Advertisement

ವಿವಿಧತೆಯಲ್ಲಿ ಏಕತೆ ಸಾರಿದ ನೃತ್ಯ ಸಪ್ತಾಹ

05:50 PM May 30, 2019 | mahesh |

ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಚರಲ್‌ ಅಕಾಡೆಮಿಯು ಈ ವರ್ಷದ ವಿಶ್ವ ನೃತ್ಯ ದಿನವನ್ನು ವಿಶೇಷವಾಗಿ ಆಚರಿಸಿ ರಾಜ್ಯಾದ್ಯಂತ ಕಲಾ ಪ್ರೇಮಿಗಳ ಹೃದಯ ಗೆದ್ದಿದೆ.

Advertisement

ಕಾರ್ಯಕ್ರಮದ ಮೊದಲ ದಿನದಂದು ಕಲಾಸಂಸ್ಥೆಯ 40ಕ್ಕೂ ಹೆಚ್ಚು ಶಿಷ್ಯವೃಂದವರಿಂದ ವಿವಿಧ ಸಮೂಹ ನೃತ್ಯ ವಿನೋದಾವಳಿಗಳು ಕಾರ್ಯಕ್ರಮಕ್ಕೆ ಸ್ವಾಗತದಂತಿತ್ತು. ಎರಡನೆಯ ದಿನದಲ್ಲಿ ಒಡಿಶಾದ ಕಲಾವಿದ ಡಾ| ಬಿಸ್ವಜಿತ್‌ ದಾಸ್‌ರವರ ಒಡಿಸ್ಸಿ ನೃತ್ಯ ಮತ್ತು ಉಪನ್ಯಾಸ ಈ ಕಲಾಪ್ರಕಾರದ ಸಮಗ್ರ ಪರಿಚಯ ಮಾಡಿಸಿತು. ಒಡಿಸ್ಸಿಯ ವಿಶಿಷ್ಟ ಚಲನೆಗಳನ್ನು ಪರಿಚಯಿಸಿದ್ದು ಹಾಗೂ ವಿಶಿಷ್ಟ ಆಭರಣಗಳನ್ನು ಧರಿಸಿದ್ದು ವಿಶೇಷ ಆಕರ್ಷಣೆಯಾಗಿತ್ತು. ಮೂರನೇ ದಿನದಂದು ಬೆಂಗಳೂರಿನ ಸೂರ್ಯನಾರಾಯಣ ರಾವ್‌ ಮತ್ತು ಕೃಷ್ಣಮೂರ್ತಿ ತುಂಗರವರು ಆಂಧ್ರದ ನೃತ್ಯ ಪ್ರಕಾರ ಕೂಚಿಪುಡಿಯ ಜನಪ್ರಿಯ ಪ್ರಸಂಗ ಭಾಮಾ ಕಲಾಪ ಪ್ರಸ್ತುತಪಡಿಸಿದರು. ಯಕ್ಷಗಾನದ ಸ್ತ್ರೀ ಪಾತ್ರಗಳಿಗೆ ಸಾಮ್ಯತೆ ಹೊಂದಿದ ಈ ಪ್ರಸಂಗದಲ್ಲಿ ಸಭ್ಯ ಹಾಸ್ಯ ಸಂಭಾಷಣೆಗಳು ಒಳಗೊಂಡು ಮನೋಜ್ಞವಾಗಿ ಮೂಡಿಬಂತು. ಪುರುಷ ಕಲಾವಿದ ಸ್ತ್ರೀ ಪಾತ್ರವನ್ನು ನೈಜವಾಗಿ ಅಭಿನಯಿಸಿ ಪ್ರೇಕ್ಷಕರ ಮನ ಮುಟ್ಟಿರುವುದು ವಿಶೇಷತೆ.

