Advertisement
ಮಂಗಳೂರಿನಲ್ಲಿ ಈ ಗುರು-ಶಿಷ್ಯರು ಒಡಗೂಡಿ ಲಲಿತಕಲಾ ಕೇಂದ್ರವೆಂಬ ಕಲಾಸಂಸ್ಥೆಯನ್ನು ಆರಂಭಿಸಿದ್ದು ಈ ಭಾಗದ ನೃತ್ಯಾಸಕ್ತರ ಸೌಭಾಗ್ಯ. ಆದರೆ ಶುದ್ಧ, ಸಂಪ್ರದಾಯಶಿಷ್ಟ ನೃತ್ಯವನ್ನು ಪಡೆಯಬೇಕೆಂಬ ಮುರಳೀಧರ ರಾಯರ ಛಲ, ಬದ್ಧತೆ ಇನ್ನೂ ಇಂಗಿರಲಿಲ್ಲ. ಮತ್ತೆ ಮದರಾಸಿಗೆ ತೆರಳಿದರು, ಪ್ರಖ್ಯಾತ ನೃತ್ಯಪಟು ಚೊಕ್ಕಲಿಂಗಂ ಪಿಳ್ಳೆಯವರಲ್ಲಿ ಅಭ್ಯಾಸ ಆರಂಭಿಸಿದರು. ಆದರೆ ಪಂದ ನಲ್ಲೂರು ಶೈಲಿಯ ನೃತ್ಯಾಭ್ಯಾಸವನ್ನು ಆ ಗುರುಗಳಲ್ಲಿ ಸುಖ ಸಂವಹನದ ಮೂಲಕ ನಡೆಸಲು ಅಸಾಧ್ಯವಾದಾಗ, ಗುರುಗಳ ಆದೇಶದ ಮೇರೆಗೆ ಅವರದ್ದೇ ಶಿಷ್ಯ, ಕೊಚ್ಚಿಯ ಅಭಿನಯ ಶಿರೋಮಣಿ ರಾಜರತ್ನಂ ಪಿಳ್ಳೆಯವರ ಶಿಷ್ಯತ್ವ ಸ್ವೀಕರಿಸಿದರು. ಆದರೆ ಅಲ್ಲಿಯೂ ಹೆಚ್ಚು ಕಾಲ ಅಭ್ಯಾಸ ಸಾಧ್ಯವಾಗಲಿಲ್ಲ.
Related Articles
Advertisement
ಮುರಳೀಧರ ರಾಯರು ಮಂಗಳೂರಿನಲ್ಲಿ ಬಹುಕಾಲ ಇದ್ದು ಮುಂದೆ ತಮ್ಮ ವಾಸವನ್ನು ಕಾರಣಾಂತರಗಳಿಂದ ಮೈಸೂರಿಗೆ ಸ್ಥಳಾಂತರಿಸಿದರು. ಅಲ್ಲಿಯೂ ನೃತ್ಯ ಶಿಕ್ಷಣವನ್ನೇ ಪ್ರಧಾನವಾಗಿರಿಸಿಕೊಂಡರು. ಮೈಸೂರಿನಲ್ಲಿ ದಿಗ್ಗಜ ಸಾಹಿತಿಗಳ ಪರಿಚಯ -ಒಡನಾಟಗಳಿಂದ ಇವರ ಸಾಧನೆ ನೃತ್ಯದಿಂದಾಚೆಗೆ ಸಾಹಿತ್ಯಲೋಕಕ್ಕೂ ವಿಸ್ತರಿಸಿತು. ಅಲ್ಲಿ ಅವರಿಗೆ ಅನೇಕ ಶಿಕ್ಷಣತಜ್ಞರ ಗೆಳೆತನವೂ ಒದಗಿತು. ಹೀಗಾಗಿ ಮೈಸೂರು ವಿವಿ ಪ್ರಕಟಿಸಿದ ಕಿರಿಯರ ಮತ್ತು ಪ್ರೌಢರ ವಿಶ್ವಕೋಶಗಳಲ್ಲಿ ಮುರಳೀಧರ ರಾಯರ ರೇಖಾ ಚಿತ್ರಗಳು, ನೃತ್ಯಭಂಗಿಗಳ ಅಪೂರ್ವ ಛಾಯಾಚಿತ್ರಗಳು ಕಂಗೊಳಿಸುವಂತಾಯಿತು; ನೃತ್ಯಗುರು ವಾಗಿಯಷ್ಟೇ ಮಾನ್ಯರಾಗಿದ್ದ ಅವರ ಪ್ರತಿಭೆಯ ಇನ್ನೊಂದು ಆಯಾಮವೂ ಲೋಕಮುಖಕ್ಕೆ ತಿಳಿಯುವಂತಾಯಿತು.
