ದಾಂಡೇಲಿ : ಹಳಿಯಾಳ ತಾಲೂಕಿನ ಅಡಿಕೆ ಹೊಸೂರು ಗ್ರಾಮದಿಂದ ಅಕ್ರಮವಾಗಿ ಜಾನುವಾರು ಸಾಗಾಟ ಮಾಡಿಕೊಂಡು ಬರುತ್ತಿದ್ದ ವಾಹನವನ್ನು ಜಾನುವಾರು ಸಹಿತ ವಶಪಡಿಸಿಕೊಂಡ ಘಟನೆ ದಾಂಡೇಲಿ ನಗರದ ಹಳಿಯಾಳ ರಸ್ತೆಯ 3ನಂ ಗೇಟ್ ಹತ್ತಿರ ರವಿವಾರ ನಡೆದಿದೆ.
ಟಾಟಾ ಎಸಿ ವಾಹನದಲ್ಲಿ ಹಳಿಯಾಳ ತಾಲೂಕಿನ ಅಡಿಕೆ ಹೊಸೂರು ಗ್ರಾಮದಿಂದ ಅಕ್ರಮವಾಗಿ ಎರಡು ಜಾನುವಾರುಗಳನ್ನು ದಾಂಡೇಲಿಗೆ ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. ನಗರದ ಹಳಿಯಾಳ ರಸ್ತೆಯ 3ನಂ ಗೇಟ್ ಹತ್ತಿರ ವಾಹನವನ್ನು ತಡೆದು ನಿಲ್ಲಿಸಿದಾಗ ಅಕ್ರಮ ಜಾನುವಾರು ಸಾಗಾಟ ಬೆಳಕಿಗೆ ಬಂದಿದೆ.
ಜಾನುವಾರು ಸಹಿತ ವಾಹನವನ್ನು ನಗರ ಠಾಣೆಯ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕೃತ್ಯಕ್ಕೆ ಬಳಸಲಾದ ವಾಹನ ಮತ್ತು ಜಾನುವಾರುಗಳ ಮಾಲಕ ಅಡಿಕೆ ಹೊಸೂರು ಗ್ರಾಮದ ಶೆರೀಫ್ ಸಿದ್ದಿ ಎಂಬವನಾಗಿದ್ದು, ಈ ಘಟನೆಯ ಬಗ್ಗೆ ಶೆರೀಫ್ ಸಿದ್ಧಿಯವನಲ್ಲಿ ಮಾತನಾಡಿಸಿದಾಗ ಮಾಧ್ಯಮಕ್ಕೆ ತನ್ನದೇ ಜಾನುವಾರು ಹಾಗೂ ತನ್ನದೇ ವಾಹನ ಎಂದು ಹೇಳಿದ್ದಾನೆ.
ಈ ಬಗ್ಗೆ ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.