ದಾಂಡೇಲಿ: ಮಾನಸಿಕ ಅಸ್ವಸ್ಥ ಹಾಗೂ ನಿರ್ಗತಿಕ ವ್ಯಕ್ತಿಗೆ ಪ್ರತಿದಿನ ಊಟ-ಉಪಹಾರವನ್ನು ನೀಡುತ್ತಾ ಬರುವುದರ ಜೊತೆಗೆ ಅಸ್ವಚ್ಚತೆಯಿಂದ ಗಬ್ಬು ನಾರುತ್ತಿದ್ದ ಆತನ ಮನವೊಲಿಸಿ, ಆತನಿಗೆ ಸ್ನಾನ ಮಾಡಿಸಿ, ಹೊಸಬಟ್ಟೆ ಕೊಡಿಸಿ, ಆತನನ್ನು ಪ್ರೀತಿಯಿಂದ ಉಪಚರಿಸಿ ಯುವಕರ ತಂಡವೊಂದು ಮಾನವೀಯತೆ ಮೆರೆದ ಘಟನೆ ನಡೆದಿದೆ.
ನಗರದ ಅರಣ್ಯ ಪ್ರವಾಸಿ ಮಂದಿರದ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಸದಾ ಇರುತ್ತಿದ್ದ ಈತನಿಗೆ ನಗರದ ಲಮಾಣಿ ಚಾಳದ ಯುವಕರ ತಂಡವೊಂದು ಪ್ರತಿದಿನ ಊಟ -ಉಪಹಾರವನ್ನು ಕಳೆದ ಒಂದು ತಿಂಗಳಿನಿಂದ ನೀಡುತ್ತಾ ಬರುತ್ತಿದೆ.
ಅದರ ಜೊತೆಯಲ್ಲಿ ಅಸ್ವಚ್ಚತೆಯಿಂದ ನಾರುತ್ತಿದ್ದ ಆತನ ಮನವೊಲಿಸಿ ಆತನಿಗೆ ಸ್ನಾನ ಮಾಡಿಸಿ, ಸೆಲೂನಿಗೆ ಕರೆದುಕೊಂಡು ಹೋಗಿ ಅಲ್ಲಿ ಬೆಳೆದು ನಿಂತಿದ್ದ ತಲೆಗೂದಲನ್ನು ಕತ್ತರಿಸಿ, ಆನಂತರ ಪುನ: ನದಿಗೆ ಕರೆದೊಯ್ದು ಸ್ನಾನ ಮಾಡಿಸಿ, ಹೊಸ ಬಟ್ಟೆಯನ್ನು ತೊಡಿಸಿ ಆತನಿದ್ದಲ್ಲಿಗೆ ಕರೆದುಕೊಂಡು ಎಂದಿನಂತೆ ಊಟವನ್ನು ನೀಡಿ, ನಿನ್ನ ಜೊತೆ ನಾವಿದ್ದೇವೆ ಎಂಬ ಭರವಸೆಯ ಬೆಳಕಾಗಿ ಲಮಾಣಿ ಚಾಳದ ಯುವಕರು ಮಾಡಿದ ಮಾನವೀಯ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಈ ಮಾನವೀಯ ಕಾರ್ಯದಲ್ಲಿ ಮಾಜಿ ನಗರ ಸಭಾ ಸದಸ್ಯರಾದ ಮಂಜು ರಾಥೋಡ್ ಅವರ ನೇತೃತ್ವದಲ್ಲಿ ಇರ್ಫಾನ್ ದಪೇದಾರ್, ಯಾಸೀನ್ ಹೆಬ್ಬಳ್ಳಿ, ವಿನಾಯಕ್ ಲಮಾಣಿ, ಹಸನ್ ಬೇಗ್, ಹುಸೇನ್ ಬೇಗ್, ನಿಶಾಂತ್ ಮಹಾಲೆ, ಅಬ್ದುಲ್, ರೋಹಿತ್ ಮೊದಲಾದವರು ಈ ಮಾನವೀಯ ಕಾರ್ಯದ ಮೂಲಕ ಇದೀಗ ಎಲ್ಲರ ಗಮನ ಸೆಳೆದಿದ್ದಾರೆ.