Advertisement

ಡಂಬಳ:ಕಳೆ ತೆರವಿಗೆ ಸೈಕಲ್‌ ವೀಡರ್‌ ನೆರವು-ಹೆಚ್ಚಳವಾದ ಬೇಡಿಕೆ

05:57 PM Jul 25, 2024 | Team Udayavani |

ಉದಯವಾಣಿ ಸಮಾಚಾರ
ಡಂಬಳ: ಕೊಲಿ ಹೆಚ್ಚಳವಾದ ಕಾರಣ ಸಣ್ಣ ಹಾಗೂ ಅತಿಸಣ್ಣ ರೈತರಿಗೆ ಹೊಲದಲ್ಲಿನ ಕಳೆ ತೆಗೆಯುವುದು ತುಂಬಾ ಕಷ್ಟಕರ ಕೆಲಸವಾಗಿದ್ದು, ಆದರೆ ಇವರಿಗೆ ಸೈಕಲ್‌ ವೀಡರ್‌ ಯಂತ್ರ ನೆರೆವಿಗೆ ಬರುತ್ತಿದೆ. ಸದ್ಯ ರಿಯಾಯ್ತಿ ದರದಲ್ಲಿ ಕೃಷಿ ಇಲಾಖೆಯಿಂದ ದೊರೆಯುವ ಸೈಕಲ್‌ ವೀಡರ್‌ಗಳಿಗೆ ಬೇಡಿಕೆ ಹೆಚ್ಚಿದೆ.

Advertisement

ಬೆಳೆ ಮಧ್ಯದ ಕಳೆ ತೆಗೆಯಲು ಹಾಗೂ ಎಡೆಕುಂಟೆ ಹೊಡೆಯಲು ಉಪಯೋಗಕ್ಕೆ ಬರುವ ಸೈಕಲ್‌ ವೀಡರ್‌ಗಳು ಕಡಿಮೆ ಬೆಲೆಗೆ ದೊರೆತು ಹೆಚ್ಚು ಕೆಲಸಕ್ಕೆ ಉಪಯೋಗಕ್ಕೆ ಬರುತ್ತವೆ. ಆದ್ದರಿಂದ ಇವುಗಳಿಗೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ವರ್ಷದಿಂದ ವರ್ಷಕ್ಕೆ ದಾಸ್ತಾನು ಸಂಖ್ಯೆ ಸಹ ಹೆಚ್ಚಾಗುತ್ತಿದೆ.

ಮುಂಡರಗಿ ಮತ್ತು ಡಂಬಳ ಹೋಬಳಿ ರೈತ ಸಂಪರ್ಕ ಕೇಂದ್ರಗಳಲ್ಲಿ 2 ಮುಂಡರಗಿ ರೈತ ಸಂಪರ್ಕ ಕೇಂದ್ರದಲ್ಲಿ 771, ಡಂಬಳ ರೈತ ಸಂಪರ್ಕ ಕೇಂದ್ರದಲ್ಲಿ 771 ಸೇರಿ ಒಟ್ಟು 1542 ಸೈಕಲ್‌ ವೀಡರ್‌ಗಳನ್ನು ದಾಸ್ತಾನು ಮಾಡಲಾಗಿತ್ತು. ಅದರಲ್ಲಿ 945 ಮಾರಾಟ ಆಗಿವೆ. 2024-2025ನೇ ಸಾಲಿಗೆ ಅಂದಾಜು 1000 ಸೈಕಲ್‌ ವೀಡರ್‌ಗಳ ಬೇಡಿಕೆ ಇದ್ದು, ಕೃಷಿ ಇಲಾಖೆಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ರಿಯಾಯ್ತಿ ದರದಲ್ಲಿ ಮಾರಾಟ:
ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಶೇ. 50 ರಿಯಾಯ್ತಿ ದರದಲ್ಲಿ ರೈತರಿಗೆ ಸೈಕಲ್‌ ವೀಡರ್‌ ವಿತರಣೆ ಮಾಡಲಾಗುತ್ತಿದೆ. ಇದು ಸಣ್ಣ, ಅತಿಸಣ್ಣ ರೈತರಿಗೆ, ಎತ್ತುಗಳಿಲ್ಲದವರಿಗೆ ಹೆಚ್ಚು ಅನುಕೂಲಕರ. ಸೈಕಲ್‌ ವೀಡರ್‌ ಒಂದಕ್ಕೆ ಪೂರ್ಣ ದರ 2000 ರೂ. ಇದೆ. ರೈತರ ವಂತಿಗೆ 1000 ರೂ. ಇದ್ದು, ರಿಯಾಯ್ತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.

