ಬೆಂಗಳೂರು: ಡ್ರಾಪ್ ಕೊಡುವ ನೆಪದಲ್ಲಿ ಬಿಬಿಎ ವಿದ್ಯಾರ್ಥಿನಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ ಡ್ಯಾನ್ಸ್ ಮಾಸ್ಟರ್‌ನನ್ನು ಎಚ್‌ಎಸ್‌ಆರ್ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಡುಗೋಡಿಯ ಎಸ್.ಆರ್.ನಗರ ನಿವಾಸಿ ಮುಖೇಶ್ವರನ್(24) ಬಂಧಿತ.
ಆರೋಪಿ ಭಾನುವಾರ ಮುಂಜಾನೆ 1.30ಕ್ಕೆ ಡ್ರಾಪ್ ಕೇಳಿದ ನಾಗಲ್ಯಾಂಡ್ ಮೂಲದ ಯುವತಿಯನ್ನು ದ್ವಿಚಕ್ರ ವಾಹನದಲ್ಲಿ ಕೂರಿಸಿಕೊಂಡು ಎಚ್‌ಎಸ್‌ಆರ್ ಲೇಔಟ್ 7ನೇ ಸೆಕ್ಟರ್‌ನ ರಾಜೀವ್ ಗಾಂಧಿನಗರದ ಹೊಸೂರು ಮುಖ್ಯರಸ್ತೆಯ ಗಿರಿಯಾಸ್ ಶೋ ರೂಮ್ ಹಿಂಭಾಗದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದ. ಈ ಸಂಬಂಧ ಸಂತ್ರಸ್ತೆ ಸ್ನೇಹಿತ ಹರ್ಷವರ್ಧನ್ ಚೌಹಾಣ್ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು, ಸಿಸಿ ಕ್ಯಾಮೆರಾ ದೃಶ್ಯಾವಳಿಗಳಲ್ಲಿ ಸೆರೆಯಾಗಿದ್ದ ದ್ವಿಚಕ್ರ ವಾಹನದ ನೋಂದಣಿ ಸಂಖ್ಯೆ ಆಧರಿಸಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿ ಕೊರಿಯೋಗ್ರಾಫರ್: ತಮಿಳುನಾಡು ಮೂಲದ ಮುಖೇಶ್ವರನ್, 21 ವರ್ಷಗಳಿಂದ ನಗರ ದಲ್ಲಿ ನೆಲೆಸಿದ್ದಾನೆ. ವೃತ್ತಿಯಲ್ಲಿ ಕೊರಿಯೋಗ್ರಾಫರ್ ಆಗಿದ್ದಾನೆ. ಭಾನುವಾರ ರಾತ್ರಿ ಕೋರಮಂಗಲದಲ್ಲಿ ಸ್ನೇಹಿತರ ಜತೆಗೆ ಮದ್ಯದ ಪಾರ್ಟಿ ಮುಗಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಮನೆಗೆ ಬೈಕ್‌ನಲ್ಲಿ ಹೋಗುತ್ತಿದ್ದ. ಮಾರ್ಗ ಮಧ್ಯೆ ಯುವತಿ ಡ್ರಾಪ್ ಕೇಳಿದ್ದಾಳೆ. ಬಳಿಕ ದ್ವಿಚಕ್ರ ವಾಹನದಲ್ಲಿ ಕೂರಿಸಿಕೊಂಡು ಹೊರಟ ಆರೋಪಿ ಮಾರ್ಗ ಮಧ್ಯೆ ಹೊಸೂರು ಮುಖ್ಯರಸ್ತೆ ಕಡೆ ಬೈಕ್ ತಿರುಗಿಸಿದ್ದಾನೆ. ಈ ವೇಳೆ ಎಚ್ಚೆತ್ತ ಸಂತ್ರಸ್ತೆ ತನ್ನ ಮೊಬೈಲ್‌ನಲ್ಲಿ ಎಸ್‌ಒಎಸ್ ಬಟನ್ ಒತ್ತಿ ಸ್ನೇಹಿತರಿಗೆ ತುರ್ತು ಸಂದೇಶ ಹಾಗೂ ಲೊಕೇಶನ್ ಕಳುಹಿಸಿದ್ದಾಳೆ. ಅಷ್ಟರಲ್ಲಿ ಆರೋಪಿಯು ಹೊಸೂರು