Advertisement
ಅಷ್ಟಕ್ಕೂ ನಿರ್ದೇಶಕ ಕಮ್ ನಿರ್ಮಾಪಕ ನವರಸನ್ “ದಮಯಂತಿ’ ಚಿತ್ರ ಮಾಡೋಕೆ ಕಾರಣ, ಆ ಒಂದೇ ಒಂದು ಫೋಟೋ. ಅದಕ್ಕೂ ಮುನ್ನ, ನವರಸನ್ ಅವರು, ತೆಲುಗಿನಲ್ಲಿ ಈ ಚಿತ್ರ ಮಾಡುವ ಯೋಚನೆಯಲ್ಲಿದ್ದರು. ಆ ಬಗ್ಗೆ ಹೇಳುವ ನವರಸನ್, “ಅನುಷ್ಕಾಶೆಟ್ಟಿ ಅವರಿಗೆ ಕಥೆಯನ್ನೂ ಹೇಳಿದ್ದೆ. ಮಾತುಕತೆಯೂ ನಡೆದಿತ್ತು. ಆಗ ಅವರು ದಪ್ಪ ಇದ್ದರು, “ಸಣ್ಣ ಆಗೋಕೆ ಸಮಯ ಬೇಕು ಮತ್ತು ಎರಡು ವರ್ಷ ಕಾಯಬೇಕು’ ಅಂದಿದ್ದರು. ಸರಿ ಅಂತ ಅಲ್ಲಿಂದ ಫ್ಲೈಟ್‌ನಲ್ಲಿ ಬೆಂಗಳೂರಿಗೆ ಬರುವಾಗ, ಮೊಬೈಲ್‌ನಲ್ಲಿ ಒಂದು ಜಾಹಿರಾತು ಬಂದಿತ್ತು. ಅದು ರಾಧಿಕಾ ಮೇಡಮ್ ಅವರ ಜ್ಯುವೆಲ್ಲರಿಯೊಂದರ ಜಾಹಿರಾತು. ಆ ಗೆಟಪ್ ನೋಡಿದಾಗ, ನನ್ನ ಕಥೆಯ ಪಾತ್ರಕ್ಕೆ ಇವರೇ ಸರಿ ಎನಿಸಿತು. ಇಷ್ಟು ದಿನ ಬೇರೆ ಪಾತ್ರ ಮಾಡಿರುವ ಅವರಿಗೆ ಇದು ಹೊಸ ಪಾತ್ರವಾಗುತ್ತೆ. ಒಂದೊಮ್ಮೆ ಕಥೆ ಹೇಳ್ಳೋಣ ಅಂತ ಮರುದಿನ ಅವರನ್ನು ಭೇಟಿಯಾಗಲು ಫೋನ್ ಮಾಡಿದಾಗ, “ಇದುವರೆಗೆ 28 ಜನ ಕಥೆ ಹೇಳಿದ್ದಾರೆ. ಯಾವ ಕಥೆಯೂ ಇಷ್ಟವಾಗಿಲ್ಲ. ನೀವು 29 ನೆಯವರು. ಅರ್ಧ ಗಂಟೆ ಟೈಮ್ ಕೊಡ್ತೀನಿ ಬಂದು ಕಥೆ ಹೇಳಿ. ಇಷ್ಟವಾದರೆ, 6 ತಿಂಗಳು ಕಾಯಬೇಕು’ ಅಂತ ಹೇಳಿದ ಕೂಡಲೇ, ಬೆಳಗ್ಗೆ 11ಗಂಟೆಗೆ ಹೋದೆ. ಕಥೆ ಶುರುಮಾಡಿದೆ. ಕಥೆ ಕೇಳುತ್ತಲೇ ಅವರು ತುಂಬಾ ಇನ್ವಾಲ್ ಆಗಿಬಿಟ್ಟರು. ಸಂಜೆ 6 ಗಂಟೆಯವರೆಗೂ ಕಥೆಯ ಚರ್ಚೆ ನಡೆಯಿತು. ಕೊನೆಗೆ ಓಕೆ ಮಾಡಿದರು. ನಾನು ಸರಿ ಮೇಡಮ್, ನೀವು 6 ತಿಂಗಳ ನಂತರ ಕಾಲ್‌ಶೀಟ್ ಕೊಡ್ತೀನಿ ಎಂದಿದ್ದೀರಿ. ಆಗಲೇ ಚಿತ್ರ ಶುರುಮಾಡೋಣ ಅಂದೆ. ಆ ಮಾತಿಗೆ, “ಆರು ತಿಂಗಳು ಬೇಡ, ಎಲ್ಲಾ ರೆಡಿ ಇದ್ದರೆ, ಸಿನಿಮಾ ಶುರು