Advertisement

ನೃತ್ಯ ಪುಷ್ಪಂ-ನೃತ್ಯ ದೀಪಂ : ಎರಡು ವಿಶಿಷ್ಟ ಭರತನಾಟ್ಯ ಅಭಿವ್ಯಕಿ

12:30 PM Oct 26, 2018 | |

ನೃತ್ಯ ನಿಕೇತನ (ರಿ.) ಕೊಡವೂರು ಇವರು ಕೃಷ್ಣ ಮಠದ ರಾಜಾಂಗಣದಲ್ಲಿ ಕೃಷ್ಣನಿಗೆ ಅರ್ಪಿಸಿದ “ನೃತ್ಯಪುಷ್ಪಂ’ ಹಾಗೂ ಬೆಳಗಿಸಿದ “ನೃತ್ಯ ದೀಪಂ’ ಭರತನಾಟ್ಯ ಕಾರ್ಯಕ್ರಮ ಸಮರ್ಪಕ ಬೆಳಕಿನ ವ್ಯವಸ್ಥೆ, ಭರತನಾಟ್ಯದ ಚೌಕಟ್ಟಿನೊಳಗೆ ಸುಧಾರಿತ ರಂಜನೀಯ ಅಂಶಗಳಿಂದಾಗಿ ಪ್ರೇಕ್ಷಕರನ್ನು
ಮುಟ್ಟುವಲ್ಲಿ ಯಶಸ್ವಿಯಾಯಿತು.

Advertisement

ಪ್ರಥಮ ದಿನದಂದು ಗಣನಾಥನನ್ನು ಸ್ತುತಿಸುವ ಮಧುವಂತಿ ರಾಗ, ಆದಿತಾಳದಲ್ಲಿ ಸಂಯೋಜಿಸಲಾದ ಹಾಡಿನ ಸಾಹಿತ್ಯದಲ್ಲಿ ಮೋದಕಪ್ರಿಯ ಅಂತೆಯೇ ನಾಟ್ಯಪ್ರಿಯ ಗಣಪತಿಯ ಸ್ಥೂಲ ವರ್ಣನೆ ಇದೆ. ಬಾಲ ಗಣಪತಿಗೆ ತಾಯಿ ಪಾರ್ವತಿ ಕಲಿಸಿ ಕೊಡುತ್ತಿರುವ ಸಂದರ್ಭ ಪ್ರವೇಶಿಸಿದ ಈಶ್ವರನು ಗಣಪತಿಗೆ ಲಾಸ್ಯ ತಾಂಡವ ನೃತ್ಯ ಕಲಿಸಿಕೊಡುವುದು ಮಾತ್ರವಲ್ಲ ಅವರೊಂದಿಗೆ ಸೇರಿ ಮೂವರೂ ನರ್ತಿಸುವ ಕಥೆ ಇರುವ ಹಾಡನ್ನು ಪ್ರದರ್ಶಿಸಿದರು.