ನಾಲ್ಕನೇ ದಿನ ಬೆಂಗಳೂರಿನಕಾರ್ತಿಕ್‌ ಶೆಟ್ಟಿಯವರ ಕಥಕ್‌ನಲ್ಲಿ ಹಿಂದೂ ಸಂಪ್ರದಾಯದ ಜೈಪುರ ಹಾಗೂ ಮುಘಲ್‌ ಶೈಲಿಯ ಲಖೊ°àವಿ ಘರಾನಾ ಹೀಗೆ ಎರಡೂ ಶೈಲಿಯಲ್ಲಿ ನೃತ್ಯಗಳು ವಿಶಿಷ್ಟವಾಗಿ ಮೂಡಿಬಂತು. ಐದನೇ ದಿನ ಸಾಗರದ ವಿ| ಪ್ರದ್ಯುಮ್ನ ಅಚಾರ್‌ ಭರತನಾಟ್ಯ ಪ್ರಸ್ತುತ ಪಡಿಸಿದರು. ನೃತ್ತದಲ್ಲಿ ಬಿಗಿತನ ಹಾಗೂ ಪುರುಷ ಸಹಜವಾದ ರಭಸಗಳು, ಹಾಗೂ ಸರಳ ಸುಂದರವಾದ ಅಭಿನಯದಿಂದ ಈ ನೃತ್ಯದ ಮೆರುಗು ಹೆಚ್ಚಿಸಿದರು.

ಆರನೇ ದಿನ ಕೋಲ್ಕತ್ತಾದ ಅತನು ದಾಸ್‌ರವರು ಭರತನಾಟ್ಯವ ಪ್ರದರ್ಶಿಸಿ ನೃತ್ಯ ಮತ್ತು ಅಭಿನಯ ಎರಡರಲ್ಲೂ ಸೈ ಎನಿಸಿಕೊಂಡು ಪ್ರೇಕ್ಷಕರ ಮನಮುಟ್ಟಿದರು. ಬಂಗಾಳದವರಾದರೂ ದಕ್ಷಿಣದ ನೃತ್ಯ ಪ್ರಕಾರ ಭರತನಾಟ್ಯದಲ್ಲಿ ಪ್ರಾವೀಣ್ಯತೆ ಪಡೆದಿರುವುದು ವಿಶೇಷ ಎನಿಸಿತು. ಏಳನೇ ದಿನ ಬೆಂಗಳೂರಿನ ಲಕ್ಷ್ಮೀ ನಾರಾಯಣ ಜೇನರವರ ಕಥಕ್‌ ನೃತ್ಯ ಪ್ರದರ್ಶನವಂತೂ ಆ ನೃತ್ಯ ಪ್ರಕಾರದ ಆಳವಾದ ಸೊಗಡನ್ನು ಪಸರಿಸಿದಂತಿತ್ತು. ಕಥಕ್‌ ನೃತ್ಯದ ಬಗೆಗಿನ ದೃಷ್ಟಿ ಕೋನವೇ ಬದಲಾಗುವಂತೆ ಮಾಡಿದ್ದು ಕಲಾವಿದರ ಮನೋಜ್ಞ ಅಭಿನಯ.

ಭರತನಾಟ್ಯ ಗುರುವೊಬ್ಬ ತಮ್ಮ ಕಲಾಪ್ರೇಮವನ್ನು ಕೇವಲ ಒಂದು ನೃತ್ಯಪ್ರಕಾರಕ್ಕೆ ಸೀಮಿತಗೊಳಿಸದೆ ಎಲ್ಲಾ ಪ್ರಕಾರಗಳೂ ಪರಿಸರದ ಜನಮಾನಸಕ್ಕೆ ತಲುಪಬೇಕು ಎಂಬ ನಿಟ್ಟಿನಲ್ಲಿ ಪ್ರತಿಫ‌ಲಾಪೇಕ್ಷೆ ಇಲ್ಲದೆ ಆಯೋಜಿಸಿದ ಈ ಎಲ್ಲಾ ಕಾರ್ಯಕ್ರಮಗಳು ನಿಜವಾಗಿಯೂ ಅಭಿನಂದನಾರ್ಹವಾದದ್ದು.

Advertisement

ಕಲಾವಿಕ್ರಮ

Advertisement

Udayavani is now on Telegram. Click here to join our channel and stay updated with the latest news.

Next