ಲಕ್ನೋ: ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಎಗ್ಗಿಲ್ಲದೇ ಮುಂದುವರಿದಿದೆ. ಗುರುವಾರವಷ್ಟೇ ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಮೇಲೆ ಬೆಂಕಿ ಹಚ್ಚಿ ಹತ್ಯಾ ಯತ್ನ ನಡೆದಿರುವ ಬೆನ್ನಲ್ಲೇ ನೃತ್ಯಗಾತಿ ಯುವತಿಯೊಬ್ಬಳ ಮೇಲೆ ಗುಂಡು ಹಾರಿಸಿರುವ ಘಟನೆ ವರದಿಯಾಗಿದೆ.
ಇಲ್ಲಿನ ಚಿತ್ರಕೂಟ ಪ್ರದೇಶದಲ್ಲಿ ಈ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ. ಇಲ್ಲಿನ ತಿರ್ಕಾ ಗ್ರಾಮದಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭ ಒಂದರಲ್ಲಿ ನರ್ತಿಸುತ್ತಿದ್ದ ಯುವತಿ ಸ್ವಲ್ಪ ಹೊತ್ತು ತಾನು ಕುಣಿಯುತ್ತಿರುವುದನ್ನು ನಿಲ್ಲಿಸಿದಳೆಂದು ಕೋಪಗೊಂಡ ವ್ಯಕ್ತಿಯೊಬ್ಬ ಆಕೆಯ ಮುಖಕ್ಕೆ ನೇರವಾಗಿ ಫೈರಿಂಗ್ ಮಾಡಿದ್ದಾನೆ. ಘಟನೆಯಲ್ಲಿ ಯುವತಿ ಗಂಭೀರವಾಗಿ ಗಾಯಗೊಂಡಿದ್ದು ಆಕೆಯನ್ನು ಆಸ್ಪತ್ರಗೆ ದಾಖಲಿಸಲಾಗಿದೆ.
ತನ್ನ ತಂಡದ ಸದಸ್ಯರ ಜೊತೆಯಲ್ಲಿ ಸಂತ್ರಸ್ತೆ ಕುಣಿಯುತ್ತಿರುತ್ತಾಳೆ, ಈ ನಡುವೆ ಸಾವರಿಸಿಕೊಳ್ಳುವ ಸಲುವಾಗಿ ಸ್ವಲ್ಪ ಹೊತ್ತು ಹಾಗೆಯೇ ನಿಂತುಕೊಳ್ಳುತ್ತಾಳೆ. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ಡ್ಯಾನ್ಸ್ ನಿಲ್ಲಿಸಿದರೆ ಶೂಟ್ ಮಾಡುತ್ತೇನೆ ಎಂದು ಹೇಳಿದಾಗ ಪಕ್ಕದಲ್ಲಿದ್ದ ಇನ್ನೊಬ್ಬ ‘ಶೂಟ್ ಮಾಡು ನೀನು’ ಎಂದು ಹೇಳುವ ಧ್ವನಿ ಕೇಳಿಸುತ್ತದೆ. ತಕ್ಷಣವೇ ಆ ವ್ಯಕ್ತಿ ಯುವತಿಯ ಕಡೆಗೆ ಗುರಿಮಾಡಿ ಗುಂಡು ಹಾರಿಸುತ್ತಾನೆ.
ಆಕೆಯ ಜೊತೆಯಲ್ಲಿದ್ದ ನೃತ್ಯಗಾತಿಯರೂ ಸೇರಿದಂತೆ ಅಲ್ಲಿದ್ದವರೆಲ್ಲಾ ಒಮ್ಮೆಲೇ ಗಾಬರಿಗೊಳ್ಳುತ್ತಾರೆ. ಮತ್ತು ಸ್ವಲ್ಪ ಹೊತ್ತಿನ ಬಳಿಕ ರಕ್ತದ ಮಡುವಿನಲ್ಲಿ ಬಿದ್ದಿದ್ದ ಆಕೆಯನ್ನು ಎತ್ತಿಕೊಂಡು ಆಸ್ಪತ್ರೆಗೆ ಸೇರಿಸುತ್ತಾರೆ.
ಈ ಘಟನೆಯಲ್ಲಿ ಮೂರು ಜನ ಗಾಯಗೊಂಡಿದ್ದಾರೆ. ಡಿಸೆಂಬರ್ 01ರಂದೇ ಈ ಘಟನೆ ನಡೆದಿದ್ದರೂ ತಡವಾಗಿ ಬೆಳಕಿಗೆ ಬಂದಿದೆ. ಗ್ರಾಮದ ಮುಖಂಡನ ಸಮ್ಮುಖದಲ್ಲೇ ಈ ಘಟನೆ ನಡೆದಿದ್ದು ಆತನ ಕುಟುಂಬ ಸದಸ್ಯರಲ್ಲಿ ಒಬ್ಬರು ಈ ಯುವತಿಗೆ ಶೂಟ್ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದೀಗ ಆರೋಪಿಯನ್ನು ಪತ್ತೆಹಚ್ಚಲಾಗಿದ್ದು ಆತನನ್ನು ಬಂಧಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.