Advertisement

ಮನಗೆದ್ದ ನೃತ್ಯ ವರ್ಷಾ

03:25 PM Jan 12, 2018 | Team Udayavani |

 ಮಂಗಳೂರಿನ ಡಾನ್‌ ಬಾಸ್ಕೊದಲ್ಲಿ ಅರೆಹೊಳೆ ಪ್ರತಿಷ್ಠಾನ ಮಂಗಳೂರು ಹಾಗೂ ಗಾನ ನೃತ್ಯ ಅಕಾಡೆಮಿ ಮಂಗಳೂರು ಸಂಯುಕ್ತವಾಗಿ ಅಯೋಜಿಸಿದ ನೃತ್ಯ ವರ್ಷಾ ಕಾರ್ಯಕ್ರಮದಲ್ಲಿ ಕಲಾವಿದರಾದ ಶ್ವೇತಾ ಅರೆಹೊಳೆ , ವೈಷ್ಣವಿ ಭಟ್‌ ಮತ್ತು ಸತ್ಯನರಾಯಣ ರಾಜು ,ಬೆಂಗಳೂರು ಕಾರ್ಯಕ್ರಮ ನೀಡಿದರು ಗಾನ ನೃತ್ಯ ಅಕಾಡೆಮಿಯ ಗುರು ವಿದ್ಯಾಶ್ರೀ ರಾಧಾಕೃಷ್ಣ ಇವರ ಶಿಷ್ಯೆಯರಾದ ಶ್ವೇತಾ ಹಾಗೂ ವೈಷ್ಣವಿ ಹರಿಹರ ನೃತ್ಯಗಳನ್ನು ಪ್ರಸ್ತುತಪಡಿಸಿದರು. ರಾಗ – ತಾಳ ಮಾಲಿಕೆಯಲ್ಲಿ ಚೆನ್ನೈಯ ಶ್ರೀಕಾಂತ್‌ ಗೋಪಾಲಕೃಷ್ಣನ್‌ ರಚನೆಯ ಶೊಲ್ಕಟ್ಟುಗಳಿಂದ ಕೂಡಿದ ಹರಿಹರಾಂಜಲಿಯೊಂದಿಗೆ ರಂಗವೇರಿದ ಕಲಾವಿದೆಯರು ಹರಿ ಮತ್ತು ಹರನ ಕುರಿತ ಪ್ರತ್ಯೇಕ ಶ್ಲೋಕಗಳಿಗೆ ಅಭಿನಯಿಸುತ್ತ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಖರಹರಪ್ರಿಯ ರಾಗ -ಆದಿತಾಳದಲ್ಲಿ ಭಕ್ತಿಭಾವ ಪ್ರಧಾನವಾಗಿ ಆಧಾರನು ನೀನೆ ಹರಿನಾರಾಯಣ ಅತಿರುದ್ರನು ನೀನೇ ಹರಶಂಕರ ಎಂಬ ಸಾಲುಗಳಿಂದ ಆರಂಭವಾಗುವ ಹರಿಹರ ವರ್ಣನೆಯೊಂದಿಗೆ ಕಾರ್ಯಕ್ರಮವನ್ನು ಮುಂದುವರಿಸಿ ಹರಿಯಲ್ಲಿ ಅಡಕವಾಗಿರುವ ಸಾತ್ವಿಕತೆ ಹಾಗೂ ಹರನಲ್ಲಿರುವ ತಾಮಸತ್ವ ಹಾಗೂ ಎರಡೂ ದೇವತೆಗಳಲ್ಲಿ ಅಡಕವಾಗಿರುವ ಏಕತ್ವ ಭಿನ್ನತೆಯನ್ನು ಹಲವು ಪೌರಾಣಿಕ ಹಿನ್ನೆಲೆಯೊಂದಿಗೆ ಪ್ರಸ್ತುತಪಡಿಸಿದರು. ಸ್ವರಾಗ್‌ ಕಣ್ಣೂರ್‌ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿದ ಈ ನೃತ್ಯದ ಅಂತ್ಯದಲ್ಲಿ ಹರಿಹರ ಪುತ್ರ ಅಯ್ಯಪ್ಪ ಜನನದ ವಿಚಾರ ಸಹಿತ ಹರಿಹರರಲ್ಲಿ ಭೇದವಿಲ್ಲ ಎಂಬ ವಿಚಾರಧಾರೆಯು ಮೆಚ್ಚುಗೆಯಾಯಿತು. ಅನಂತರ ಪುರಂದರದಾಸರ ತರಳೆ ರನ್ನೆ ಎಂಬ ಸಾಹಿತ್ಯವನ್ನು ಶ್ರೀಕಾಂತ್‌ ಗೋಪಾಲಕೃಷ್ಣನ್‌ ರಾಗ ಸಂಯೋಜನೆಯಲ್ಲಿ ರಾಗ ಮಾಲಿಕೆ ಆದಿತಾಳಕ್ಕೆ ಲಕ್ಷ್ಮೀ ಹಾಗೂ ಪಾರ್ವತಿ ಪರಸ್ಪರರು ವ್ಯಂಗ್ಯೊಕ್ತಿಯ ಮೂಲಕ ಇನ್ನೊಬ್ಬಳ ಪತಿಯಲ್ಲಿನ ದೋಷವನ್ನು ತಿಳಿಸುವ ನಿಂದಾಸ್ತುತಿಯ ಸಾಹಿತ್ಯವನ್ನು ಕಲಾವಿದೆಯರು ಪ್ರಸ್ತುತಪಡಿಸಿದರು. ನಟುವಾಂಗದಲ್ಲಿ ತಾನ್ಯಾ ಶೆಟ್ಟಿ, ಮೃದಂಗದಲ್ಲಿ ಗೀತೇಶ್‌ ಕಾಂಞ್ಞಂಗಾಡ್‌ ಹಾಗೂ ವಯಲಿನ್‌ನಲ್ಲಿ ಶ್ರೀಧರ ಆಚಾರ್ಯ ಪಾಡಿಗಾರು ಸಹಕರಿಸಿದರು. 

