ಶಾಸ್ತ್ರೀಯ ಶೈಲಿಯಲ್ಲಿ ದೈವದ ಕಾರ್ಣಿಕವನ್ನು ಸಾರುವ ಅಪರೂಪದ ನೃತ್ಯಪ್ರಯೋಗ. ಮಾಲ್ದಿದೇವಿ ಸತ್ಯದ ಗರ್ಭಕ್ಕಾಗಿ ಸಮಾಜದ ವಿರುದ್ಧ ಹೋರಾಡಿದ ಸನ್ನಿವೇಶಗಳು ರಂಗದಲ್ಲಿ ಅದ್ಭುತವಾಗಿ ಮೂಡಿಬಂದವು. ಬಬ್ಬುವಿನ ಕಾರ್ಣಿಕವನ್ನು ಎಳೆಎಳೆಯಾಗಿ ಪ್ರದರ್ಶಿಸಿದ್ದಕ್ಕೆ ಚಪ್ಪಾಳೆಯೇ ಸಾಕ್ಷಿ.
ಅಚ್ಚುಕಟ್ಟಾದ ವೇಷಭೂಷಣ, ಪರಿಪೂರ್ಣ ರಂಗನಡೆ , ಭಾವಪೂರ್ಣ ಅಭಿನಯ ರಂಗಕ್ಕೆ ತಕ್ಕುದಾದ ದೃಶ್ಯ-ಶ್ರಾವ್ಯಗಳು ಸಮ್ಮಿಲನಗೊಂಡು ಪ್ರೇಕ್ಷಕರನ್ನು ಕದಲದಂತೆ ಕೂರಿಸಿದ್ದು ಇತ್ತೀಚೆಗೆ ಉಪ್ಪೂರಿನ ತೆಂಕಬೆಟ್ಟುವಿನಲ್ಲಿ ನಡೆದ “ಮೈಮೆದ ಬಬ್ಬುಸ್ವಾಮಿ’ನೃತ್ಯರೂಪಕ.
ಜಾನಕಿ ಬ್ರಹ್ಮಾವರ ಇವರ ರಚನೆಯಲ್ಲಿ , ವಿ| ಕೆ. ಭವಾನಿ ಶಂಕರ್ ಅವರ ದಕ್ಷ ನಿರ್ದೇಶನದಲ್ಲಿ , ವೈಭವ್ ಪೈ ಮಣಿಪಾಲ ಇವರ ಸಂಗೀತ ಸಂಯೋಜನೆಯಲ್ಲಿ ಮನೀಷ್ ಅಮ್ಮುಂಜೆ ಹಾಗೂ ಸಂಗಡಿಗರಿಂದ ಮೂಡಿಬಂದ ರಂಗಪರಿಕಲ್ಪನೆ ಯಶಸ್ವಿಯಾಗಿ ಮೂರನೆಯ ಭಾರಿ ಶ್ರೀ ಬ್ರಾಮರಿ ನಾಟ್ಯಾಲಯ ಅಮ್ಮುಂಜೆ ಇಲ್ಲಿನ ನೃತ್ಯಕಲಾವಿದರಿಂದ ಪ್ರದರ್ಶನಗೊಂಡ ನೃತ್ಯರೂಪಕ ಭಾವಪೂರಿತ ಅಭಿನಯ ಚತುರತೆಗೆ ಸಾಕ್ಷಿಯಾಯಿತು.
