ದಾಂಡೇಲಿ: ಹಳಿಯಾಳದ ರಾಮಾಪುರದ ಮೊದಲಗೇರಾದಲ್ಲಿ ಜಿಂಕೆಯನ್ನು ಬೇಟೆಯಾಡಿ ಮಾಂಸವನ್ನು ಹಂಚಿಕೊಳ್ಳುತ್ತಿರುವ ಸಂಧರ್ಭದಲ್ಲಿ ಅರಣ್ಯ ಸಂಚಾರಿ ಪೊಲೀಸರ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ ಘಟನೆ ನಡೆದಿದೆ.
ಬಂಧಿತ ಆರೋಪಿಗಳಾದ ಮೊದಲಗೇರಾ ನಿವಾಸಿಗಳಾದ ಪರಶುರಾಮ ಶಿವಾಜಿ ಕೊಡಗೇಕರ (37 ) ಹಾಗೂ ಸುನೀಲ ಮಾವಳು ತುಫಾರಿ (31) ಇವರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯಿದೆ 1972 ಹಾಗೂ ಭಾರತಿಯ ಆಯುಧ ಕಾಯ್ದೆ 1959ರ ಅನ್ವಯ ಪ್ರಕರಣ ದಾಖಲಾಗಿದೆ.
ಬಂಧಿತರಿಂದ ಒಂಟಿ ನಳಿಕೆಯ ನಾಡ ಬಂದೂಕು, ಕಟ್ಟಿಗೆಯ ಹಿಡಿಕೆ ಇರುವ ಕಬ್ಬಿಣದ ಸಣ್ಣ ಕೈ ಕೊಡ ಹಾಗೂ ದೊಡ್ಡ ಗಾತ್ರದ ಕಬ್ಬಿಣದ ಕೊಡಲಿ, ಮೂರು ಮಾಂಸಗಳಿರುವ ಪ್ಲಾಸ್ಟಿಕ್ ಬ್ಯಾಗ್‌ಗಳು 7.940 ಕೆ.ಜಿ.ಮಾಂಸ ಹಾಗೂ ಜಿಂಕೆಯ ತಲೆಬುರುಡೆಯನ್ನು ವಶಪಡಿಸಿಕೊಂಡಿದ್ದಾರೆ.
ಯಾವುದೇ ಪಾಸ್ ಪರವಾನಗಿ ಪಡೆದುಕೊಳ್ಳದೇ ಅಕ್ರಮವಾಗಿ ನಾಡಬಂದೂಕನ್ನು ಶಿಕಾರಿ ಮಾಡುವ ಉದ್ದೇಶದಿಂದ ತಮ್ಮ ತಾಬಾದಲ್ಲಿ ಇಟ್ಟುಕೊಂಡು ವನ್ಯಪ್ರಾಣಿಯಾದ ಜಿಂಕೆಯನ್ನು ಬೇಟೆಯಾಡಿ ತಲೆಯ ಭಾಗವನ್ನುಸುಟ್ಟು ಹಾಗೂ ಇನ್ನುಳಿದ ಮಾಂಸವನ್ನು ಕತ್ತರಿಸಿ ಸಮವಾಗಿ ಹಂಚಿಕೊಳ್ಳಬೇಕೆಂದು ಕತ್ತರಿಸುತ್ತಿರುವಾಗ ಈ ದಾಳಿಯನ್ನು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ದಾಂಡೇಲಿ ನಗರದಲ್ಲಿರುವ ಪೊಲೀಸ್ ಅರಣ್ಯ ಸಂಚಾರಿ ದಳದ ಕಾರ್ಯಾಲಯದಲ್ಲಿ ಪೊಲೀಸ್ ಅರಣ್ಯ ಸಂಚಾರಿ ದಳದ ಪಿಎಸ್ಐ ಕಿರಣ್ ಪಾಟೀಲ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪೊಲೀಸ್ ಸಿಬ್ಬಂದಿಗಳಾದ ಮುಲ್ಲಾ, ಚಂದ್ರಶೇಖರ, ಪ್ರಶಾಂತ, ಭಾನು ಕಾಂತ,ಗಜಾನನ , ಮಂಜುನಾಥ ಇವರುಗಳು ಕಾರ್ಯಾಚರಣೆಯಲ್ಲಿ ಸಹಕರಿಸಿದ್ದಾರೆ.