Advertisement

 ಕಾರ್ಯಕ್ರಮದ ಎರಡನೇ ಹಂತವಾಗಿ ಸತ್ಯನಾರಾಯಣ ರಾಜು ಅವರ ರಾಮಕಥಾದಲ್ಲಿ ಹಲವು ಪ್ರಸಿದ್ಧ ರಚನಕಾರರ ಸಾಹಿತ್ಯವನ್ನು ಆರಿಸಿ ರಾಮಾಯಣದಲ್ಲಿ ಬರುವ ಕೆಲವು ಪ್ರಮುಖ ಪಾತ್ರಗಳ, ಸನ್ನಿವೇಶಗಳ ಭಾವ ಪ್ರತಿಬಿಂಬವಾಗಿ ದೆಹಲಿಯ ಉಷಾ ಆರ್‌.ಕೆ.ಇವರ ಪರಿಕಲ್ಪನೆಯಲ್ಲಿ ರಂಗ ಪ್ರಸ್ತುತಿಯಾಗಿ ಚಿತ್ರಿತವಾಯಿತು.

ರಂಗದಲ್ಲಿ ರಾಮನನ್ನು ಆವಾಹಿಸಿ ತ್ಯಾಗರಜರ ಬೌಳಿ ರಾಗ -ಖಂಡಚಾಪು ತಾಳದ ಮೇಲುಕೋವಯ್ಯ ಸಾಹಿತ್ಯಕ್ಕೆ ನಮ್ಮನ್ನುದ್ಧರಿಸು ಎಂಬ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನಾರಂಭಿಸಿದರು. ಮುಂದೆ ರಾಮಜನ್ಮ ,ಪುಟ್ಟ ಬಾಲಕನಾದ ಶ್ರೀರಾಮನ ರೂಪ,ನಡೆಗೆ ತುಳಸೀದಾಸರ ಠುಮಕ್‌ ಚಲತ್‌ ರಾಮಚಂದ್ರವನ್ನು ಹಿಂದೂಸ್ಥಾನೀ ಕಾಪಿ ರಾಗ -ತಿಶ್ರ ಏಕ ತಾಳಕ್ಕೆ ಅಭಿನಯಿಸಿ, ಪಟ್ಟಾಭಿಷೇಕ ವೇಳಲೋ ಎಂಬ ಸಾಹಿತ್ಯಕ್ಕೆ ಅಹಲೊದ್ಧಾರ ಸೀತಾಕಲ್ಯಾಣದ ಸಂಚಾರಿಯನ್ನು ಪ್ರಸ್ತುತಪಡಿಸಿದರು.ಅದು ತನಕ ಅಭೇರಿ ರಾಗದಲ್ಲಿದ್ದ ಹಾಡು ಶಿವರಂಜನಿಗೆ ತಿರುವು ಪಡೆದು ಮಂಥರೆ ,ಕೈಕೇಯಿ ಭಾಗದ ಅಭಿನಯ ಸಂಚಾರಿಯಾಗಿ ಮೂಡಿಬಂತು. 