ಮುಖ್ಯರಸ್ತೆಯ ಗಿರಿಯಾಸ್ ಶೋ ರೂಮ್ ಹಿಂಭಾಗದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಬಲವಂತವಾಗಿ ಆಕೆಯ ಬಟ್ಟೆಗಳನ್ನು ಕಳಚಿ ಬೆತ್ತಲೆಗೊಳಿಸಿ, ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಮತ್ತೂಂದೆಡೆ ತುರ್ತು ಸಂದೇಶ ಮತ್ತು ಲೊಕೇಶನ್ ಆಧರಿಸಿ ಯುವತಿಯ ಸ್ನೇಹಿತರು ಸ್ಥಳಕ್ಕೆ ಬಂದಿದ್ದು, ಬೆತ್ತಲಾಗಿ ಅಸ್ವಸ್ಥ ಸ್ಥಿತಿಯಲ್ಲಿ ಬಿದ್ದಿದ್ದ ಯುವತಿಯನ್ನು ರಕ್ಷಿಸಿ ಕಾರಿನಲ್ಲಿ ಕೂರಿಸಿದ್ದಾರೆ. ಈ ವೇಳೆ ಆರೋಪಿಯು ಸ್ಥಳದಲ್ಲಿ ಅರೆಬೆತ್ತಲಾಗಿ ಗಾಬರಿಯಲ್ಲಿ ನಿಂತಿರುವುದನ್ನು ನೋಡಿ ಹಿಡಿಯಲು ಪ್ರಯತ್ನಿಸಿದ್ದಾರೆ. ಆದರೆ, ಆರೋಪಿ ತಪ್ಪಿಸಿಕೊಂಡು ಪರಾರಿಯಾಗಿದ್ದ.
ಬೈಕ್ ನೋಂದಣಿ ಸಂಖ್ಯೆ ಆಧರಿಸಿ ಬಂಧನ: ಈ ಬಗ್ಗೆ ಸುದ್ದಿ ತಿಳಿದು ಆಸ್ಪತ್ರೆಗೆ ದೌಡಾಯಿಸಿದ ಪೊಲೀಸರು, ಯುವತಿಯ ಸ್ನೇಹಿತನಿಂದ ದೂರು ಪಡೆದು ದುಷ್ಕರ್ಮಿಯ ಬಂಧನಕ್ಕಾಗಿ 5 ವಿಶೇಷ ತಂಡ ರಚಿಸಿಕೊಂಡಿದ್ದರು. ಬಳಿಕ ಯುವತಿ ಡ್ರಾಪ್ ಪಡೆದ ಸ್ಥಳದಿಂದ ಘಟನಾ ಸ್ಥಳದ ವರೆಗಿನ ಸಿಸಿ ಕ್ಯಾಮೆರಾ ದೃಶ್ಯಾವಳಿ ಸಂಗ್ರಹಿಸಿ ಪರಿಶೀಲಿಸಿದಾಗ, ಆರೋಪಿ ದ್ವಿಚಕ್ರ ವಾಹನದ ನೋಂದಣಿ ಸಂಖ್ಯೆ ಪತ್ತೆಯಾಗಿದ್ದು, ಅದನ್ನು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಸಂತ್ರಸ್ತೆ ನಾಗಾಲ್ಯಾಂಡ್ ಸೇನಾಧಿಕಾರಿ ಪುತ್ರಿ: ಸಂತ್ರಸ್ತೆ ನಾಗಾಲ್ಯಾಂಡ್ ಮೂಲದ ಸೇನಾಧಿ ಕಾರಿಯೊಬ್ಬರ ಪುತ್ರಿ. ನಗರದ ಹೊರವಲ ಯದ ಚಂದಾಪುರದಲ್ಲಿ ನೆಲೆಸಿರುವ ಈಕೆ ಆನೇಕಲ್‌ನ ಖಾಸಗಿ ಕಾಲೇಜಿನಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದಾಳೆ. ಘಟನೆಯಿಂದ ಆತಂಕಗೊಂಡಿರುವ ಆಕೆ, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಆಕೆ ಸಂಪೂರ್ಣ ವಾಗಿ ಚೇತರಿಸಿಕೊಂಡ ಬಳಿಕ ಆಕೆಯಿಂದ ಇನ್ನಷ್ಟು ಹೇಳಿಕೆ ದಾಖಲಿಸಿಕೊಳ್ಳಲಾಗುತ್ತದೆ ಎಂದು ಪೊಲೀಸರು ಹೇಳಿದರು.