Advertisement

ದಾಂಡೇಲಿ: ಕೊನೆಗೂ ಪತ್ತೆಯಾದ ವಿನಾಯಕ ನಗರದ ಕಾಳಿ ನದಿಯಲ್ಲಿ ಮೊಸಳೆಯ ವಶದಲ್ಲಿದ್ದ ಬಾಲಕನ ಶವ

01:35 PM Oct 26, 2021 | Team Udayavani |

ದಾಂಡೇಲಿ:  ಕಳೆದೆರಡು ದಿನಗಳಿಂದ ವಿನಾಯಕ ನಗರದ ಕಾಳಿ ನದಿಯಲ್ಲಿ ಮೊಸಳೆಯೊಂದು ಎಳೆದುಕೊಂಡಿದ್ದ ಸ್ಥಳೀಯ ಅಲೇಡ್ ಪ್ರದೇಶದ 15 ವರ್ಷದ ಮೊಹಿನ್ ಮೆಹಮೂದ್ ಅಲಿ ಎಂಬ ಬಾಲಕನ ಶವ ಮಂಗಳವಾರ ಬೆಳಿಗ್ಗೆ ಪತ್ತೆಯಾಗಿದೆ.  ಭಾನುವಾರ ಮಧ್ಯಾಹ್ನ  ಮೊಸಳೆಯ ಬಾಯಿಗೆ ತುತ್ತಾದ ಬಾಲಕ ಮೊಹಿನ್ ಇಂದು ಹೆಣವಾಗಿ ಪತ್ತೆಯಾಗಿದ್ದಾನೆ.

Advertisement

ಸ್ಥಳೀಯರು ಮೂರ್ನಾಲ್ಕು ಜಟ್ಟಿಗಳ ಮೂಲಕ ಹಾಗೂ ಹಾರ್ನಬಿಲ್, ಪ್ಲೈ ಕ್ಯಾಚರ್, ರವಿ ನಾಯಕ ಮತ್ತು ಕರೀಂ ಖತೀಬ್ ಅವರುಗಳ ರಾಪ್ಟ್ ಮೂಲಕ ಭಾನುವಾರ ಮಧ್ಯಾಹ್ನದಿಂದ ಆರಂಭಗೊಂಡ ಬಾಲಕನ ಶೋಧ ಕಾರ್ಯಾಚರಣೆ ಮಂಗಳವಾರ ಬೆಳಿಗ್ಗೆ 10.45 ರಿಂದ 11 ಗಂಟೆ ಸುಮಾರಿಗೆ ಬಾಲಕನ ಶವ ಪತ್ತೆಯಾಗುವುದರ ಮೂಲಕ ಅಂತ್ಯಗೊಂಡಿದೆ.

