ಚಿತ್ತಾಪುರ: ದಂಡಗುಂಡ ಸುಕ್ಷೇತ್ರದ ಬಸವಣ್ಣ ಕಾರ್ಯಾಲಯದಲ್ಲಿ ಇತ್ತೀಚಿಗೆ ನಡೆದ ಶ್ರೀದಂಡಗುಂಡ ಬಸವಣ್ಣ ಟ್ರಸ್ಟ್ ಕಮಿಟಿ ಸದಸ್ಯರ ಸಭೆಯಲ್ಲಿ ಹೊಲದ ವಿಷಯಕ್ಕೆ ಸಂಬಂಧಪಟ್ಟಂತೆ ಟ್ರಸ್ಟ್‌ನ ಸದಸ್ಯರೇ ದೇವಸ್ಥಾನದ ಸ್ವಾಮೀಜಿ ಅವರ ಸಹೋದರ ಮೇಲೆ ಹಲ್ಲೆ ಮಾಡಿದ್ದಾರೆನ್ನುವ ಘಟನೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಟ್ರಸ್ಟ್ ಪದಾಧಿಕಾರಿಗಳಾದ ಎಂಎಲ್‌ಸಿ ಬಿ.ಜಿ.ಪಾಟೀಲ, ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಭಾಗಣ್ಣಗೌಡ ಸಂಕನೂರ, ನ್ಯಾಯವಾದಿ ಚಂದ್ರಶೇಖರ ಅವಂಟಿ ಸಮ್ಮುಖದಲ್ಲಿಯೇ ಈ ಘಟನೆ ನಡೆದಿದೆ.
ಹಿಂದಿನ ಸಭೆಯ ನಡಾವಳಿಗೆ ಒಪ್ಪಿಗೆ ಪಡೆಯುವುದೂ ಸೇರಿದಂತೆ ಇತರೆ ವಿಚಾರಗಳ ಕುರಿತು ಚರ್ಚೆ ನಡೆಯುತ್ತಿದ್ದ ವೇಳೆ ಹಲ್ಲೆ ಮಾಡಲಾಗಿದೆ ಎಂದು ಹೇಳಲಾಗಿದೆ. ಭಕ್ತಾದಿಗಳಿಂದ ಸಾಕಷ್ಟು ಕಾಣಿಕೆ ಸಂಗ್ರಹವಾಗುತ್ತಿದ್ದರೂ ಈ ಶ್ರದ್ಧಾ ಕೇಂದ್ರ ಮಾತ್ರ ಅಭಿವೃದ್ಧಿ ಆಗಿಲ್ಲ. ಅಕ್ರಮಗಳು ನಡೆಯುತ್ತಿವೆ. ಆದ್ದರಿಂದ ಸರ್ಕಾರದ ಅಧೀನಕ್ಕೆ ತೆಗೆದುಕೊಳ್ಳಬೇಕು ಎಂದು ಸಂಘಟನೆಗಳ ಪ್ರಮುಖರು ಈಗಾಗಲೇ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ದಂಡಗುಂಡ ಗ್ರಾಮದಲ್ಲಿ ನಡೆದ ಮಾರಾಮಾರಿ ವಿಷಯ ತಿಳಿದ ತಕ್ಷಣ ಭೇಟಿ ನೀಡಿದಾಗ ಅಲ್ಲಿ ಯಾರೂ ದೂರು ನೀಡಲಿಲ್ಲ. ಹೀಗಾಗಿ ಅವರಿಂದ ಮುಚ್ಚಳಿಕೆ ಪತ್ರ ಬರೆಯಿಸಿಕೊಂಡು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಅವರ ಆದೇಶದಂತೆ ಮುಂಜಾಗ್ರತಾ ಕ್ರಮವಾಗಿ ಸಿಆರ್‌ಪಿಸಿ 107 ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
-ಗಂಗಮ್ಮ ಪಿಎಸ್‌ಐ, ಚಿತ್ತಾಪುರ