Advertisement

ಬೆಳ್ಮಣ್‌ ಹೊಸಮಾರು ಶಾಲಾವರಣದಲ್ಲೇ ಡಾಮರು ಮಿಕ್ಸಿಂಗ್‌

11:42 PM Nov 30, 2019 | Team Udayavani |

ವಿಶೇಷ ವರದಿ –ಬೆಳ್ಮಣ್‌: ಹೊಸಮಾರು ಸರಕಾರಿ ಶಾಲಾವರಣದಲ್ಲಿ ಡಾಮರು ಮಿಕ್ಸಿಂಗ್‌ ಕೆಲಸ ನಡೆಯುತ್ತಿದ್ದು ವಿದ್ಯಾರ್ಥಿಗಳು ಆತಂಕವನ್ನು ಎದುರಿಸುತ್ತಿದ್ದರೂ ಸಂಬಂಧಪಟ್ಟ ಇಲಾಖೆ ಮಾತ್ರ ಮೌನವಾಗಿದ್ದಾರೆ.

Advertisement

ಮಕ್ಕಳಿಗೆ ಪಾಠ ಆಲಿಸಲು ತೊಂದರೆಯಾಗುತ್ತಿದ್ದು ಪರಿಸರವೂ ಅಪಾಯಕಾರಿಯಾಗಿದ್ದು ಹೆತ್ತವರು ಹಾಗೂ ಸ್ಥಳೀಯರು ಆಕ್ರೋಶ ಗೊಂಡಿದ್ದಾರೆ.

ಬೆಳ್ಮಣ್‌ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಹೊಸಮಾರು ಸರಕಾರಿ ಶಾಲಾ ಆವರಣದಲ್ಲಿ ಕಳೆದ ಮೂರು ದಿನಗಳಿಂದ ಬೆಂಕಿ ಹಾಕಿ ಡಾಮರು ಕಾಯಿಸಿ, ಮಿಕ್ಸಿಂಗ್‌ ಮಾಡುವ ಕೆಲಸ ನಡೆಯುತ್ತಿದ್ದು ಭಾರೀ ಅಪಾಯಕಾರಿಯಾಗಿದೆ. ಶಾಲಾ ಮೈದಾನದ ಅಂಗನವಾಡಿ ಸಮೀಪ ಡಾಮರುಗಳನ್ನು ಬೆಂಕಿ ಹಾಕಿ ಕಾಯಿಸಲಾಗುತ್ತದೆ ಹಾಗೂ ಜಲ್ಲಿ, ಟಾರು ಎಲ್ಲವೂ ಅಲ್ಲಿಯೇ ಹಾಕ ಲಾಗಿದೆ. ಮೈದಾನದಲ್ಲೇ ಬೆಂಕಿ ಹಾಕಿರುವ ಪರಿಣಾಮ ಶಾಲೆಯಲ್ಲಿ ಕಲಿಯುವ ಪುಟಾಣಿಗಳು ಅಪಾಯ ಎದುರಿಸುತ್ತಿದ್ದಾರೆ ಎನ್ನುವುದು ಸ್ಥಳೀಯರ ಆರೋಪ.

ಶಬ್ದದಿಂದ ಪಾಠಕ್ಕೆ ತೊಂದರೆ
ಇಲ್ಲಿನ ಅಂಗನವಾಡಿ ಸಹಿತ ಒಂದರಿಂದ ಏಳನೆಯ ತರಗತಿವರೆಗಿನ ವಿದ್ಯಾರ್ಥಿಗಳು ಓದುತ್ತಿದ್ದು ಡಾಮರು ಮಿಕ್ಸಿಂಗ್‌ ಯಂತ್ರದ ಶಬ್ದಕ್ಕೆ ಪಾಠವನ್ನು ಕೇಳಲು ತೊಂದರೆಯಾಗುತ್ತಿದೆ ಹಾಗೂ ಶಾಲಾವರಣ ಸುತ್ತ ಹೊಗೆ ಆವರಿಸಿದ್ದು ಮಕ್ಕಳ ಆರೋಗ್ಯದ ಮೇಲೂನೇರ ಪರಿಣಾಮ ಬೀರುವ ಎಲ್ಲ ಸಾಧ್ಯತೆಗಳಿವೆ. ಶಾಲಾವರಣದ ಮೈದಾನದಲ್ಲೇ ಡಾಮರು ಡಬ್ಬಿಗಳಿಗೆ ಬೆಂಕಿ ಹಾಕಿ ಕರಗಿಸಲಾಗುತ್ತಿದೆ. ಶಾಲಾ ಮಕ್ಕಳು ಉಪಯೋಗಿರುವ ಶೌಚಾಲಯದ ಪಕ್ಕದಲ್ಲೇ ಕಟ್ಟಿಗೆ ಡಾಮರು ಡಬ್ಬಿಗಳು ರಾಶಿ ಬಿದ್ದಿದ್ದು ಮಕ್ಕಳು ಅತ್ತಿತ್ತ ಓಡಾಲು ಕಷ್ಟಕರವಾಗುತ್ತಿದೆ. ಅಪಾಯಕಾರಿಯಾಗಿದ್ದರೂ ಶಾಲಾ ಆವರಣದಲ್ಲಿ ಮಿಕ್ಸಿಂಗ್‌ ಮಾಡಲು ಯಾರು ಅನುಮತಿ ನೀಡಿದರು, ನಮ್ಮ ಮಕ್ಕಳ ಜೀವದ ಜತೆ ಯಾಕೆ ಈ ರೀತಿ ಆಟವಾಡುತ್ತಾರೆ ಎಂದು ಹೆತ್ತವರು ಪ್ರಶ್ನಿಸಿದ್ದಾರೆ.

ಎಲ್ಲಿಯ ರಸ್ತೆ , ಎಲ್ಲಿ ಮಿಕ್ಸಿಂಗ್‌..?
ಹೊಸಮಾರು ಸರಕಾರಿ ಶಾಲಾ ಆವರಣದಲ್ಲಿ ಮಿಕ್ಸಿಂಗ್‌ಗೊಳ್ಳುತ್ತಿರುವ ಡಾಮರು ಇಲ್ಲಿನ ಪಕ್ಕದ ರಸ್ತೆಗೆ ಹಾಕಲು ಅಲ್ಲ , ಬದಲಾಗಿ 6 ರಿಂದ 7 ಕಿ,.ಮೀ. ದೂರದ ಶಿರ್ವ ರಸ್ತೆಯಿಂದ ಮುಂಡ್ಕೂರು ,ಕಿನ್ನಿಗೋಳಿ ರಾಜ್ಯ ಹೆದ್ದಾರಿಯ ದುರಸ್ತಿ ಕೆಲಸಕ್ಕಾಗಿ ಬಳಕೆಯಾಗುತ್ತಿದೆ. ಈ ಬಗ್ಗೆ ರಾಜ್ಯ ಹೆದ್ದಾರಿಯ ಪಕ್ಕದಲ್ಲಿ ಎಲ್ಲಿಯಾದರೂ ಡಾಮರು ಮಿಕ್ಸಿಂಗ್‌ ಮಾಡಬಹುದಿತ್ತು, ಆದರೆ ಗುತ್ತಿಗೆದಾರ ಹೊಸಮಾರಿನ ಶಾಲಾವರಣದಲ್ಲಿ ಡಾಮರು ಮಿಕ್ಸಿಂಗ್‌ ಮಾಡುತ್ತಿದ್ದು ಗ್ರಾಮಸ್ಥರ ಆಕ್ರೋಶಕ್ಕೆ ಗುರಿಯಾಗಿದೆ.

Advertisement

ಶಾಲಾ ರಂಗಮಂದಿರವೂ ಹಾಳು
ಇಲ್ಲಿ ಕೆಲಸವನ್ನು ಮಾಡುವ ಕೂಲಿ ಕಾರ್ಮಿಕರು ಶಾಲಾ ರಂಗ ಮಂದಿರದಲ್ಲೇ ಉಳಿದುಕೊಳ್ಳುತ್ತಿದ್ದು ಈ ಮೂಲಕ ರಂಗ ಮಂದಿರವೂ ಹಾಳಾಗುತ್ತಿದೆ ಎನ್ನುವುದು ಸ್ಥಳೀಯರ ಆರೋಪ. ಕೂಲಿ ಕಾರ್ಮಿಕರು ಶಾಲೆಯ ಬಯಲು ಸಮೀಪದಲ್ಲೇ ಮಲ ವಿಸರ್ಜನೆಯನ್ನು ಮಾಡುತ್ತಿದ್ದು ಸ್ವತ್ಛತೆಗೂ ತೊಂದರೆಯಾಗಿದೆ.

