Advertisement

ನೃತ್ಯದಲ್ಲಿ ಟಾಪ್‌ 50ರಲ್ಲಿ ಎರಡನೇ ಸ್ಥಾನ ಗಿಟ್ಟಿಸಿಕೊಂಡ ಸುಳೇಭಾವಿ ಬಾಲಕಿಯ ಮೆಗಾ ಝಲಕ್‌

12:31 PM Jan 10, 2021 | Team Udayavani |

ಬೆಳಗಾವಿ: ಚಿಕ್ಕ ವಯಸ್ಸಿನಿಂದಲೇ ನೃತ್ಯದಲ್ಲಿ ಆಸಕ್ತಿ ಹೊಂದಿರುವ ಈ ಬಾಲಕಿ ಜೀ ಕನ್ನಡ ವಾಹಿನಿಯ ಡ್ಯಾನ್ಸ್‌ ಕರ್ನಾಟಕ
ಡ್ಯಾನ್ಸ್‌ ಮೆಗಾ ಆಡಿಷನ್‌ನಲ್ಲಿ ಉತ್ತಮ ನೃತ್ಯ ಪ್ರದರ್ಶನ ನೀಡುವುದರ ಮೂಲಕ ಬೆಳಗಾವಿ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ.
ಬೆಳಗಾವಿ ತಾಲೂಕಿನ ಸುಳೇಭಾವಿ ಅಮೂಲ್ಯ ರಾಘವೇಂದ್ರ ದೂಧಗಾಂವಿ ಎಂಬ 13 ವರ್ಷದ ಬಾಲಕಿ ಜೀ ಕನ್ನಡ ವಾಹಿನಿಯ ಈ ಕಾರ್ಯಕ್ರಮದ ತೀರ್ಪುಗಾರರ ಮೆಚ್ಚುಗೆಗೆ ಕಾರಣಳಾಗಿದ್ದಾಳೆ. 6ರಿಂದ 60 ವರ್ಷ ವಯಸ್ಸಿನ ಸ್ಪರ್ಧಾಳುಗಳ ಟಾಪ್‌ 50ರಲ್ಲಿ
ಎರಡನೇ ಸ್ಥಾನ ಬಾಚಿಕೊಂಡಿದ್ದಾರೆ.

Advertisement

ಮೂಲತಃ ಸುಳೇಭಾವಿ ಗ್ರಾಮದ ಬಾಲಕಿ ಅಮೂಲ್ಯ ಆರನೇ ತರಗತಿವರೆಗೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಓದಿದ್ದು, ನೃತ್ಯ
ಅಭ್ಯಾಸಕ್ಕಾಗಿ ಬೆಳಗಾವಿಯ ಗೋಮಟೇಶ ಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿದ್ದಾಳೆ. ತಂದೆ ರಾಘವೇಂದ್ರ ಲಾರಿ ಚಾಲಕನಿದ್ದು, ತಾಯಿ ಕಾವೇರಿ ಗೃಹಿಣಿ. ಮೊದಲಿನಿಂದಲೂ ಅಮೂಲ್ಯ ನೃತ್ಯದಲ್ಲಿ ಆಸಕ್ತಿ ಹೊಂದಿದ್ದು, ನಾಲ್ಕನೇ
ವಯಸ್ಸಿನಿಂದಲೂ ಭರತನಾಟ್ಯ ಕಲಿತಿದ್ದಳು. ಈಗ ನಾಲ್ಕೈದು ವರ್ಷಗಳಿಂದ ಪಾಶ್ಚಿಮಾತ್ಯ ನೃತ್ಯದ ಬಗ್ಗೆ ಆಸಕ್ತಿ ಹೊಂದಿ ಅಭ್ಯಾಸ ನಡೆಸಿದ್ದಾಳೆ. ಬೆಳಗಾವಿಯ ವಿನೋದ ಬಿ. ಅವರ ವಿ.ಬಿ. ಡ್ಯಾನ್ಸ್‌ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾಳೆ.

