಇದ್ದರೇ ಕೊನೆಪಕ್ಷ ವಿಷವನ್ನಾದರೂ ಕೊಡಿ ಎಂದು ಲಕ್ಷ್ಮೀ ಶೇಖಪ್ಪ ಚಲವಾದಿ ಎಂಬ ಮಹಿಳೆ ಮನವಿ ಮಾಡಿದ್ದಾರೆ.