ಯುವಕನಾಗಿದ್ದಾಗಿನಿಂದಲೂ ಓದುವುದು, ಓದಿದ್ದರ ಸಾರವನ್ನು ದಾಖಲಿಸುವುದು ಅವರ ಹವ್ಯಾಸ. ಈ ಅಪರೂಪದ ಗುಣದಿಂದಾಗಿಯೇ ನಾಟ್ಯಶಾಸ್ತ್ರದಂತಹ ಉದ್ಧಾಮ ಗ್ರಂಥಗಳ ಹತ್ತು ಹಲವು ವಿಷಯಗಳು, ಅಪೂರ್ವ ಒಳನೋಟಗಳು ಕ್ರಮಬದ್ಧ ಟಿಪ್ಪಣಿಗಳಾಗಿ ದಾಖಲುಗೊಂಡು ಇವೆ. ಹೀಗೆ ಗ್ರಂಥಸ್ಥ ವಿಚಾರಗಳೊಡನೆ ತಮ್ಮ ಅಭಿಪ್ರಾಯ ಗಳನ್ನೂ ಕ್ರೋಢೀಕರಿಸಿ ಅವರು ದಾಖಲಿಸಿರುವ ಟಿಪ್ಪಣಿ ಪುಸ್ತಕಗಳು ಒಂದು ಅಪೂರ್ವ ನಿಧಿ. ತಮ್ಮ ಮುತ್ತಿನಂಥ ಅಕ್ಷರಗಳಲ್ಲಿ ಬರೆದು, ಅಗತ್ಯವಿದ್ದಲ್ಲಿ ಕೆಂಪು- ಕಪ್ಪು ಮಸಿಯಲ್ಲಿ ಗುರುತು ಮಾಡಿರುವ; ಪೀಠಿಕೆ, ಅಧ್ಯಾಯ, ಅನುಕ್ರಮಣಿಕೆ, ಪುಟಸಂಖ್ಯೆಗಳು ಉಲ್ಲೇಖಗೊಂಡು, ಅಲ್ಲಲ್ಲಿ ಸ್ವರಚಿತ ರೇಖಾಚಿತ್ರಗಳೊಂದಿಗೆ ಶೋಭಿಸುವ ಈ ಪುಸ್ತಕಗಳು ಬೃಹತ್ ಸಂಪತ್ತು. ಯಾರೇ ತಮ್ಮ ಬಳಿ ಅಭ್ಯಾಸಿಯಾಗಿ ಬಂದರೂ ತಾವೇ ರಚಿಸಿದ ಈ ಪುಸ್ತಕಗಳನ್ನು ಕೊಟ್ಟು, ಚರ್ಚಿಸಿ ಮನ ದಟ್ಟು ಮಾಡುವುದು ಅವರ “ಗುರುತ್ವ’ದ ಲಕ್ಷಣವಾಗಿತ್ತು.
ತಮ್ಮ ನೃತ್ಯ ಬದುಕಿನ ಉಚ್ಛಾ†ಯ ಸ್ಥಿತಿಯಲ್ಲಿ ಮೈಸೂರಿ ನಲ್ಲಿದ್ದ ಮುರಳೀಧರ ರಾಯರು ತಮ್ಮ ಇಳಿವಯಸ್ಸಿನಲ್ಲಿ ಮಂಗಳೂರಿಗೆ ಮರಳಿದರು. ಅಖಂಡ ಬ್ರಹ್ಮಚಾರಿಯಾಗಿ, ನಿಸ್ವಾರ್ಥಿಯಾಗಿ ಬದುಕಿದ ಅವರು ನಿಜಾರ್ಥದಲ್ಲಿ ಅನಿಕೇತನರು. ಪುಸ್ತಕಗಳೇ ಅವರ ಆಸ್ತಿಯಾಗಿತ್ತು. ಮಂಗಳೂರಿನಲ್ಲಿದ್ದ ಕುಟುಂಬಿಕರೂ ದೂರದಲ್ಲಿ ನೆಲೆಸಿದಾಗ, ತಮ್ಮ ಆಪ್ತ ಶಿಷ್ಯೆಯರಲ್ಲೇ ಅವರು ನೆಲೆ ಕಂಡುಕೊಂಡರು. ಅಂತಹ ಶಿಷ್ಯಶ್ರೇಷ್ಠರಲ್ಲಿ ಎದ್ದುಕಾಣುವ ಶ್ರೀವಿದ್ಯಾ ಮುರಲೀ ಧರ್, ವಿದ್ಯಾಶ್ರೀ ರಾಧಾಕೃಷ್ಣ, ಸುಜಾತಾ ಶ್ಯಾಂಸುಂದರ್ ಹಾಗೂ ಶಾರದಾಮಣಿ ಶೇಖರ್ ಗುರು-ಶಿಷ್ಯ ಬಾಂಧವ್ಯಕ್ಕೆ ನಿದರ್ಶನ ಪ್ರಾಯರೂ ಹೌದು. ಬದುಕಿನ ಕೊನೆಯ ಹತ್ತು ವರ್ಷಗಳ ಕಾಲ ಮಂಗಳೂರಿನಲ್ಲಿ, ಸನಾತನ ನಾಟ್ಯಾಲಯದ ರೂವಾರಿ ಶಾರದಾಮಣಿ -ಚಂದ್ರಶೇಖರ್ ದಂಪತಿಯ ನಿವಾಸದಲ್ಲಿ ಅತ್ಯಂತ ಸಂತೃಪ್ತಿ ನೆಮ್ಮದಿಗಳಿಂದ ಬದುಕಿದ್ದ ಮುರಳೀಧರ ರಾಯರು ಬ್ರಹ್ಮಚಾರಿಯಾದರೂ ಒಂಟಿಯಾಗಿರದೆ ಎಲ್ಲರೊಡನೆ ಒಂದಾಗಿ ಬೆರೆತವರು.
