ದಾಂಡೇಲಿ : ನಗರದ ಪ್ರಮುಖ ರಸ್ತೆಯಾದ ಜೆ.ಎನ್.ರಸ್ತೆಯಲ್ಲಿ ಯುಜಿಡಿ ಕಾಮಗಾರಿಗೆ ಚಾಲನೆಯನ್ನು ನೀಡಲಾಗಿದೆ. ನಗರದ ಸಿವಿಲ್ ನ್ಯಾಯಾಲಯದ ಮುಂಭಾಗದಲ್ಲಿರುವ ಜೆ.ಎನ್.ರಸ್ತೆಯ ಬದಿಯಲ್ಲಿ ರಸ್ತೆ ಅಗೆದು ಪೈಪ್ ಜೋಡಿಸುವ ಕಾರ್ಯ ಆರಂಭವಾಗಿದೆ. ಕೆಲ ದಿನಗಳವರೆಗೆ ಸುಗಮ ವಾಹನ ಸಂಚಾರಕ್ಕೆ ಅಡಚಣೆಯಾದರೂ ಕಾಮಗಾರಿ ವೇಗವಾಗಿ ನಡೆಯುತ್ತಿರುವುದರಿಂದ ಸಮಸ್ಯೆ ಶೀಘ್ರ ಶಮನವಾಗಲಿದೆ.
ಅಂದ ಹಾಗೆ ಯುಜಿಡಿ ಕಾಮಗಾರಿಯ ಬಗ್ಗೆ ನಗರದಲ್ಲಿ ಜನ ಆಕ್ರೋಶಿತಗೊಂಡಿದ್ದು ನಿಜ. ಪೈಪ್ ಲೈನ್ ಅಳವಡಿಕೆಗಾಗಿ ರಸ್ತೆಯನ್ನು ಅಗೆದು ಸಮರ್ಪಕವಾಗಿ ರಸ್ತೆ ದುರಸ್ತಿ ಮಾಡದಿರುವುದರಿಂದ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿರವುದು ನಿಜ. ಇದು ಸಾರ್ವಜನಿಕವಾಗಿ ಆಗಿರುವ ಸಮಸ್ಯೆಯಾದರೇ ಮುಂದೆ ಇದಕ್ಕಿಂತ ದೊಡ್ಡ ತಲೆನೋವು ನಗರದ ಜನತೆಗೆ ಆಗಲಿದೆ ಎಂದೆ ಹೇಳಲಾಗುತ್ತಿದೆ. ರಸ್ತೆಯನ್ನು ಅಗೆದು ಪೈಪ್ಲೈನ್ ಆಳವಡಿಸುವ ಕಾರ್ಯ ಬಹುತೇಕ ಅಂತಿಮ ಹಂತದಲ್ಲಿದೆ. ರಸ್ತೆಯ ಅಲ್ಲಲ್ಲಿ ನಿರ್ಮಿಸಲಾದ ಸೆಪ್ಟಿಕ್ ಚೆಂಬರಿಗೆ ಮನೆ ಮನೆಗಳ ಸಂಪರ್ಕ ಕೊಡಬೇಕಾಗಿದೆ. ನಿಜವಾಗಿ ಸಮಸ್ಯೆ ಸೃಷ್ಟಿಯಾಗುವುದೆ ಇನ್ನೂ ಮುಂದಕ್ಕೆ ಎನ್ನುವುದು ತಲೆನೋವಿನ ಸಂಗತಿಯಾಗಿದೆ.