ಶಿಕ್ಷಕರಿಗೆ ಯಾವುದೇ ಮಾಹಿತಿ ಇಲ್ಲ
ಬೆಳಗ್ಗೆ ಶಾಲೆಗೆ ಹಾಜರಾಗುವ ವೇಳೆ ಶಾಲಾ ಮೈದಾನದಲ್ಲಿ ಮಿಕ್ಸಿಂಗ್‌ ಕೆಲಸ ನಡೆಯುತ್ತಿತ್ತು. ಇಲ್ಲಿ ಮಿಕ್ಸಿಂಗ್‌ ಶಬ್ದದಿಂದ ಪಾಠಕ್ಕೆ ತೊಂದರೆಯಾಗುತ್ತದೆ ಎನ್ನುವ ಹಿನ್ನೆಲೆಯಲ್ಲಿ ಸ್ಥಳೀಯ ಪಂಚಾಯತ್‌ ಸದಸ್ಯರಿಗೂ ಮಾಹಿತಿಯನ್ನು ನೀಡಿದ್ದೇವೆ ಎಂದು ಶಾಲಾ ಶಿಕ್ಷಕರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಮಕ್ಕಳಿಗೆ ಶಬ್ದ ಹಾಗೂ ವಾಯು ಮಾಲಿನ್ಯದ ಜತೆಯಲ್ಲಿ ಅಪಾಯಕಾರಿ ಬೆಂಕಿಯ ನಡುವೆ ಪಾಠವನ್ನು ಮಾಡುತ್ತ ಮಕ್ಕಳ ಮೇಲೆ ಕಣ್ಣಿಡ ಬೇಕಾದ ಕೆಲಸ ಶಿಕ್ಷಕರದ್ದಾಗಿದೆ. ಗುತ್ತಿಗೆದಾರರ ವಿರುದ್ದ ಹೆತ್ತವರು ಆಕ್ರೋಶಿತ ರಾಗಿದ್ದು ಕೂಡಲೇ ಇಲ್ಲಿಂದ ಡಾಮರು ಮಿಕ್ಸಿಂಗ್‌ ಯಂತ್ರ ಹಾಗೂ ಡಬ್ಬಿಗಳನ್ನು ಕೂಡಲೇ ತೆರವುಗೊಳಿಸಬೇಕೆಂದು ಜನ ಆಗ್ರಹಿಸಿದ್ದಾರೆ.

ತೆರವಿಗೆ ಭರವಸೆ
ನಮಗೆ ಯಾವುದೇ ಮಾಹಿತಿಯಿಲ್ಲ, ಶಾಲೆಗೆ ಬರುವ ಸಂದರ್ಭ ಇಲ್ಲಿ ಕೆಲಸಗಳು ನಡೆಯುತ್ತಿತ್ತು. ಶಾಲಾ ಆವರಣದಲ್ಲಿರುವುದರಿಂದ ತೊಂದರೆಯಾಗುತ್ತದೆ ಎಂದು ಸ್ಥಳೀಯ ಪಂಚಾಯತ್‌ ಸದಸ್ಯರಿಗೂ ತಿಳಿಸಿದ್ದು ಅವರು ತೆರವುಗೊಳಿಸುವ ಭರವಸೆ ನೀಡಿದ್ದಾರೆ.
– ಕಲಾವತಿ,ಶಾಲಾ ಮುಖ್ಯ ಶಿಕ್ಷಕಿ (ಪ್ರಭಾರ)

ಗುತ್ತಿಗೆದಾರರನ್ನು ಎಚ್ಚರಿಸಲಾಗುವುದು
ಈ ಅಪಾಯಕಾರಿ ಪ್ರಕ್ರಿಯೆ ಬಗ್ಗೆ ಕೂಡಲೇ ಗುತ್ತಿಗೆದಾರರಿಗೆ ಎಚ್ಚರಿಸಿ ಅಲ್ಲಿಂದ ತೆರವು ಮಾಡುವಂತೆ ತಿಳಿಸಲಾಗಿದೆ.
-ವಾರಿಜಾ ಸಾಲ್ಯಾನ್‌ ,ಬೆಳ್ಮಣ್‌, ಗ್ರಾ.ಪಂ ಅಧ್ಯಕ್ಷೆ.,

ಶಾಲಾ ಮಕ್ಕಳಿಗೆ ಅಪಾಯಕಾರಿ
ಡಾಮರು ಮಿಕ್ಸಿಂಗ್‌ ಯಂತ್ರ ಕಾರ್ಯೋನ್ಮುಖವಾದಾಗಲೇ ಎಚ್ಚರಿಸಿದ್ದೆವು. ಇದರಿಂದ ಶಾಲಾ ಮಕ್ಕಳಿಗೆ ತುಂಬಾನೇ ಅಪಾಯಕಾರಿಯಾಗಿದೆ.
-ಶಿವಪ್ರಸಾದ್‌,ಗ್ರಾ.ಪಂ ಸದಸ್ಯ.

Advertisement

Udayavani is now on Telegram. Click here to join our channel and stay updated with the latest news.

Next