ಕಳೆದ ಎರಡು ದಿನಗಳಲ್ಲಿ ಬಹಳಷ್ಟು ಸತಾಯಿಸಿದ್ದ ಮೊಸಳೆ ಆಗೊಮ್ಮೆ, ಈಗೊಮ್ಮೆ ಎಂಬಂತೆ ಬಾಲಕನನ್ನು ಬಾಯಲ್ಲಿಟ್ಟುಕೊಂಡು ಕಾಣಿಸಿಕೊಂಡಿತು. ಮಂಗಳವಾರವೂ ಮೂರ್ನಾಲ್ಕು ಸಲ ಇದೇ ರೀತಿ ಬಾಲಕನನ್ನು  ಬಾಯಲ್ಲಿಟ್ಟು ನೀರಲ್ಲಿ ಸಂಚರಿಸುವುದು ಕಂಡುಬಂದಿದೆ. ಇದನ್ನು ಗಮನಿಸಿದ ರಾಪ್ಟ್ ಮತ್ತು ಜಟ್ಟಿಯಲ್ಲಿದ್ದವರು ತಾಳ್ಮೆ ವಹಿಸಿ ಕಾರ್ಯಾಚರಣೆಯನ್ನು ಶುರುವಚ್ಚಿಕೊಂಡಿದ್ದರು. ಇಂದು ಬೆಳಿಗ್ಗೆ ಹತ್ತುವರೆ ಘಂಟೆ ಸುಮಾರಿಗೆ ಎಲ್ಲ ಕಡೆಗಳಿಂದಲೂ ರಾಪ್ಟ್ ಹಾಗೂ ಜಟ್ಟಿಗಳು ಮೊಸಳೆಯನ್ನು ಸುತ್ತುವರಿದುಕೊಂಡಿದ್ದವು. ಬೆಳಿಗ್ಗೆ 10.45 ರಿಂದ 11 ಗಂಟೆ ಸುಮಾರಿಗೆ ಮೊಸಳೆಯ ಹತ್ತಿರ ಜಟ್ಟಿಯ ಮೂಲಕ ಸ್ಥಳೀಯರಾದ ಗಣೇಶ ಮತ್ತು ಮುಸ್ತಾಕ್ ಅವರುಗಳು ಧಾವಿಸಿ ಮೊಸಳೆಯ ಬಾಯಿಯಿಂದ ಬಾಲಕನ ಶವವನ್ನು ಎಳೆಯುತ್ತಲೆ ಮುಂದೆ ಸಾಗಿದರು. ಆದಾಗ್ಯೂ ಮೊಸಳೆ ಮಾತ್ರ ಬಾಲಕನ ದೇಹವನ್ನು ಬೆನ್ನು ಬಿಡದೇ ಹಿಂಬಾಲಿಸಿತ್ತು. ಒಮ್ಮೆ ಆತಂಕದ ವಾತವರಣ ಸೃಷ್ಟಿಯಾಯಿತಾದರೂ ತಕ್ಷಣವೆ ರಾಪ್ಟ್ ಗಳು ಜಟ್ಟಿಯ ಬಳಿ ಬಂದು ಮೊಸಳೆಯನ್ನು ಅಲ್ಲಿಂದ ಓಡಿಸಿ, ಬಾಲಕನ ಶವವನ್ನು ಜಟ್ಟಿಯಿಂದ ತೆಗೆದು ರಾಪ್ಟ್ ಮೂಲಕ ತಂದು ನದಿಯ ದಡಕ್ಕೆ ಮುಟ್ಟಿಸಿದರು.

ಬಾಲಕನ ಎಡ ಕೈಯನ್ನು ಸಂಪೂರ್ಣ ತಿಂದಿರುವ ಶಂಕೆ ವ್ಯಕ್ತವಾಗಿದೆ.  ಒಂದೆಡೆ ನದಿ ದಡದ ಸುತ್ತಲು ಸಾಕಷ್ಟು ಸಂಖ್ಯೆಯಲ್ಲಿ ಸಾರ್ವಜನಿಕರು ಜಮಾಯಿಸಿದ್ದರು. ಬಾಲಕನ ಶವ ದೊರೆಯುತ್ತಿದ್ದಂತೆಯೆ ಹೆತ್ತವರ ಹಾಗೂ ಸಂಬಂಧಿಗಳ ಆಕ್ರಂದನ ಮುಗಿಲು ಮುಟ್ಟಿದೆ. ನದಿಯ ದಡದತ್ತ ತಂದ ತಕ್ಷಣವೆ ನಗರದ ಸಾರ್ವಜನಿಕ ಆಸ್ಪತ್ರೆಗೆ ಶವದ ಮರಣೋತ್ತರ ಪರೀಕ್ಷೆಗೆ ಬಾಲಕನ ಮೃತ ದೇಹವನ್ನು ಕಳುಹಿಸಿಕೊಡಲಾಯ್ತು.