ಹಾಗೆ ನೋಡಿದರೇ, ಬೆಂಗಳೂರು, ಹುಬ್ಬಳ್ಳಿ, ಧಾರವಾಡ ಹೀಗೆ ಮೊದಲಾದ ನಗರ ಪ್ರದೇಶದಂತೆ ದಾಂಡೇಲಿಯನ್ನು ಪರಿಗಣಿಸಲಾಗದು. ಯಾಕೆಂದ್ರೆ ಸಂದರ್ಭಕ್ಕೆ ಅನುಗುಣವಾಗಿ ಸೃಷ್ಟಿಯಾಗಿರುವ ನಗರ ದಾಂಡೇಲಿ. ಹಾಗಾಗಿ ಯೋಜಿತ ಮತ್ತು ಸಿದ್ದಪಡಿಸಿದ ಯೋಜನೆಯ ಮೂಲಕ ನಿರ್ಮಾಣಗೊಂಡ ನಗರವಲ್ಲ. ಜಾಗವಿದ್ದಲ್ಲಿ ಮನೆ ಕಟ್ಟಿಕೊಂಡು ಕಟ್ಟಿಕೊಂಡು ಸಂದ್ರಿ ಸಂದ್ರಿಗಳನ್ನು ಹೊಂದಿದ ನಗರ. ಏರು ತಗ್ಗುಗಳನ್ನು ಹೊಂದಿರುವ ನಗರ ಮತ್ತು ಏರು ತಗ್ಗುಗಳಿಗೆ ಹೊಂದಿಕೊಂಡು ಮನೆಗಳನ್ನು ನಿಮರ್ಿಸಿರುವುದು ಇಲ್ಲಿಯ ವಾಸ್ತವ ಸ್ಥಿತಿ. ಈಗ ಮನೆ ಮನೆಗಳಿಗೆ ಯುಜಿಡಿ ಪೈಪ್ಲೈನ್ ಸಂಪರ್ಕ ಕಲ್ಪಿಸಿದರೂ ತ್ಯಾಜ್ಯ ಸರಾಗವಾಗಿ ಹರಿಯಲು ಸಾಧ್ಯವೆ?, ಒಂದು ವೇಳೆ ಸರಾಗವಾಗಿ ಹರಿಯದಿದ್ದಲ್ಲಿ ಮುಂದೇನು?, ತ್ಯಾಜ್ಯ ಹರಿಯಲಾಗದೆ ಜಾಮ್ ಆಗಿ ಸಮಸ್ಯೆ ಸೃಷ್ಟಿಯಾದರೇ ಅದರ ಹೊಣೆ ಯಾರು? ಎಂಬಿತ್ಯಾದಿ ಪ್ರಶ್ನೆಗಳು ಜನರನ್ನು ಕಾಡತೊಡಗಿವೆ.
ಇಲ್ಲಿ ಬಹಳ ಮುಖ್ಯವಾಗಿ ಗಮನಿಸುವುದಾದರೇ, ಈಗಾಗಲೆ ನಿರ್ಮಿಸಿ ವಾಸ ಮಾಡಿಕೊಂಡಿರುವ ಬಹುತೇಕ ಮನೆಗಳಲ್ಲಿ ಶೌಚಾಲಯ ಹಿಂಬದಿಯಲ್ಲಿರುವುದರಿಂದ ಹಾಗೂ ಸಂದ್ರಿ ಸಂದ್ರಿಗಳಲ್ಲಿಮನೆ ಕಟ್ಟಿಕೊಂಡಿರುವುದರಿಂದ ಶೌಚಾಲಯಗಳಿಂದ ಸೆಪ್ಟಿಕ್ ಚೆಂಬರಿಗೆ ಪೈಪ್ ಸಂಪರ್ಕ ಕಲ್ಪಿಸಲು ಬೇರೆ ಎಲ್ಲಿಯೂ ಅವಕಾಶ ವಿಲ್ಲದಿರುವುದರಿಂದ ಮನೆಯೊಳಗಡೆ ನೆಲ ಒಡೆದು ಪೈಪ್ ಸಂಪರ್ಕ ಕೊಡಬೇಕಾದ ಅನಿವಾರ್ಯತೆಯಿದೆ. ಅದರಲ್ಲಿಯೂ 40- 50 ಲಕ್ಷ ರೂ ವೆಚ್ಚ ಮಾಡಿ ಮನೆ ನಿರ್ಮಿಸಿದವರು ಕಟ್ಟಿದ ಮನೆಯ ನೆಲವನ್ನು ಒಡೆದು ಪೈಪ್ಲೈನ್ ಸಂಪರ್ಕ ಕೊಡಲು ಒಪ್ಪ ಬಹುದೇ, ಒಪ್ಪದಿದ್ದರೇ ಒಪ್ಪಿಸಿದರೂ ಆಗಲಿರುವ ನಷ್ಟಕ್ಕೆ ಜವಾಬ್ದಾರಿ ಯಾರು? ಒಪ್ಪದಿದ್ದಲ್ಲಿ ಉದ್ದೇಶಿತ ಯಜಿಡಿ ಯೋಜನೆ ನಿಗಧಿತ ಉದ್ದೇಶದಂತೆ ಅನುಷ್ಟಾನವಾಗಲು ಸಾಧ್ಯವೆ ಎಂಬಿತ್ಯಾದಿ ಪ್ರಶ್ನೆಗಳ ನಡುವೆ ಸಂದರ್ಭಕ್ಕೆ ಅನುಗುಣವಾಗಿ ಸೃಷ್ಟಿಯಾಗಿರುವ ದಾಂಡೇಲಿಗೆ ಯುಜಿಡಿ ಯೋಜನೆ ಅನಿವಾರ್ಯವಿತ್ತೆ ಎಂಬ ಪ್ರಶ್ನೆಗೆ ಉತ್ತರಿಸಲಾಗದ ಸ್ಥಿತಿ ನಿರ್ಮಾಣವಾಗಿದ್ದಂತೂ ವಾಸ್ತವ ಸತ್ಯ.