Advertisement

ಎಳೆಯರ ಭಾವಾಭಿವ್ಯಕ್ತಿಯಲ್ಲಿ ದಮಯಂತಿ ಪುನರ್‌ ಸ್ವಯಂವರ

12:59 AM Jan 03, 2020 | mahesh |

ಸತ್ಯಸಂದ ಹಾಗೂ ಪ್ರಜೆಗಳ ಕ್ಷೇಮವನ್ನೇ ತನ್ನ ಉಸಿರಾಗಿಸಿಕೊಂಡಿದ್ದವನು ನಿಷದ ದೇಶದ ರಾಜ ನಳ ಚಕ್ರವರ್ತಿ. ಈತನ ರೂಪ ಮತ್ತು ಗುಣಕ್ಕೆ ಅನುರೂಪಳಾದ ಪತ್ನಿಯಾಗಿದ್ದವಳು ವಿದರ್ಭ ದೇಶದ ಅರಸ ಭೀಮಕನ ಮಗಳು ದಮಯಂತಿ. ಇವರಿಗೆ ಈರ್ವರು ಮಕ್ಕಳು. ಹೀಗೆ ಸುಖದಿಂದಿದ್ದ ನಳನ ಮೇಲೆ ಶನೀಶ್ವರನ ವಕ್ರ ದೃಷ್ಟಿ ಬೀಳುತ್ತದೆ. ಪರಿಣಾಮವಾಗಿ ಈರ್ವರೂ ರಾಜ್ಯ ತೊರೆದು ಕಾಡು ಪಾಲಾಗುತ್ತಾರೆ. ಅಡವಿಯಲ್ಲಿ ಮಡದಿ ತನ್ನಂತೆ ಕಷ್ಟ ಪಡಬಾರದೆಂದು ನಿದ್ರಾಸ್ಥಿತಿಯಲ್ಲಿದ್ದ ಆಕೆಯನ್ನು ಬಿಟ್ಟು ನಳನು ಮುಂದಕ್ಕೆ ಸಾಗುತ್ತಾನೆ. ಕಾಡ ದಾರಿಯಲ್ಲಿ ಬರುತ್ತಿದ್ದ ವಜ್ರ ವೈಡೂರ್ಯದ ವ್ಯಾಪಾರಿಗಳ ಸಹಾಯದಿಂದ ದಮಯಂತಿಯು ಛೇದಿ ದೇಶವನ್ನು ಸೇರಿ ಅಲ್ಲಿನ ಅರಮನೆಯಲ್ಲಿ ವೇಷ ಮರೆಸಿ ಕೆಲಸಕ್ಕೆ ಸೇರುತ್ತಾಳೆ. ಇತ್ತ ನಳನು ಕಾಡ ಹಾದಿ ಸವೆಸುತ್ತಿರುವ ಸಂದರ್ಭದಲ್ಲಿ ಕಾಳ್ಗಿಚ್ಚಿಗೆ ಸಿಲುಕಿಕೊಂಡ ಕಾರ್ಕೋಟಕವೆನ್ನುವ ವಿಷ ಸರ್ಪವನ್ನು ಬದುಕಿಸಿದರೂ ಅದರ ದಂಶನಕ್ಕೆ ಒಳಗಾಗಿ ವಿರೂಪಗೊಳ್ಳುತ್ತಾನೆ.

Advertisement

ದುಃಖತಪ್ತನಾದ ನಳನನ್ನು ಸಂತೈಸಿದ ಕಾರ್ಕೋಟಕ ಅಕ್ಷ ವಿದ್ಯಾ ಪ್ರವೀಣನಾದ ಋತುಪರ್ಣ ರಾಜನ ಅರಮನೆಯಲ್ಲಿ ಬಾಹುಕನೆನ್ನುವ ಹೆಸರಿನಲ್ಲಿ ಅಶ್ವ ಪಾಲಕನಾಗಿ ಸೇರಲು ಸಲಹೆ ನೀಡುತ್ತಾನೆ. ಇತ್ತ ಭೀಮಕನ ಆಜ್ಞೆಯಂತೆ ದಮಯಂತಿಯನ್ನು ಅರಸುತ್ತಾ ಹೊರಟ ಸುದೇವ ಬ್ರಾಹ್ಮಣರು ಛೇದಿ ದೇಶದ ಅರಮನೆಯಲ್ಲಿದ್ದ ದಮಯಂತಿಯನ್ನು ಗುರುತಿಸಿ ರಾಜನ ಒಪ್ಪಿಗೆ ಪಡೆದು ಕುಂಡಿನಾಪುರಕ್ಕೆ ಕರೆತರುತ್ತಾರೆ. ದಮಯಂತಿಯ ಒತ್ತಾಯದಂತೆ ಭೀಮಕನು ನಳನನ್ನು ಅರಸಿ ಕರೆತರಲು ವಿಪ್ರರನ್ನು ಕಳುಹಿಸುತ್ತಾನೆ. ಅರಸುತ್ತಾ ಬಂದ ಪರ್ಣಾದನೆಂಬ ಬ್ರಾಹ್ಮಣನು ಋತುಪರ್ಣ ರಾಜನ ಸಭೆಯಲ್ಲಿ ದಮಯಂತಿ ಹೇಳಿದ ಮಾತನ್ನು ಪುನರುಚ್ಚರಿಸಿದಾಗ ಬಾಹುಕ ಮೂರ್ಚಿತನಾಗುತ್ತಾನೆ. ಇದನ್ನು ತಿಳಿದ ದಮಯಂತಿ ದುಃಖೀತಳಾಗಿ ತಂದೆಯಲ್ಲಿ ವಿಚಾರ ತಿಳಿಸಿದಾಗ, ಕೂಡಲೇ ರಾಜನು ದಮಯಂತಿಯ ಪುನರ್‌ಸ್ವಯಂವರದ ಡಂಗುರ ಸಾರಿಸಿ, ಋತುಪರ್ಣನಿಗೂ ಆಮಂತ್ರಣ ಕಳುಹಿಸುತಾನೆ. ಈ ಎರಡನೇ ವಿವಾಹವನ್ನು ವಿರೋಧಿಸಿದ ಋತುಪರ್ಣನು, ನೂರಾರು ಯೋಜನ ದೂರವಿರುವ ಕುಂಡಿನಪುರಕ್ಕೆ ಮದುವೆ ಮುಹೂರ್ತದ ಮೊದಲು ತಲುಪಬೇಕೆಂಬ ವಿಚಾರವನ್ನು ಬಾಹುಕನಿಗೆ ತಿಳಿಸಿದಾಗ, ಒಪ್ಪಿದ ಆತನು ಕ್ಷಣ ಮಾತ್ರದಲ್ಲಿ ರಥವನ್ನು ಒಂದು ಯೋಜನ ದೂರಕ್ಕೆ ತಂದಾಗ, ರಾಜನಿಗೆ ಬಾಹುಕನ ಮೇಲೆ ಸಂಶಯ ಕಾಡಿ ಪ್ರಶ್ನಿಸಿದಾಗ, ನಾನೇ ನಳನೆಂದು ಒಪ್ಪಿಕೊಳ್ಳುತ್ತಾನೆ. ಈರ್ವರೂ ಮುಹೂರ್ತಕ್ಕೆ ಮೊದಲು ತಲುಪುತ್ತಾರೆ.

