Advertisement

ಕಲಾವಿದರೇ ಕುಣಿದರು..ಹಾಡಿದರು..ನೋಡಿದರು!

06:46 AM Mar 09, 2019 | |

ಕಲಬುರಗಿ: “ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ, ಹಾಡುವುದು ಅನಿವಾರ್ಯ ಕರ್ಮ ನನಗೆ’ ರಾಷ್ಟ್ರಕವಿ ಜಿ.ಎಸ್‌. ಶಿವರುದ್ರಪ್ಪ ಅವರ “ಎದೆ ತುಂಬಿ ಹಾಡಿದೆನು’ ಗೀತೆ ಸಾಲುಗಳಿಗೆ ನಗರದ ಡಾ| ಎಸ್‌.ಎಂ. ಪಂಡಿತ ರಂಗಮಂದಿರ ಶುಕ್ರವಾರ ಅಕ್ಷರಶಃ ಸಾಕ್ಷಿಯಾಗಿತ್ತು. ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಮಹಿಳಾ ಸಾಂಸ್ಕೃತಿಕ ಉತ್ಸವದಲ್ಲಿ ವಚನ ಗಾಯನ, ಸಮೂಹ, ಸುಗಮ ಸಂಗೀತ, ಗೀಗಿ ಪದ, ತತ್ವಪದ ಹಾಗೂ ದಾಸವಾಣಿ ಸೇರಿದಂತೆ ಹಲವು ಸಾಂಸ್ಕೃತಿಕ, ಜಾನಪದ ಕಲಾ ಪ್ರದರ್ಶನ, ಸಾಮಾಜಿಕ ನಾಟಕ, ವಿಚಾರ ಗೋಷ್ಠಿಗಳು, ಕವಿ ಗೋಷ್ಠಿಗಳಂತ ಅರ್ಥಪೂರ್ಣ ಕಾರ್ಯಕ್ರಮಗಳು ಜರುಗಿದವು.

Advertisement

ಶುಭಾಂಗಿ ಮತ್ತವರ ತಂಡ ಸಮೂಹ ನೃತ್ಯದ ಮೂಲಕ ಮಹಿಳೆಯರ ಸಾಂಸ್ಕೃತಿಕ ಪ್ರತಿಭೆ ಅನಾವರಣಕ್ಕೆ ಮುನ್ನುಡಿ ಬರೆದರು. ಇವರು ಪ್ರದರ್ಶಿಸಿದ “ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ’, “ಶಿವನು ಭಿಕ್ಷಕ್ಕೆ ಬಂದ ನೀಡುಬಾರೆ’ ನೃತ್ಯ ಸೊಗಸಾಗಿ ಮೂಡಿತು. ಹಿರಿಯ ಗಾಯಕಿ ಛಾಯ ಭರತನೂರ ಅವರು ಸುಗಮ ಸಂಗೀತ ಸುಶ್ರಾವ್ಯವಾಗಿ ನಡೆಸಿಕೊಟ್ಟರು. ನಂತರದಲ್ಲಿ ಶಕುಂತಲಾ ದೇವಲನಾಯಕ ಮತ್ತು ತಂಡ ಗೀಗಿ ಪದದ ಮೂಲಕ “ಅಕ್ಕ ಮಹಾದೇವಿಯಂತ ಹೆಣ್ಣು ಹಡಿರವ್ವ’ ಎಂದು ಕರೆ ನೀಡಿದರು.