ಕಚ್ಚಾರಿನ ಕಾಂತಣ್ಣ ಬನ್ನಾರ ಎನ್ನುವ ಸಾಮಂತ ಒಂದು ಹೆಣ್ಣು ಮಗುವನ್ನು ತಂದು ಸಾಕಿ ಮಾಲ್ದಿ ಎಂದು ಹೆಸರಿಟ್ಟಲ್ಲಿಂದ ಕಥೆ ಮುಂದುವರಿಯುತ್ತದೆ. ಮುಂದೆ ಮಾಲ್ದಿ ಹೆಣ್ಣು ಹೋಗಿ ಪ್ರೌಢಾವಸ್ಥೆಗೆ ಬಂದಾಗ ಶುದ್ಧಮೀಹಕ್ಕೆ ನೀರಿಗೆ ಮುಳುಗಿದಾಗ ಶಿವನ ಒಂದಂಶ ಇವಳ ಗರ್ಭದಲ್ಲಿ ಪ್ರವೇಶವಾಗಿ ಬಬ್ಬುವಿನ ಜನನವಾಗುತ್ತದೆ. ಇದೊಂದು ಶಾಸ್ತ್ರೀಯ ಶೈಲಿಯಲ್ಲಿ ದೈವದ ಕಾರ್ಣಿಕವನ್ನು ಸಾರುವ ಅಪರೂಪದ ನೃತ್ಯಪ್ರಯೋಗ. ಮಾಲ್ದಿದೇವಿ ಸತ್ಯದ ಗರ್ಭಕ್ಕಾಗಿ ಸಮಾಜದ ವಿರುದ್ಧ ಹೋರಾಡಿದ ಸನ್ನಿವೇಶಗಳು ರಂಗದಲ್ಲಿ ಅದ್ಭುತವಾಗಿ ಮೂಡಿಬಂದವು. ಹಾಗೆಯೇ ಬಬ್ಬುವಿನ ಕಾರ್ಣಿಕವನ್ನು ಎಳೆಎಳೆಯಾಗಿ ಪ್ರದರ್ಶಿಸಿದ್ದು ಪ್ರೇಕ್ಷಕರ ಚಪ್ಪಾಳೆಯೇ ಇದಕ್ಕೆ ಸಾಕ್ಷಿಯಾಯಿತು. ಕತೆಯ ಮಧ್ಯದಲ್ಲಿ ಬರುವ ನರ್ತಕಿಯರ ಲಾಸ್ಯನೃತ್ಯಗಳ ಸಂಯೋಜನೆ, ಹಳ್ಳಿ ಸೊಗಡಿನ ಪಾಡªನ, ಜನಪದ ಹಾಡುಗಳು ರಂಜಿಸಿದವು.
ಮುಂದೆ ಇಕ್ಕೇರಿಯ ಅರಸ ಕಂಡಾಲದ ಯಜಮಾನರಿಗೆ ಬಾವಿ ನೀರಿನ ಸೆಲೆಗಾಗಿ ಒಂದು ಓಲೆ ಬರೆದು ಕಳುಹಿಸುತ್ತಾರೆ. ಅದಕ್ಕಾಗಿ ಬಬ್ಬು ಇಕ್ಕೇರಿಗೆ ಪ್ರಯಾಣಿಸುವಾಗ ದಾರಿಯಲ್ಲಿ ಸನ್ಯಾಸಿ ಅಮ್ಮನವರ ಗುಡಿಗೆ ಕೈಮುಗಿದು ಮುಂದೆ ಸಾಗುವಾಗ ಹೂಕಟ್ಟುವ ಹೆಂಗಳೆಯರು. ಇದೆಲ್ಲ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದು ಭಕ್ತಿ ಉಕ್ಕಿಸುವಂತಿತ್ತು,ಸತ್ಯದರ್ಶನವಾಗುವಂತಿತ್ತು. ಮುಂದೆ ಬಬ್ಬು ಏಣಿಗೆ ಕಾಲುಕೊಟ್ಟು ಬಾವಿಗಿಳಿಯುತ್ತಾನೆ. ಬಾವಿಯಲ್ಲಿ ನೀರು ಕೊಳಗವಾಗಿ ಹರಿಯುತ್ತದೆ. ಮೇಲಿನ ಮಂದಿ ಏಣಿಯನ್ನು ಎಳೆದು ಬಾವಿಯ ಬಾಯಿಗೆ ಹಾಸುಗಲ್ಲನ್ನು ಹಾಸುತ್ತಾರೆ.