ಸತ್ಕಾರ ಗೃಹದಲ್ಲಿ ಬಾಹುಕನ ಕೆಲಸ ಕಾರ್ಯಗಳನ್ನು ಸಖೀಯ ಮೂಲಕ ಅರಿತ ದಮಯಂತಿಗೆ ಬಾಹುಕನೇ ತನ್ನ ಪತಿ ನಳನೆಂದು ಅರಿವಿಗೆ ಬಂದು ಆತನ ಪಾದಗಳನ್ನು ಹಿಡಿದಾಗ, ಬಾಹುಕನು ನಿಜ ವಿಚಾರವನ್ನು ಆಕೆಗೆ ತಿಳಿಸುತ್ತಾನೆ. ಮುಂದೆ ಪುನರ್‌ ವಿವಾಹವಾಗುವಲ್ಲಿಗೆ ಪ್ರಸಂಗ ಮುಕ್ತಾಯಗೊಳ್ಳುತ್ತದೆ. ಈ ಕರುಣಾರಸ ಪ್ರಧಾನವಾದ ಆಖ್ಯಾನವನ್ನು ನರಸಿಂಹ ತುಂಗರ ನಿರ್ದೇಶನದಲ್ಲಿ ಪ್ರದರ್ಶಿಸಿದವರು ಬ್ರಹ್ಮಾವರ ಸರಕಾರಿ ಪ. ಪ‌ೂ. ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು. ಬಾಹುಕನಾಗಿ ಪ್ರಸಾದ್‌, ದಮಯಂತಿಯಾಗಿ ಶಶಿಧರ್‌, ನಳ ಚಕ್ರವರ್ತಿಯಾಗಿ ನಿತಿನ್‌, ಋತುಪರ್ಣನಾಗಿ ಶಶಾಂಕ್‌, ಭೀಮಕನಾಗಿ ರಾಮನಾಥ್‌ ಪಾತ್ರೋಚಿತ ಅಭಿನಯದಿಂದ ಸೈ ಎನಿಸಿಕೊಂಡರೆ, ಸುದೇವ ಬ್ರಾಹ್ಮಣನಾಗಿ ಮನೀಷ್‌ ಹಾಸ್ಯರಸದ ಸಿಂಚನಗೈದರು. ಛೇದಿ ರಾಣಿಯಾಗಿ ಚಂದನ್‌ ಮತ್ತು ಶನೀಶ್ವರನಾಗಿ ಅಕ್ಷಯ ಪಾತ್ರಕ್ಕೆ ನ್ಯಾಯ ಒದಗಿಸಿದರು. ಪೂರ್ವರಂಗದಲ್ಲಿ ಸೊಗಸಾದ ಸಾಂಪ್ರದಾಯಿಕ ಹೆಜ್ಜೆಗಳೊಂದಿಗೆ ಬಾಲಗೋಪಾಲರಾಗಿ ತೇಜಸ್‌ ಮತ್ತು ಶ್ರೇಯಸ್‌ ಹಾಗೂ ಒಡ್ಡೋಲಗದಲ್ಲಿ ಸುಶಾಂತ್‌, ಅಭಿಲಾಷ್‌, ನಿತಿನ್‌, ಅಕ್ಷತಾ ಮತ್ತು ತೃಪ್ತಿ ಇವರುಗಳು ರಂಗಕ್ಕೆ ಕಳೆ ನೀಡಿದರು. ಹಿಮ್ಮೇಳದಲ್ಲಿ ಭಾಗವತರಾಗಿ ಕೆ. ಪಿ. ಹೆಗಡೆ ಮತ್ತು ನರಸಿಂಹ ತುಂಗ, ಮದ್ದಲೆಯಲ್ಲಿ ದೇವದಾಸ ಕೂಡ್ಲಿ, ಚೆ‌ಂಡೆಯಲ್ಲಿ ಗಣೇಶ್‌ ಶೆಣೈ ಮತ್ತು ಸುದೀಪ್‌ ಉರಾಳ ಸಹಕರಿಸಿದ್ದರು.

ಕೆ. ದಿನಮಣಿ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next