ದೃಢ, ಆಜಾನುಬಾಹು ಶರೀರ, ನಸು ಶ್ಯಾಮಲ ವರ್ಣ, ಪ್ರಖರ ಕಣ್ಣುಗಳು, ಸರಳವಾದ ಜುಬ್ಟಾ ಪೈಜಾಮಾ ಪೋಷಾಕು, ಎತ್ತಿ ಹಿಂದಕ್ಕೆ ಬಾಚಿಕೊಂಡ ಕೇಶರಾಶಿ- ನೋಡಿ ದೊಡನೆ ನಮಿಸಬೇಕೆಂಬ ತುಡಿತವನ್ನು ಉಂಟುಮಾಡುತ್ತಿದ್ದ ಸುಸ್ವರೂಪಿ ಅವರು. ಒಲಿದು ಬಂದ ಪ್ರಶಸ್ತಿಗಳನ್ನು ಎಂದೂ ವೈಭವೀಕರಿಸದಿದ್ದ ನಿರಾಡಂಬರ ವ್ಯಕ್ತಿತ್ವ. ಮಗುವಿನಿಂದ ತೊಡಗಿ ಸಮವಯಸ್ಕರ ತನಕ ಸ್ವಾರಸ್ಯಪೂರ್ಣವಾಗಿ ಸಂಭಾಷಿಸುವ ಪ್ರವೃತ್ತಿ, ನೃತ್ಯ -ಸಂಗೀತಗಳ ವಿಷಯ ಬಂದಾಗ ದಿನಗಟ್ಟಲೆ ಚರ್ಚಿಸಬಲ್ಲಷ್ಟು ವಿದ್ವತ್ತು, ದೇಹಿ ಎಂದ ಜ್ಞಾನದಾಹಿಗಳಿಗೆ ಅರಿವನ್ನು ಮೊಗೆದುಕೊಡುವ ಗುರುತ್ವ ಹೊಂದಿದ್ದ; ನೃತ್ಯಕ್ಕಾಗಿ ಬದುಕಿದ ಕಲಾಋಷಿ. ನಮಗಾಗಿ ಅವರು ಉಳಿಸಿ ಹೋಗಿರುವ ಅಪಾರ ಜ್ಞಾನ, ಪುಸ್ತಕರಾಶಿ ಮತ್ತು ಅವರು ಸದಾ ಪ್ರತಿಪಾದಿಸುತ್ತಿದ್ದ ಶಾಸ್ತ್ರ – ಪ್ರಯೋಗ ಸಮ್ಮಿಳಿತವಾದ ಸಂಪ್ರದಾಯಬದ್ಧ ಭರತನಾಟ್ಯವನ್ನು ಎಚ್ಚರದಿಂದ ಕಾಪಿಡುವುದೇ ನಾವು ಅವರಿಗೆ ಸಲ್ಲಿಸಬಹುದಾದ ಅತ್ಯುಚ್ಚ ಗೌರವ.
ಇಹವನ್ನು ತ್ಯಜಿಸುವ ಕೆಲವೇ ದಿನಗಳಿಗೆ ಮುನ್ನ ಶಾರದಾ ಮಣಿ -ಚಂದ್ರಶೇಖರ್ ದಂಪತಿಯ ಪುತ್ರಿ ಶುಭಾಮಣಿಯ ಭರತನಾಟ್ಯ ಪ್ರದರ್ಶನವನ್ನು ಕಣ್ತುಂಬಿಕೊಂಡು, ಆ ಎಳೆಯ ನೃತ್ಯಾಂಗನೆಯನ್ನು ಆಶೀರ್ವದಿಸಿದ್ದು “ಉಸಿರು ಇರುವ ತನಕ ಈ ಜೀವಿತ ನೃತ್ಯಾರ್ಪಿತ’ ಎಂಬುದಕ್ಕೆ ಸಂಕೇತವಲ್ಲದೆ ಇನ್ನೇನು!
ಪ್ರತಿಭಾ ಎಂ.ಎಲ್. ಸಾಮಗ