ರೂಪಕ ಹೀಗೆ ಸಾಗುತ್ತಿರುವಾಗ ತನ್ನಿಮಾನಿಗ ಅದೇ ದಾರಿಯಾಗಿ ಬಂದು ದಣಿವು ನಿವಾರಿಸಲು ಕುಳಿತಾಗ ಒಳಗಿನ ಬಾವಿಯಿಂದ ಒಮ್ಮೊಮ್ಮೆ ಒಂದೊಂದು ವಿಧದ ಪ್ರಾಣಿ -ಪಕ್ಷಿಗಳ ದನಿ ಕೇಳಿಸುತ್ತದೆ. ಇವೆಲ್ಲವೂ ರಂಗದಲ್ಲಿ ಜೀವಂತ ಪ್ರಾಣಿಗಳ ಕೂಗಿನಂತೆ ಕೇಳುತ್ತಿದ್ದವು. ಕೊನೆಗೆ ಒಂದು ಗಂಡಸಿನ ನೋವಿನ ದನಿ. ತನ್ನಿ ಮಾನಿಗ ತನ್ನ ಬೆಳ್ಳಿಯ ಗೆಜ್ಜೆಕತ್ತಿಯಿಂದ ಹದಿನಾರು ಗೆರೆ ಎಳೆದು ಹಾಸುಗಲ್ಲನ್ನು ನುಚ್ಚುನೂರು ಮಾಡುತ್ತಾಳೆ. ಮೇಲೆತ್ತಲು ಸಹಾಯ ಕೋರಿದ ಗಂಡುದನಿಗೆ ತಾನು ಉಟ್ಟ ಅರವತ್ತು ಮೊಳದ ಸೀರೆಯಲ್ಲಿ ಮೂವತ್ತು ಮೊಳವನ್ನು ಬಾವಿಗಿಳಿಸುತ್ತಾಳೆ. ಬಬ್ಬು ಭೂಮಿನೋಡುತ್ತ ಮೇಲೇರಿ ಬರುತ್ತಾನೆ. ಅಣ್ಣ-ತಂಗಿ ಕಾಯ ಬಿಟ್ಟು ಮಾಯಕ್ಕೆ ಸಂದು ನೆಲೆಯಾಗುತ್ತಾರೆ. ಬಬ್ಬುಸ್ವಾಮಿಯ ಮಹಿಮೆಯನ್ನು ಕೆ. ಭವಾನಿ ಶಂಕರ್ ನಿರ್ದೇಶನದಲ್ಲಿ ವಿದ್ಯಾರ್ಥಿಗಳು ವಿಹಂಗಮವಾಗಿ ನಡೆಸಿಕೊಟ್ಟರು.
ಸುಮಾರು ಒಂದೂವರೆ ಗಂಟೆಯ ಈ ಕಾರ್ಯಕ್ರಮದಲ್ಲಿ ನೃತ್ಯಾರ್ಥಿಗಳ ವೇಷಭೂಷಣದ ಬದಲಾವಣೆ ಹಾಗೂ ಚಲನೆ , ಪ್ರಾಣಿ-ಪಕ್ಷಿಗಳ ಪ್ರತಿಕೃತಿಗಳ ಬಳಕೆ, ಪಾತ್ರಧಾರಿಗಳ ಆಂಗಿಕ ಅಭಿನಯ, ರಂಗವಿನ್ಯಾಸ, ವಿಭಿನ್ನ ಬೆಳಕಿನ ಹಿನ್ನೆಲೆಯಲ್ಲಿ ರಂಗದ ಚೆಲುವು ಇವೆಲ್ಲವುಗಳಿಂದ ರೂಪಕ ಸಹೃದಯರ ಮನಮಿಡಿಯುವಂತೆ ಮಾಡಿತು.
ಸುಮಂಗಲಾ