ಧಾರವಾಡ: ನೃತ್ಯದ ಕಲಿಯಬೇಕೆಂಬ ಹಠದಿಂದ ಬಡತನದಲ್ಲಿದ್ದ ನಾನು ಚಲನಚಿತ್ರ ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ನಡೆಯುತ್ತಿದ್ದ ನೃತ್ಯ ನೋಡಿ ನೃತ್ಯ ಕಲಿತೆ ಎಂದು ನಾಟ್ಯಗುರು ವಿದುಷಿ ಮಂದಾಕಿನಿ ಉಡುಪಿ ಹೇಳಿದರು.
ಉತ್ತರ ಕರ್ನಾಟಕ ಲೇಖಕಿಯರ ಸಂಘ ಹಮ್ಮಿಕೊಂಡಿದ್ದ ಅನನ್ಯ ಮಹಿಳೆಯೊಂದಿಗೆ ಮಾತುಕತೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಡತನದಲ್ಲಿ ಬೆಳೆದ ನಾನು ಬಾಲ್ಯದಲ್ಲಿ ಚಲನಚಿತ್ರಗಳಲ್ಲಿ ಹಾಗೂ ವೇದಿಕೆಗಳಲ್ಲಿ ನೃತ್ಯಗಳನ್ನು ನೋಡಿ, ನಾನೂ ನಾಟ್ಯ ಕಲಿಯಬೇಕೆಂಬ ಅದಮ್ಯ ಆಶೆ ಹೊಂದಿದ್ದೆ.
ಆದರೆ, ದುಡ್ಡು ಕೊಟ್ಟು ನೃತ್ಯ ಕಲಿಯುವಷ್ಟು ಸ್ಥಿತಿವಂತಿಕೆ ಇರಲಿಲ್ಲ. ಹೀಗಾಗಿ ಗುರುಗಳಿಂದ ಉಚಿತವಾಗಿ ನೃತ್ಯ ಕಲಿತೆ. ಆದರೆ ವಿದ್ಯೆಯನ್ನು ಪುಕ್ಕಟೆಯಾಗಿ ಎಂದಿಗೂ ಕಲಿಯಬಾರದು. ನಮ್ಮ ಕಾಲದಲ್ಲಿ ಡಾನ್ಸ್ ಅಂದರೇನೇ ತಾತ್ಸಾರ.
ಆಚಾರ್ಯರ ಮನೆತನದಲ್ಲಿ ಹುಟ್ಟಿದ ಇವಳು ಡಾನ್ಸ್ ಕಲಿಯುತ್ತಾಳೆ ಎಂದು ಅನೇಕ ವಿಧದಿಂದ ನನ್ನನ್ನು ನೋಡಿದವರು ವ್ಯಂಗವಾಡುತ್ತಿದ್ದರು. ಆದಾಗ್ಯೂ ಸಹ ಸಮಾಜದ ನಿಂದನೆಗೆ ಕಿವಿಗೊಡದೆ, ನನ್ನ ಗುರಿಯತ್ತ ದೃಷ್ಟಿಯಿಟ್ಟೆ ಅದರಲ್ಲಿ ತೃಪ್ತಿಪಟ್ಟೆ. ನನ್ನ ತಂದೆ-ತಾಯಿ ಕಲಿಕೆಗೆ ಪೊತ್ಸಾಹ ನೀಡಿದರು.
ಮದುವೆಯಿಂದ ನನ್ನ ಕಲೆಗೆ ಅಡ್ಡಿಯಾಗಬಹುದು ಎಂಬ ಏಕೈಕ ಉದ್ದೇಶದಿಂದ ಮದುವೆ ಬಗ್ಗೆ ಪ್ರಸ್ತಾವಗಳು ಬಂದರೂ ನಿರಾಕರಿಸಿದೆ. ತಂದೆ-ತಾಯಿ ಈ ವಿಷಯದಲ್ಲಿ ಎಂದಿಗೂ ನನ್ನ ಮೇಲೆ ಒತ್ತಾಯ ಹೇರಲಿಲ್ಲ. ನೃತ್ಯವೇ ನನ್ನ ಉಸಿರಾಗಿ ಉಳಿದಿದೆ. ಸದ್ಯ 10 ವರ್ಷಗಳ ಸತತ ಪ್ರಯತ್ನದಿಂದ ಸರ್ಕಾರದಿಂದ ಈಗ 2 ವರ್ಷಗಳಿಂದ ಒಂದೂವರೆ ಸಾವಿರ ಗೌರವಧನ ದೊರೆಯುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ| ಹೇಮಾ ಪಟ್ಟಣಶೆಟ್ಟಿ ಮಾತನಾಡಿದರು. ವೀಣಾ ಗುಡಿ ಪ್ರಾರ್ಥಿಸಿದರು. ಲಲಿತಾ ಪಾಟೀಲ ಸ್ವಾಗತಿಸಿದರು. ಸರಸ್ವತಿ ಭೋಸಲೆ ಪರಿಚಯಿಸಿದರು. ಪುಷ್ಪಾ ಹಾಲಭಾವಿ ನಿರೂಪಿಸಿದರು.