ಇದನ್ನೂ ಓದಿ:ಏಳು ರಾಜ್ಯಗಳಲ್ಲಿ ಕಾಣಿಸಿಕೊಂಡ ಹಕ್ಕಿ ಜ್ವರ: ಶನಿವಾರ 1200 ಕ್ಕೂ ಹೆಚ್ಚು ಹಕ್ಕಿಗಳ ಸಾವು!

ಬೆಳಗಾವಿ ಹಾಗೂ ಬೆಂಗಳೂರಿನಲ್ಲಿ ನಡೆದ ಜೀ ಕನ್ನಡ ವಾಹಿನಿಯ ಮೇಗಾ ಆಡಿಷನ್‌ನಲ್ಲಿ ಆಯ್ಕೆ ಆಗಿದ್ದು, ಉತ್ತಮ ವೇದಿಕೆ ಸಿಕ್ಕಂತಾಗಿದೆ. ಈ ಮುಂಚೆ ಬೆಳವಡಿ ಮಲ್ಲಮ್ಮ ಉತ್ಸವ, ಕಿತ್ತೂರು ಉತ್ಸವ, ಸತೀಶ ಶುಗರ್ ಅವಾರ್ಡ್ಸ್‌ ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಅಮೂಲ್ಯ ನೃತ್ಯ ಪ್ರದರ್ಶನ ನೀಡಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.

Advertisement

2019ರ ಡ್ಯಾನ್ಸ್‌ ವರ್ಲ್ಡ್ ಕಪ್‌ ಎಂಬ ಪ್ರದರ್ಶನದಲ್ಲೂ ಅಮೂಲ್ಯ ಆಯ್ಕೆ ಆಗಿದ್ದಳು. ಇಟಲಿ ದೇಶಕ್ಕೆ ಹೋಗಬೇಕಾಗಿ ಎಲ್ಲ ತಯಾರಿ ಮಾಡಿಕೊಂಡಿದ್ದಾಗ ಕೊರೊನಾ ಹಿನ್ನೆಲೆಯಲ್ಲಿ ಈ ಪ್ರದರ್ಶನ ರದ್ದು ಪಡಿಸಲಾಯಿತು. ಜತೆಗೆ ಜೀ ಇಟಿಸಿ ಬಾಲಿವುಡ್‌ ಹಿಂದಿ ವಾಹಿನಿಯಲ್ಲಿ ಪ್ರಸಾರವಾಗುವ ಡ್ಯಾನ್ಸ್‌ ಕಾ ದಂಗಲ್‌ ಎಂಬ ಕಾರ್ಯಕ್ರಮಕ್ಕೂ ಅಮೂಲ್ಯ ಆಯ್ಕೆ ಆಗಿದ್ದಳು. ಆ. 14ಕ್ಕೆ ಮೇಗಾ ಆಡಿಷನ್‌ ಇತ್ತು. ಈ ಪೈಕಿ ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ಕಾರ್ಯಕ್ರಮವನ್ನೇ ಅಮೂಲ್ಯ ಒಪ್ಪಿಕೊಂಡಿದ್ದಾಳೆ.

ಕಳೆದ ಏಳೆಂಟು ವರ್ಷಗಳಿಂದ ನೃತ್ಯ ಅಭ್ಯಾಸ ಮಾಡುತ್ತಿರುವ ಅಮೂಲ್ಯಗೆ ಈ ವರ್ಷದ ಲಾಕ್‌ಡೌನ್‌ ವರದಾನವಾಗಿ
ಪರಿಣಮಿಸಿದೆ. ಈ ಮುಂಚೆ ಕೇವಲ 2-3 ಗಂಟೆ ಅಭ್ಯಾಸ ನಡೆಸುತ್ತಿದ್ದ ಅಮೂಲ್ಯ ಲಾಕ್‌ಡೌನ್‌ದಲ್ಲಿ ದಿನಪೂರ್ತಿ ಅಭ್ಯಾಸ
ಮಾಡುವ ಮೂಲಕ ಇಂಥ ಮೆಗಾ ಆಡಿಷನ್‌ಗೆ ಆಯ್ಕೆ ಆಗಿದ್ದಾಳೆ.

– ಭೈರೋಬಾ ಕಾಂಬಳೆ

Advertisement

Udayavani is now on Telegram. Click here to join our channel and stay updated with the latest news.

Next