Advertisement

ಒಟ್ಟಿನಲ್ಲಿ ನಗರದಲ್ಲಿ ಆತಂಕ ಮನೆ ಮಾಡಿದ್ದು, ಸೂತಕದ ಛಾಯೆ ಆವರಿಸಿದೆ. ಮೃತ ಬಾಲಕನ ಕುಟುಂಬ ಅತ್ಯಂತ ಬಡತನದಲ್ಲಿರುವ ಕುಟುಂಬವಾಗಿದ್ದು, ಈ ಹಿನ್ನಲೆಯಲ್ಲಿ ಸೂಕ್ತ ರೀತಿಯ ಪರಿಹಾರವನ್ನು ತ್ವರಿತಗತಿಯಲ್ಲಿ ಒದಗಿಸಿಕೊಡುವುದರ ಮೂಲಕ ಬಾಲಕನ ಕುಟುಂಬಕ್ಕೆ ಸಾಂತ್ವನದ ಜೊತೆಗೆ ಅಭಯ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ತಹಶೀಲ್ದಾರ್ ಶೈಲೇಶ ಪರಮಾನಂದ ಹಾಗೂ ವಲಯಾರಣ್ಯಾಧಿಕಾರಿ ವಿನಯ್ ಭಟ್ ಮತ್ತು ಡಿವೈಎಸ್ಪಿ ಗಣೇಶ್.ಕೆ.ಎಲ್ ಅವರುಗಳ ತಂಡ ವಿಶೇಷ ರೀತಿಯಲ್ಲಿ ಪ್ರಯತ್ನ ನಡೆಸುವ ಭರವಸೆಯನ್ನು ನೀಡಿರುವುದರ ಜೊತೆಯಲ್ಲಿ ಈ ಬಗ್ಗೆ ಅಗತ್ಯ ಕ್ರಮವನ್ನು ಕೈಗೋಳ್ಳುತ್ತಿದ್ದಾರೆ.

ಬೆಳಗ್ಗಿನಿಂದಲೆ ಸ್ಥಳದಲ್ಲಿ ತಹಶೀಲ್ದಾರ್ ಶೈಲೇಶ ಪರಮಾನಂದ, ಡಿವೈಎಸ್ಪಿ ಗಣೇಶ್.ಕೆ.ಎಲ್, ಸಿಪಿಐ ಪ್ರಭು ಗಂಗನಹಳ್ಳಿ, ಪಿಎಸೈಗಳಾದ ಯಲ್ಲಪ್ಪ.ಎಸ್, ಐ.ಆರ್.ಗಡ್ಡೇಕರ, ಕಿರಣ್ ಪಾಟೀಲ, ವಲಯಾರಣ್ಯಾಧಿಕಾರಿ ವಿನಯ್ ಭಟ್ ಹಾಗೂ ಪೊಲೀಸ್ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಮುಕ್ಕಾಂ ಹೂಡಿದ್ದರು. ಇಂದು ಸಹ ಡ್ರೋನ್ ಕ್ಯಾಮಾರವನ್ನು ಬಳಸಲಾಗಿತ್ತು. ಬಾಲಕನ ಶವ ಪತ್ತೆಯಾಗುತ್ತಿದ್ದಂತೆಯೆ ಸ್ಥಳಕ್ಕೆ ಮಾಜಿ ಶಾಸಕರಾದ ಸುನೀಲ ಹೆಗಡೆಯವರು ದೌಡಾಯಿಸಿದ್ದರು. ನಗರ ಸಭೆಯ ಅಧ್ಯಕ್ಷೆ ಸರಸ್ವತಿ ತಜಪೂತ್, ಉಪಾಧ್ಯಕ್ಷ ಸಂಜಯ್ ನಂದ್ಯಾಳ್ಕರ, ನಗರ ಸಭಾ ಸದಸ್ಯರುಗಳು ಉಪಸ್ಥಿತರಿದ್ದರು.

ಇನ್ನೂ ಪ್ರವಾಸೋದ್ಯಮಿಗಳಾದ ಉಮೇಶ.ಜಿ.ಈ, ರವಿ ನಾಯಕ, ಸ್ಟ್ಯಾನ್ಲಿ, ಸೋಮಶೇಖರ್.ಜಿ.ಈ, ಬಾಪುಜಿ ಪೇಟೆ, ಮೊಹಮ್ಮದ್ ಮಾಲ್ದಾರ್ ಮೊದಲಾದವರ ತಂಡ ರಾಪ್ಟ್ ಮೂಲಕ ಹಾಗೂ ಸ್ಥಳೀಯ ಏಳೆಂಟು ಜನರು ಜಟ್ಟಿಗಳ ಮೂಲಕ ಶೋಧ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next