ದಾವಣಗೆರೆಯಿಂದ ಬಂದಿದ್ದ ಚೈತ್ರಾ ಮತ್ತು ತಂಡದ ಮಹಿಳಾ ವೀರಗಾಸೆ ಕುಣಿತ ಮೈನವಿರೇಳಿಸಿತು. ಬಳಿಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಹನೀಫ್‌ ಶೇಖ್‌ ಅವರು ಕಡಕೋಳ ಮಡಿವಾಳಪ್ಪನವರ “ನಾವು ನಡೆದೆಮ್ಮ ನಮ್ಮ ತವರೂರಿಗೆ’ ಎಂಬ ತತ್ವಪದದ ಮೂಲಕ ಮಹಿಳೆಯ ಜೀವನಾನುಭವ ಬಿಡಿಸಿಟ್ಟರು. ಡಾ| ಮೀನಾಕ್ಷಿ ಬಾಳಿ ಅಧ್ಯಕ್ಷತೆಯಲ್ಲಿ “ಮಹಿಳೆಯರ ಸಮಸ್ಯೆಗಳು’ ಕುರಿತು ನಡೆದ ವಿಚಾರ ಸಂಕಿರಣದಲ್ಲಿ ಡಾ| ಮೀರಾ ಪಂಡಿತ, ಡಾ| ಶಾಂತಾ ಮಠ, ಡಾ| ಸುಜಾತಾ ಜಂಗಮ ಶೆಟ್ಟಿ ಮಾತನಾಡಿ, ಮಹಿಳೆಯರ ತಲ್ಲಣ, ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು. ದೀಪಾ ಚಂದನ ಪಾಟೀಲ ಮತ್ತು ತಂಡದವರಿಂದ ದಾಂಡಿಯಾ ನೃತ್ಯ ಪ್ರದರ್ಶನ ನಡೆಯಿತು.

ಇಡೀ ಕಾರ್ಯಕ್ರಮ ಇಷ್ಟೆಲ್ಲ ಅಚ್ಚುಕಟ್ಟಾಗಿ ಸುಂದರವಾಗಿ ನಡೆಯಿತು. ಆದರೆ, ರಂಗಮಂದಿರ ಖಾಲಿ ಖಾಲಿ ಕುರ್ಚಿಗಳಿಂದ ಬಣಗುಡುತ್ತಿತ್ತು. ಕಲಾ ತಂಡಗಳ ಕಲಾವಿದರು ಹಾಗೂ ಬೆರಳೆಣಿಕೆಯಷ್ಟು ಆಸಕ್ತರಷ್ಟೆ ಪಾಲ್ಗೊಂಡಿದ್ದರು. ಅಲ್ಲದೇ, ಜನಪ್ರತಿನಿಧಿಗಳ ಪೈಕಿ ಜಿಪಂ ಅಧ್ಯಕ್ಷೆ ಸುವರ್ಣಾ ಹಣಮಂತ ಮಲಾಜಿ ಹೊರತುಪಡಿಸಿ ಯಾರೊಬ್ಬರು ಪಾಲ್ಗೊಂಡಿರಲಿಲ್ಲ. ಮಹಿಳೆಯರಿಗೆಂದೇ ಕಾರ್ಯಕ್ರಮ ಆಯೋಜಿಸಿದ್ದರೂ ಮಹಿಳೆಯರ ಕೊರತೆ ಕೂಡ ಕಾಡುತ್ತಿತ್ತು. ಹೀಗಾಗಿ ಕಾರ್ಯಕ್ರಮದುದ್ದಕ್ಕೂ ಕಲಾವಿದರೇ ಹಾಡಿದರು, ಕುಣಿದರು….ಅವರೇ ನೋಡಿದರು, ಕೇಳಿದರು ಎಂಬಂತಾಯಿತು.

ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಶ್ರಮಪಟ್ಟು ಕಲಾವಿದರನ್ನು ಸೇರಿಸಿ ಉತ್ತಮವಾಗಿ ಕಾರ್ಯಕ್ರಮ ಸಂಘಟಿಸಿದ್ದಾರೆ. ಆದರೆ, ಇಡೀ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಜಯಂತಿಗಳ ಇಲಾಖೆ ಎಂದು ಮರು ನಾಮಕರಣ ಮಾಡಬೇಕು. ಇಲಾಖೆಯಿಂದ ಆಚರಿಸಿರುವ ಮಹನೀಯರನ್ನು ಜಾತಿಗೆ ಸೀಮಿತ ಮಾಡಲಾಗಿದೆ. ಮಹಿಳಾ ದಿನಾಚರಣೆ ಯಾವುದೇ ಜಾತಿಗೆ ಸೇರಿದ್ದರೆ ರಾಜಕಾರಣಿಗಳು ರಂಗಮಂದಿರ ಭರ್ತಿ
ಮಾಡಿಸುತ್ತಿದ್ದರು. 
 ಮೀನಾಕ್ಷಿ ಬಾಳಿ, ಉಪನ್ಯಾಸಕರು, ವಿ.ವಿ. ಮಹಿಳಾ ವಿದ್ಯಾಲಯ

Advertisement
Advertisement

Udayavani is now on Telegram. Click here to join our channel and stay updated with the latest news.

Next