 ಮುಂದೆ ಸೂರದಾಸ್‌ ವಿರಚಿತ ಭಜಮನ್‌ ರಾಮ್‌ ಚರಣ್‌ ಹಾಡಿಗೆ ಶಬರಿಯಾಗಿ ಕಲಾವಿದ ನೀಡಿದ ಅಭಿನಯ ರಸಿಕರ ಕಣ್ಣಂಚನ್ನು ತೇವವಾಗಿಸಿತು.ಬಳಿಕ ಪುರಂದರದಾಸರ ಹನೂಮಂತ ದೇವ ನಮೋ ಹಾಡಿಗೆ ರಾಮ ಹನುಮರ ಭೇಟಿಯಿಂದ ತೊಡಗಿ ಲಂಕಾದಹನದವರೆಗಿನ ಭಾಗವನ್ನು ಪ್ರಸ್ತುತಪಡಿಸಿ ಜತೆಗೆ ಅಲ್ಲಿ ನೋಡಲು ರಾಮ ಹಾಡಿಗೆ ರಾವಣ ವಧೆಯ ಕಥಾಹಂದರ ನಿರೂಪಿಸಿದರು. ಸುಮನಸರಂಜನಿ ಆದಿ ತಾಳದ ತಿಲ್ಲಾನದೊಂದಿಗೆ ಶ್ರೀರಾಮ ರಾಜಾರಾಮನಾಗಿ ಲೋಕ ಪೊರೆದ ಎಂಬ ಸುಂದರ ಅಂತ್ಯ ನೀಡಿದರು. 

 ಹಿಮ್ಮೇಳದಲ್ಲಿ ಡಿ.ಎಸ್‌. ಶ್ರೀವತ್ಸ ,ಮೃದಂಗದಲ್ಲಿ ಲಿಂಗರಾಜು ಬೆಂಗಳೂರು . ಕೊಳಲಿನಲ್ಲಿ ರಘುನಂದನ್‌ ನಟ್ಟುವಾಂಗದಲ್ಲಿ ಶಕುಂತಲಾ ಪ್ರಭಾತ್‌ ಬೆಂಗಳೂರು ಸಹಕರಿಸಿದರು. ನವೀನ್‌ ಬೆಂಗಳೂರು ಬೆಳಕು ನೀಡಿದರು. ಇಂತಹ ಕಾರ್ಯಕ್ರಮವನ್ನು ಮಂಗಳೂರಿನ ಕಲಾರಸಿಕರಿಗೆ ಉಣಬಡಿಸಿದ ಅರೆಹೊಳೆ ಪ್ರತಿಷ್ಠಾನದ ಸದಾಶಿವ ರಾಯರು ಹಾಗೂ ಗಾನ ನೃತ್ಯ ಅಕಾಡೆಮಿಯ ವಿದ್ಯಾಶ್ರೀ ಮತ್ತು ರಾಧಾಕೃಷ್ಣ ಭಟ್‌ ದಂಪತಿ ಅಭಿನಂದನೀಯರು. 

Advertisement

ಸುಮಂಗಲಾ ರತ್ನಾಕರ್‌

Advertisement

Udayavani is now on Telegram. Click here to join our channel and stay updated with the latest news.

Next