ಮಾಡಿ ಕಾಲ್‌ಶೀಟ್ ಕೊಡ್ತೀನಿ’ ಅಂದ್ರು. ಸಿನಿಮಾ ಸೆಟ್ಟೇರಿತು. ಒಂದು ಶೆಡ್ನೂಲ್ ಮುಗಿಸಿ ಗ್ಯಾಪ್ ಕೊಟ್ಟೆ. ಕೂಡಲೇ ಮೇಡಮ್ ಕಾಲ್ ಮಾಡಿ, “ನನಗೆ “ದಮಯಂತಿ’ ಕ್ಯಾರೆಕ್ಟರ್ ಬಿಟ್ಟು ಇರೋಕೆ ಆಗುತ್ತಿಲ್ಲ. ಸೆಕೆಂಡ್ ಶೆಡ್ನೂಲ್ ಪ್ಲಾನ್ ಮಾಡ್ಕೊಳ್ಳಿ’ ಅಂದ್ರು. ಅವರ “ಭೈರಾದೇವಿ’ ಸಿನಿಮಾವನ್ನೂ ನಿಲ್ಲಿಸಿ, ಈ ಚಿತ್ರಕ್ಕೆ ಆದ್ಯತೆ ಕೊಟ್ಟರು. ಮೊದಲು “ದಮಯಂತಿ’ ಚಿತ್ರವೇ ಬರಲಿ’ ಅಂತ ಸಹಕರಿಸಿದ್ದಕ್ಕೆ ಚಿತ್ರ ಬಿಡುಗಡೆಯಾಗುತ್ತಿದೆ’ ಎಂದು “ದಮಯಂತಿ’ ಶುರುವಾದ ಬಗೆ ವಿವರಿಸಿದರು ನವರಸನ್.
ಈ ಚಿತ್ರ ರಾಧಿಕಾ ಅವರ ಕಂಬ್ಯಾಕ್ ಸಿನಿಮಾ ಎನ್ನುವುದಕ್ಕಿಂತ ಅವರ ಕೆರಿಯರ್‌ನಲ್ಲೇ ದಿ ಬೆಸ್ಟ್ ಸಿನಿಮಾ ಆಗಲಿದೆ ಎಂಬ ಗ್ಯಾರಂಟಿ ಕೊಡ್ತೀನಿ. ಇದುವರೆಗೆ ರಾಧಿಕಾರನ್ನು ನೋಡಿರುವ ಜನರಿಗೆ ಖಂಡಿತವಾಗಿಯೂ, ಪರಭಾಷೆಗಿಂತ ನಮ್ಮ ಕನ್ನಡದಲ್ಲೂ ಯಾವುದಕ್ಕೂ ಕಮ್ಮಿ ಇಲ್ಲ ಎಂಬಷ್ಟರ ಮಟ್ಟಿಗೆ ಚಿತ್ರ ಮತ್ತು ಆ ಪಾತ್ರ ಮೂಡಿಬಂದಿದೆ’ ಎನ್ನುವ ನವರಸನ್, ಚಿತ್ರದ ಪೋಸ್ಟರ್, ಲುಕ್ ನೋಡಿದವರಿಗೆ ತೆಲುಗಿನ “ಅರುಂಧತಿ’, “ಭಾಗಮತಿ’ ನೆನಪಾಗಬಹುದು. ನಿಜ ಹೇಳ್ಳೋದಾದರೆ, ಅವುಗಳ ಒಂದೇ ಒಂದು ಪೀಸ್ ಕೂಡ ಇಲ್ಲಿಲ್ಲ. ಯಾವುದೇ ನಟಿಗೆ ಕಲರ್‌ಫುಲ್ ಸೀರೆ ತೊಡಿಸಿ, ಜ್ಯುವೆಲ್ಲರಿ ಹಾಕಿದರೆ, ಆ ಲುಕ್ಕೇ ಚೇಂಜ್ ಆಗುತ್ತೆ. ಅಂತಹ ಗೆಟಪ್‌ನಲ್ಲೇ ರಾಧಿಕಾರನ್ನೂ ತೋರಿಸಲಾಗಿದೆ. ಹಾಗಂತ, ಇಲ್ಲಿ ಯಾವುದೇ ಚಿತ್ರದ ಶೇಡ್ ಇಲ್ಲ. ಇದು ಬೇರೆಯದ್ದೇ ಕಥೆ ಮತ್ತು ಮೇಕಿಂಗ್ ಹೊಂದಿರುವ ಚಿತ್ರ. ಸಿನಿಮಾ ನೋಡಿ ಹೊರಬಂದವರ ಕಣ್ಣಲ್ಲಿ ರಾಧಿಕಾ ಅವರು ಯುವರಾಣಿ ಎನಿಸುವುದು ಸುಳ್ಳಲ್ಲ. ಇಲ್ಲಿ ಕಥೆಯೇ ಎಲ್ಲವೂ ಆಗಿದೆ. ಸಾಕಷ್ಟು ಪಾತ್ರಗಳು ತುಂಬಿಕೊಂಡಿವೆ. ಪ್ರತಿ ಪಾತ್ರಕ್ಕೂ ಅದರದೇ ಆದ ಆದ್ಯತೆ ಹೊಂದಿದೆ. ಹೊಸ ಪ್ರತಿಭೆಗಳೂ ಇಲ್ಲಿವೆ. ಒಂದಂತೂ ನಿಜ. ಚಿತ್ರದಲ್ಲಿ ಫ್ಲ್ಯಾಶ್‌ಬ್ಯಾಕ್ ಸ್ಟೋರಿ ನೋಡಿದವರಿಗೆ, ರಾಧಿಕಾರನ್ನು ಮತ್ತಷ್ಟು ಇಷ್ಟಪಡೋದು ನಿಜ. ಒಂದು ಮಾದರಿ ಹೆಣ್ಣಾಗಿ ಅವರನ್ನು ಕಂಡರೂ ಅಚ್ಚರಿ ಇಲ್ಲ. ಪ್ರತಿಯೊಬ್ಬರ ಪಾಲಿಗೆ ಅವರು ಯುವರಾಣಿಯಾಗಿ, ಗ್ರಾಮದೇವತೆ ಯಾಗಿಯೂ ಕಾಣುತ್ತಾರೆ. ಅಷ್ಟರಮಟ್ಟಿಗೆ ಅವರ ಅಭಿನಯ ಇಲ್ಲಿದೆ’ ಎಂದು ರಾಧಿಕಾ ಅವರ ನಟನೆಯನ್ನು ಮೆಚ್ಚುತ್ತಾರೆ ನವರಸನ್.
Related Articles
ಹಾಗಾದರೆ, ಇದು ಯಾವ ಜಾನರ್ ಸಿನಿಮಾ? ಇದಕ್ಕೆ ಉತ್ತರಿಸುವ ನವರಸನ್, “ಇಲ್ಲಿ ದುಷ್ಟರ ಸಂಹಾರವೂ ಇದೆ. ಜನರ ರಕ್ಷಣೆಯೂ ಇದೆ. ದಶಕಗಳ ಬಳಿಕ ಬರುವ ಒಂದು ಹಿನ್ನೆಲೆ ಕಥೆಯಲ್ಲೊಂದು ಗಟ್ಟಿತನವಿದೆ. ಅದೇ ಚಿತ್ರದ ಆಕರ್ಷಣೆ. ಇದನ್ನು ಮೈಥಲಾಜಿಕಲ್ ಹಾರರ್ ಸಿನಿಮಾ ಎನ್ನಬಹುದು. ಹಾಸ್ಯ ಇಲ್ಲಿ ಹಾಸುಹೊಕ್ಕಾ ಗಿದೆ. ಪೋಸ್ಟರ್ ನೋಡಿದವರಿಗೆ ಬರುವ ಕಲ್ಪನೆಯೇ ಬೇರೆ, ಸಿನಿಮಾ ನೋಡುವಾಗ ಸಿಗುವ ಮಜವೇ ಬೇರೆ. ಚಿತ್ರದಲ್ಲಿ “ಭಜರಂಗಿ’ ಲೋಕಿ ವಿಲನ್ ಆಗಿದ್ದು, ಅಬ್ಬರಿಸಿದ್ದಾರೆ. ತಬಲನಾಣಿ ಅವರು ಈವರೆಗೆ ಡೈಲಾಗ್‌ನಲ್ಲೇ ನಗಿಸೋರು. ಇಲ್ಲಿ ಬಾಡಿಲಾಂಗ್ವೇಜ್ ಬೇರೆಯದ್ದೇ ಇದೆ. ನನ್ನ ಪ್ರಕಾರ ತಬಲನಾಣಿ ಅವರಿಗೆ ಈ ಚಿತ್ರ ಮೈಲಿಗಲ್ಲು ಆಗಲಿದೆ. ಉಳಿದಂತೆ ಸ್ವಾಮೀಜಿ ಪಾತ್ರದಲ್ಲಿ ನವೀನ್ ಕೃಷ್ಣ ಕಾಣಿಸಿಕೊಂಡರೆ, ಬಲ ರಾಜವಾಡಿ ಅಘೋರಿಯಾಗಿದ್ದಾರೆ. ಒಟ್ಟಾರೆ, “ದಮಯಂತಿ’ ಒಂದು ಹೊಸ ಸ್ಪರ್ಶ ಹೊಂದಿರುವ ಚಿತ್ರ’ ಎನ್ನುತ್ತಾರೆ ನಿರ್ದೇಶಕರು.
Advertisement
ವಿಜಯ್ ಭರಮಸಾಗರ