ಇಂದಿನ ದುಬಾರಿ ದುನಿಯಾದಲ್ಲಿ ಸಣ್ಣ ರೈತರು ಎತ್ತುಗಳನ್ನು ಸಾಕಣೆ ಮಾಡುವುದು ಕಷ್ಟದ ಕೆಲಸ. ಅಲ್ಲದೇ ಕೂಲಿ ದರವೂ
ಹೆಚ್ಚಳವಾಗಿದೆ. ಮಳೆಗಾಲದಲ್ಲಿ ಬೆಳೆಯಲ್ಲಿನ ಕಳೆ ನಿರ್ವಹಣೆ ಸವಾಲಿನ ಕೆಲಸವಾಗಿದೆ. ಇದಕ್ಕೆ ರೈತರು ಸುಲಭವ ಮಾರ್ಗ ಕಂಡುಕೊಳ್ಳಲು ಸೈಕಲ್‌ ವೀಡರ್‌ ಮೊರೆ ಹೋಗುತ್ತಿದ್ದಾರೆ. ಇವು ಶೇಂಗಾ, ಹತ್ತಿ, ಮೆಕ್ಕೆಜೋಳ, ತೊಗರಿ, ಸಜ್ಜೆ, ತರಕಾರಿ ಅಲ್ಲದೇ ಬೀಜೋತ್ಪಾದನೆ ಇತರೆ ಬೆಳೆಗಳಲ್ಲಿನ ಕಳೆ ತಗೆಯಲು ಹಾಗೂ ಎಡೆಕುಂಟೆ ಹೊಡೆಯಲು ಸಹಕಾರಿಯಾಗಿದೆ.

Advertisement

ಈ ಕಳೆನಾಶಕ ಯಂತ್ರಕ್ಕೆ ಎಣ್ಣೆ ಹಾಕಬೇಕಿಲ್ಲ ಪೆಟ್ರೋಲ್‌, ಡಿಸೇಲ್‌ ಅವಶ್ಯಕತೆ ಇಲ್ಲ. ಯಂತ್ರ ಹಿಡಿದು ಮುನ್ನಡೆದರೆ ಸಾಕು ಕಳೆ ತನ್ನಿಂದ ತಾನೆ ಕಿತ್ತು ಬೀಳುತ್ತದೆ.

ಸೈಕಲ್‌ ವೀಡರ್‌ ಸಣ್ಣ, ಅತೀ ಸಣ್ಣ ರೈತರಿಗೆ ಅನುಕೂಲವಾಗಿದೆ. ಎತ್ತುಗಳು ಮತ್ತು ಕೃಷಿ ಕಾರ್ಮಿಕರ ಸಮಸ್ಯೆ ನಿಭಾಸಲು ಇದು ಸಹಕಾರಿ. ಇಲಾಖೆಯಿಂದ ಶೇ. 50 ರಿಯಾಯ್ತಿ ದರದಲ್ಲಿ ರೈತರಿಗೆ ಸೈಕಲ್‌ ವೀಡರ್‌ ವಿತರಣೆ ಮಾಡಲಾಗುತ್ತದೆ.
ಎಸ್‌.ಬಿ. ರಾಮೆನೇಹಳ್ಳಿ,ಕೃಷಿ
ಅಧಿಕಾರಿ ರೈತ ಸಂಪರ್ಕ ಕೇಂದ್ರ ಡಂಬಳ

ಈ ಯಂತ್ರ ಕೃಷಿ ಕಾರ್ಮಿಕರ ಕೊರತೆ ನೀಗಿಸುತ್ತದೆ. ಇದರ ವೆಚ್ಚ ದುಬಾರಿ ಅಲ್ಲ ಹಾಗೂ ಬಳಕೆ ಸುಲಭವಾಗಿದೆ. ಕಡಿಮೆ ಖರ್ಚಿನಲ್ಲಿ ಹೆಚ್ಚು ಕೆಲಸ ಮಾಡಿಕೊಳ್ಳಬಹುದು. ಕೃಷಿ ಇಲಾಖೆಯಿಂದ ರಿಯಾಯ್ತಿ ದರದಲ್ಲಿ ಸಿಗುವ ಸೈಕಲ್‌ ವೀಡರ್‌ ತುಂಬಾ ಅನುಕೂಲವಾಗಿದೆ.
ರಮೇಶ, ಹಳ್ಳಿಗುಡಿ, ಗ್ರಾಮದ ರೈತ

*ವಿಜಯ ಸೊರಟೂರ

Advertisement

Udayavani is now on Telegram. Click here to join our channel and stay updated with the latest news.

Next