ಮೂರನೇಯ ನೃತ್ಯ ಕುಸುಮವಾಗಿ ನವರಸ ಭೀಮ ಮೂಡಿ ಬಂತು. ಎಲ್ಲಾ ರಸಗಳನ್ನು ಪ್ರಬುದ್ಧವಾಗಿ ಪ್ರದರ್ಶಿಸಿದ ನವರಸನಾಯಕಿ ಮಾನಸಿ ಸುಧೀರ್‌ ಅಭಿನಂದನಾರ್ಹರು. ನಂತರ ಸಂತ ಸೂರದಾಸರ ಭಜನೆ ಆಧಾರಿತ ಭಾವಪೂರ್ಣ ನೃತ್ಯ ಪ್ರದರ್ಶಿತವಾಯಿತು. ಮುಂದಿನ ಪ್ರಸ್ತುತಿ ಭಕ್ತ ಕನಕದಾಸರ ದಶಾವತರ ವರ್ಣಿಸುವ ಹಾಡು ಮಾತಿನ “ದೇವಿ ನಮ್ಮ ದ್ಯಾವರು ಬಂದರು’ ಎನ್ನುವ ಜನಪದೀಯ ಶೈಲಿಯ ನೃತ್ಯ. ಎರಡನೆಯ ದಿನ ನಾಟ್ಯ ದೇವತೆಗೆ “ನೃತ್ಯದೀಪಂ’ ಬೆಳಗಿಸುವ ಕಾರ್ಯಕ್ರಮ ಸಾಕಾರಗೊಂಡಿತು. ಪ್ರಾರ್ಥನಾ ನೃತ್ಯ “ಪುಷ್ಪಾಂಜಲಿ’ ಮಿಶ್ರತಿಲಂಗ್‌ ರಾಗದಲ್ಲಿ ಆದಿತಾಳದಲ್ಲಿ ರಚಿಸಿದ ಈ ಕೃತಿಯಲ್ಲಿ ಸಾಹಿತ್ಯ ಭಾಗದಲ್ಲಿ ಬ್ರಹ್ಮನು ಸಾಮವೇದದಿಂದ ಪಾಠ, ಯಜುರ್ವೇದದಿಂದ ಅಭಿನಯ, ಅಥರ್ವ ವೇದದಿಂದ ರಸ ಮತ್ತು ಸಾಮವೇದದಿಂದ ಗೀತವನ್ನು ಆಯ್ದು ಸಂಗೀತ-ನೃತ್ಯವೆಂಬ ಪಂಚಮವೇದ ನಾಟ್ಯವೇದವಾಗಿ ನಮ್ಮನ್ನೆಲ್ಲ ಪೊರೆಯಲಿ ಎನ್ನುವ ಆಶಯವನ್ನು ಕಲಾವಿದೆಯರು ವೈವಿಧ್ಯಮಯ ಹೆಜ್ಜೆ-ತಾಳಗಳಿಂದ ವ್ಯಕ್ತಪಡಿಸಿದರು. ಎರಡನೇಯ ನೃತ್ಯದಲ್ಲಿ ನೃತ್ಯಾಂಗನೆಯರ ಕ್ಷಿಪ್ರ ಚಲನವಲನ ವಿಶಿಷ್ಟ ವಿನ್ಯಾಸ ಮುದ ನೀಡಿತು.

ಬೇಲೂರು ಶಿಲಾಬಾಲಿಕೆಯ ಶುಕಭಾಷಿಣಿ ಉಳಿದ ಶಿಲಾಬಾಲಿಕೆಯರೊಂದಿಗೆ ಸಂಭಾಷಿಸುವ ಪದ್ಯಭಾಗವನ್ನು ಕಲಾವಿದೆಯರು ಸೊಗಸಾಗಿ ನರ್ತಿಸಿದರು. ಅದರಲ್ಲೂ ಬಾಲಕಲಾವಿದೆ ಸುರಭಿ ಸುಧೀರ್‌ ನಿರ್ವಹಿಸಿದ ಶುಕಭಾಷಿಣಿ ಪಾತ್ರ ಗಮನಾರ್ಹವಾಗಿತ್ತು.

ಮುಂದೆ ಮಿಶ್ರ ಯಮನ್‌ರಾಗದಲ್ಲಿ ರಂಗನೇಶ್ವರ್‌ ಇವರ ಮರಾಠಿ ಕೃತಿ “ರುಸಲೀ ರಾಧಾ ರುಸಲಾ ಮಾಧವ’ ಕೃಷ್ಣ-ರಾಧೆಯರ ಮುನಿಸನ್ನು ಶಮನಗೊಳಿಸುವ ಗೋಪಿಕೆಯರ ಪ್ರಯತ್ನ, ರಾಧೆಯ ಮನಸ್ಸನ್ನು ವಿಚಲಿತಗೊಳಿಸಲು ಬೇರೆ ಗೋಪಿಕಾ ಸ್ತ್ರೀಯರೊಡನೆ ಚೆಲ್ಲಾಟವಾಡುವ ಕೃಷ್ಣನ ರಂಗಿನಾಟ, ಶೃಂಗಾರಭರಿತ ಮಾಧವನ ತುಂಟಾಟ ಮನ ಗೆದ್ದದ್ದು ಮಾತ್ರವಲ್ಲ ರಾಧಾ-ಮಾಧವರ ಪುನಃ ರ್ಮಿಲನಕ್ಕೂ ಸಾಕ್ಷಿಯಾಯಿತು.

