Advertisement

ಗುತ್ತಿಗಾರು: ಕಾಡಿನಲ್ಲಿ ಡಾಮರು ರಾಶಿ ಪತ್ತೆ, ಭ್ರಷ್ಟಾಚಾರ ಶಂಕೆ

03:12 AM May 27, 2019 | sudhir |

ಸುಬ್ರಹ್ಮಣ್ಯ: ಗುತ್ತಿಗಾರು ಸನಿಹದ ಮೊಗ್ರ ಎಂಬಲ್ಲಿ ಕಾಡಿನೊಳಗೆ ತ್ಯಾಜ್ಯ ಸ್ಥಿತಿಯಲ್ಲಿ ಸುಮಾರು ಒಂದು ಲೋಡಿನಷ್ಟು ಜಲ್ಲಿ ಮಿಶ್ರಿತ ಡಾಮರು ಪತ್ತೆಯಾಗಿದೆ. ಇದನ್ನು ರಸ್ತೆ ದುರಸ್ತಿಗೆ ಬಳಸದೆ ಚೆಲ್ಲಿರುವ ಬಗ್ಗೆ ಸ್ಥಳೀಯರು ಸಂದೇಹ ವ್ಯಕ್ತಪಡಿಸಿದ್ದಾರೆ.

Advertisement

ಗುತ್ತಿಗಾರು ಗ್ರಾ.ಪಂ. ವ್ಯಾಪ್ತಿಯ ಏರಣಗುಡ್ಡೆ-ಎಡೋಣಿ ಜಿ.ಪಂ. ರಸ್ತೆ ಹದಗೆಟ್ಟಿತ್ತು. ಸ್ಥಳೀಯರ ಆಗ್ರಹದ ಬಳಿಕ 2 ವರ್ಷಗಳ ಹಿಂದೆ ಇದನ್ನು ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಅಭಿವೃದ್ಧಿಗೊಳಿಸಲಾಗಿತ್ತು. ಸ್ವಲ್ಪ ಭಾಗ ಕಾಂಕ್ರೀಟ್ ಮತ್ತು ಉಳಿದೆಡೆ ಡಾಮರು ಹಾಸಲಾಗಿತ್ತು. ಸ್ವಲ್ಪವೇ ಸಮಯದಲ್ಲಿ ಕೆಲವೆಡೆ ಕಿತ್ತು ಹೋಗಿದ್ದು, ತೇಪೆ ಕೆಲಸ ಕೆಲವು ದಿನಗಳಿಂದ ನಡೆದಿತ್ತು. ಈ ನಡುವೆ ಕಾಡಿನೊಳಗೆ ಡಾಮರು ಮಿಶ್ರಣ ಪತ್ತೆಯಾಗಿದೆ.

ಬಳಕೆ ಮಾಡದ ಮಿಶ್ರಣ

ರಸ್ತೆಗೆಂದು ಸಿದ್ಧಪಡಿಸಿದ ಮಿಶ್ರಣವನ್ನು ಬಳಸದೆ ಇಲ್ಲಿ ಸುರಿದು ಹೋಗಿದ್ದಾರೆ ಎನ್ನುವ ಅನುಮಾನ ಸ್ಥಳೀಯರದು. ಇದಕ್ಕೆ ಪೂರಕವಾಗಿ ರಸ್ತೆ ಹೊಂಡಗಳು ಹಾಗೆಯೇ ಇವೆ. ಈ ವಿಚಾರ ವಾಗಿ ಸೂಕ್ತ ತನಿಖೆ ನಡೆಯಬೇಕು ಎನ್ನುವ ಒತ್ತಾಯ ಕೇಳಿಬಂದಿದೆ.

ಪತ್ತೆಯಾಗಿರುವ ಮಿಶ್ರಣ ಒಂದು ಪಿಕಪ್‌ ಲೋಡ್‌ನ‌ಷ್ಟಿದೆ. ರಸ್ತೆಗೆಂದು ಸಿದ್ಧಪಡಿಸಿದ ಡಾಮರನ್ನು ಪೂರ್ಣವಾಗಿ ಬಳಸದೆ ಇಲ್ಲಿ ಸುರಿಯಲಾಗಿದೆಯೇ ಅಥವಾ ಹೆಚ್ಚುವರಿ ಮಿಶ್ರಣವನ್ನು ಚೆಲ್ಲಿದ್ದಾರೆಯೇ ಎನ್ನುವುದು ತನಿಖೆಯಿಂದ ಗೊತ್ತಾಗಬಹುದು.

Advertisement

ಕಾರಣ ಏನೇ ಇದ್ದರೂ ಡಾಮರು ಮಿಶ್ರಣವನ್ನು ಹಾಳು ಮಾಡಿರುವುದು ಅಕ್ಷಮ್ಯ. ತಾತ್ಕಾಲಿಕ ದುರಸ್ತಿಯ ಗುತ್ತಿಗೆ ವಹಿಸಿಕೊಂಡವರೇ ಈ ಕೃತ್ಯ ಎಸಗಿರುವ ಶಂಕೆ ಸ್ಥಳೀಯರದು.

Advertisement

Udayavani is now on Telegram. Click here to join our channel and stay updated with the latest news.

Next