ದಾಂಡೇಲಿ : ವೇತನ ಒಪ್ಪಂದ ಪರಿಷ್ಕರಣೆಗಾಗಿ ಆಗ್ರಹಿಸಿ ಸೆ:16 ರಂದು ಕೆಲಸ ಸ್ಥಗಿತಗೊಳಿಸಿ ಅನಿರ್ಧಿಷ್ಟಾವಧಿ ಮುಷ್ಕರವನ್ನು ಹಮ್ಮಿಕೊಳ್ಳಲಿರುವ ಭಾಗವಾಗಿ ವೆಸ್ಟ್ ಕೊಸ್ಟ್ ಕಾಗದ ಕಾರ್ಖಾನೆಯ ಕಾರ್ಮಿಕರಿಂದ ಕಾರ್ಖಾನೆಯ ಮುಖ್ಯ ಗೇಟಿನಿಂದ ಕಾರ್ಖಾನೆಯ ಆಯ್ದ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಯಿತು.
ಇದನ್ನೂ ಓದಿ : ಒಪೆಕ್, ಒಪೆಕ್+ ನಾಳೆ ಸಭೆ : ತೈಲೋತ್ಪನ್ನ ಹೆಚ್ಚಳಕ್ಕೆ ನಿರ್ಧಾರ..?
ಕಾರ್ಮಿಕ ಮುಖಂಡರುಗಳಾದ ಭರತ್ ಪಾಟೀಲ, ಹನುಮಂತ ಕಾರ್ಗಿ, ರೂಪೇಶ ಪವಾರ್, ಪ್ರಮೋದ ಕದಂ ಅವರುಗಳ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆಯು ನಡೆಯಿತು. ಇದಕ್ಕೂ ಮುನ್ನ ಕಾರ್ಖಾನೆಯ ಗೆಟ್ ಮುಂದೆ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಜಂಟಿ ಸಂಧಾನ ಸಮಿತಿಯ ಸದಸ್ಯರಾದ ಸಿ.ವಿ.ಲೋಕೇಶ ಹಾಗೂ ಕಾರ್ಮಿಕ ಮುಖಂಡ ಸಲೀಂ ಸೈಯದ್ ಅವರುಗಳು ಯಾವುದೇ ಕಾರಣಕ್ಕೂ ಸೆ:16 ರಂದು ಕೈಗೊಂಡಿರುವ ಮುಷ್ಕರವನ್ನು ಕೈಬಿಡುವುದಿಲ್ಲ. ಕಾರ್ಮಿಕರ ನ್ಯಾಯಬದ್ದ ಬೇಡಿಕೆಗಳ ಈಡೇರಿಕೆಗಾಗಿ ಕೆಲಸ ಸ್ಥಗಿತಗೊಳಿಸಿ ಕೈಗೊಳ್ಳಲಿರುವ ಮುಷ್ಕರಕ್ಕೆ ಕಾರ್ಮಿಕರೆಲ್ಲರು ಬೆಂಬಲವನ್ನು ನೀಡಬೇಕೆಂದರಲ್ಲದೇ, ಕಾರ್ಖಾನೆಯ ಉನ್ನತಿಗಾಗಿ ಜೀವ ಸವೆಸುವ ಕಾರ್ಮಿಕರ ಬದುಕಿನ ಅವಶ್ಯಕತೆಗೆ ಅನುಗುಣವಾಗಿ ಇರುವಂತಹ ನ್ಯಾಯಬದ್ದ ಬೇಡಿಕೆ ಈಡೇರುವವರೆಗೆ ವಿರಮಿಸುವುದಿಲ್ಲ. ಈ ನಿಟ್ಟಿನಲ್ಲಿ ಸೆ:16 ರಂದು ಕೈಗೊಳ್ಳಲಿರುವ ಅನಿರ್ಧಿಷ್ಟಾವಧಿ ಮುಷ್ಕರದ ಅಂಗವಾಗಿ ಸಾಂಕೇತಿಕ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಈಗಾಗಲೆ ಜಂಟಿ ಸಂಧಾನ ಸಮಿತಿ ಕಾರ್ಮಿಕ ಸಚಿವರನ್ನು ಭೇಟಿಯಾಗಿ ಇಲ್ಲಿಯ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿದೆ. ಇದೇ ಮೊದಲ ಬಾರಿಗೆ ಕಾರ್ಮಿಕರೆಲ್ಲರೂ ಒಂದಾಗಿ ಸ್ವಯಂಪ್ರೇರಣೆಯೊಂದಿಗೆ ಹೋರಾಟಕ್ಕಿಳಿದಿರುವುದು ಜಂಟಿ ಸಂಧಾನ ಸಮಿತಿಯ ನೇತೃತ್ವಕ್ಕೆ ಬಲ ನೀಡಿದಂತಾಗಿದೆ. ಕಾಗದ ಕಾರ್ಖಾನೆಯು ಈಗಲೂ ಬೇಡಿಕೆಯನ್ನು ಮಾನ್ಯ ಮಾಡದಿದ್ದಲ್ಲಿ ಗಂಭೀರ ಸಮಸ್ಯೆಗೆ ಗುರಿಯಾಗುವ ಸಾಧ್ಯತೆ ಕಂಡು ಬರುತ್ತಿದೆ. ಇನ್ನೂ ಕಾರ್ಮಿಕರ ಬೇಡಿಕೆಯಂತೆ ವೇತನ ಒಪ್ಪಂದ ವಿಚಾರದಲ್ಲಿ ಕಾರ್ಮಿಕರ ಪರವಾಗಿ ಗಟ್ಟಿಯಾಗಿ ನಿಂತು ಕಾರ್ಮಿಕರ ಬೇಡಿಕೆಯಂತೆ ವೇತನ ಒಪ್ಪಂದ ಮಾಡಬೇಕಾದ ಗುರುತರ ಜವಾಬ್ದಾರಿ ಜಂಟಿ ಸಂಧಾನ ಸಮಿತಿಯ ಮೇಲಿದೆ ಮತ್ತು ಇದು ಜಂಟಿ ಸಂಧಾನ ಸಮಿತಿಯ ತಾಕತ್ತಿಗೆ ಸವಾಲು ಕೂಡ ಆಗಿದೆ ಎಂಬ ಮಾತು ಕೇಳಿಬರತೊಡಗಿದೆ.
ಇದನ್ನೂ ಓದಿ : ಅಪ್ರಾಪ್ತರ ಪ್ರೇಮ ಪ್ರಕರಣ : ಪ್ರಿಯಕರನ ಸಾವಿನಿಂದ ಮನನೊಂದ ಯುವತಿಯೂ ಆತ್ಮಹತ್ಯೆಗೆ ಶರಣು