Advertisement

ಎಚ್‌. ಎಸ್‌. ವೆಂಕಟೇಶ ಮೂರ್ತಿಯವರ “ವೃಂದಾವನದೊಳು ಒಂದಿರುಳು’ ನಮ್ಮ ಕಣ್ಮುಂದೆ ಕೃಷ್ಣ ವಿಹರಿಸಿದ ವೃಂದಾವನದ ಪರಿಕಲ್ಪನೆಯನ್ನು ತೆರೆದಿಡುತ್ತದೆ. ಸಿಟ್ಟುಗೊಂಡ ತಾಯಿಯನ್ನು ಕೃಷ್ಣ ಸಮಾಧಾನಿಸುವ ಪರಿ, ಕೊನೆಗೆ ಮಾತೃಹೃದಯ ನೀರಾಗಿ ಹರ್ಷೋದ್ಗಾರ ಸುರಿಸುವ ಯಶೋದಾ ಪಾತ್ರ ನಿರ್ವಹಿಸಿದ ವಿ| ಮಾನಸಿ ಸುಧೀರ್‌ ಹಾಗೂ ವಿ| ಅನಘಶ್ರೀ ಅಭಿನಂದನಾರ್ಹರು.
 
ಮುಂದಿನ ಪ್ರಸ್ತುತಿ ಬಾಲಕೃಷ್ಣ ಲೀಲೆಗಳಲ್ಲೊಂದಾದ “ಕಾಳಿಂಗ ಮರ್ದನ’ ತಿಲ್ಲಾನ ನೃತ್ಯ. ಬೇರೆ ತಿಲ್ಲಾನಗಳಿಗಿಂತ ಇದು ವಿಭಿನ್ನವಾಗಿದ್ದು, ಸುಂದರ ಶೊಲ್ಕಟ್ಟು ಹಾಗೂ ಸೊಗಸಾದ ಸಾಹಿತ್ಯ ಹೊಂದಿರುವ ಚಿತ್ರಕಾವ್ಯದಂತಿದೆ. ಸರೋವರದ ಅಲೆ, ಕಾಳಿಂಗ ಸರ್ಪದ ಏಳು ಹೆಡೆ, ಅದರ ನಡೆ, ಬಾಲಕೃಷ್ಣನ ಬಾಲಲೀಲೆ ಎಲ್ಲವನ್ನು ವಿಶಿಷ್ಟವಾಗಿ ವೈವಿಧ್ಯಮಯವಾಗಿ ಪ್ರದರ್ಶಿಸಲಾಯಿತು. 

“ನಂದಗೋಪ ನಂದನನ ಕರೆ ಬಾರೇ ನೀರೆ’ ಎನ್ನುವ ಹಾಡಿನಲ್ಲಿ ಗೋಪಿಕೆಯರು ತಮಗಿಷ್ಟವಾದ ರೂಪದಲ್ಲಿ ಕೃಷ್ಣನ ಕರೆ ತನ್ನಿ ಎಂದು ಗೋಗರೆಯುವ ಸಾಹಿತ್ಯ ಹೊಂದಿರುವ ಹಾಡು ಶೃಂಗಾರ ರಸಭರಿತವಾಗಿದೆ. ಅವರವರ ಮನೋಕಾಮನೆಯಂತೆ ಪ್ರಕಟವಾಗುವ ಕೃಷ್ಣನಾಗಿ, ಬೇಡಿದವರ ಕಾಡುವ ತುಂಟನಾಗಿ, ಗೋಪಿಕೆಯರ ಮನಮೋಹಕನಾಗಿ ವಿಜೃಂಭಿಸುವ ಕೃಷ್ಣನನ್ನು ಸಮರ್ಥವಾಗಿ ರಂಗಕ್ಕಿಳಿಸಿದ ಅನಘಶ್ರೀಯ ಕೊಡುಗೆ ಪ್ರಶಂಸನೀಯ.

Advertisement

Udayavani is now on Telegram. Click here to join our channel and stay updated with the latest news.

Next