Advertisement
ಉತ್ತರ ಕರ್ನಾಟಕದ ಪ್ರತಿಯೊಂದು ಹಳ್ಳಿಯಲ್ಲೂ ಹಳ್ಳಿಗಳಲ್ಲೂ ತಮ್ಮ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳಲು ಭಕ್ತರು ದೇವಿ ಆರಾಧನೆ ಮಾಡುವುದು ರೂಢಿ. ಅದರಲ್ಲೂ ಆದಿಶಕ್ತಿ ದೇವತೆಗಳ ಜಾತ್ರೆಗಂತೂ ವಿಶೇಷ ಮಹತ್ವ ಇರುತ್ತದೆ. ಆದರೆ ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರು ತಾಲೂಕಿನ ಬೈಲೂರಿನ ಗ್ರಾಮ ದೇವತೆ ಈ ಊರಿನ ದ್ಯಾಮವ್ವನ ಜಾತ್ರೆ ಆಗಿದ್ದು ಗ್ರಾಮದ ಯಾರೊಬ್ಬರಿಗೂ ಗೊತ್ತಿಲ್ಲ. ಕಾರಣ, ಜಾತ್ರೆ ನಡೆದು 100 ವರ್ಷಕ್ಕೂ ಹೆಚ್ಚು ದಿನ ಆಗಿದೆಯಂತೆ. ಇದೀಗ ಮತ್ತೆ ಗ್ರಾಮದೇವತೆಯ ಉತ್ಸವ ಆಚರಿಸಲು ಇಡೀ ಊರಿಗೆ ಊರೇ ಸಜ್ಜಾಗಿದೆ. ತಳಿರು-ತೋರಣಗಳಿಂದ ಗ್ರಾಮವನ್ನು ಸಿಂಗರಿಸಲಾಗಿದೆ. ಮನೆಗಳನ್ನು ಸುಣ್ಣ-ಬಣ್ಣದಿಂದ ಅಲಂಕರಿಸಲಾಗಿದೆ. ಬೈಲೂರಿನ ದ್ಯಾಮವ್ವನ ಜಾತ್ರೆ ಈಗಾಗಲೇ ಆರಂಭವಾಗಿದ್ದು ಮೇ 17ರ ವರೆಗೆ ಜಾತ್ರೆ ನಡೆಯಲಿದೆ.
Related Articles
Advertisement
ರಥಕ್ಕೆ ಕಳಶವಿಲ್ಲ, ನವಿಲು ಇದೆಹಿಂದೊಮ್ಮೆ ಗ್ರಾಮ ದೇವತೆ ಶ್ರೀ ದ್ಯಾಮವ್ವನ ಜಾತ್ರೆ ಮಾಡಲಾಗಿದೆ. ಆಗಿನ ಕಾಲದಲ್ಲೂ ದೇವಿಯ ಹೊನ್ನಾಟ ಹಾಗೂ ರಥದಲ್ಲಿ ದೇವಿಯ ಮೆರವಣಿಗೆ ನಡೆಸಲಾಗಿದೆ. ವಿಶೇಷವೆಂದರೆ, ಇಲ್ಲಿರುವ ರಥಕ್ಕೆ ಚಿನ್ನ, ಬೆಳ್ಳಿ ಅಥವಾ ತಾಮ್ರದ ಕಳಶವಿಲ್ಲ. ಕಳಶದ ಪರಂಪರೆ ಇಲ್ಲಿ ಬೆಳೆದು ಬಂದಿಲ್ಲ. ಕಟ್ಟಿಗೆಯಲ್ಲಿ ತಯಾರಿಸಿರುವ ದೊಡ್ಡದಾಕಾರದ ನವಿಲು ಚಿಹ್ನೆಯನ್ನು ರಥದ ಮೇಲ್ಭಾಗದಲ್ಲಿ ಇಡಲಾಗುತ್ತದೆ. ಬೈಲೂರು ಸುತ್ತಮುತ್ತ ದಟ್ಟ ಅರಣ್ಯವಿದೆ. ಇಲ್ಲಿ ನವಿಲು ಸಂತತಿ ಹೆಚ್ಚಾಗಿರುವುದರಿಂದ ಜನರಲ್ಲಿ ಪರಿಸರ ಪ್ರಜ್ಞೆ ಬೆಳೆಯಲಿ ಎಂಬ ಉದ್ದೇಶದಿಂದ ರಥಕ್ಕೆ ನವಿಲು ಅಳವಡಿಸಲಾಗಿದೆ ಎನ್ನುತ್ತಾರೆ ಗ್ರಾಮದ ಹಿರಿಯರು. ಸಣ್ಣವರ ಮೇಲೆ ಜವಾಬ್ದಾರಿ ಇದೆ
“ಬೈಲೂರ ದ್ಯಾಮವ್ವನ ಜಾತ್ರಿ ನಮ್ಮ ಅಜ್ಜಾರ ಕಾಲದಾಗ ಆಗಿತ್ತಂತ ಹೇಳ್ತಿದ್ರು, ಸುಮಾರು 100 ವರ್ಷಗಳ ಹಿಂದ ಜಾತ್ರಿ ಆಗೈತಿ. ಆವಾಗಿನಿಂದ ಒಂದೂ ದಿನ ದ್ಯಾಮ್ಮವ್ವನ ಜಾತ್ರಿ ಮಾಡಾಕ ಆಗಿರಲಿಲ್ಲ. ಈಗ ನಮ್ಮೂರ ದ್ಯಾಮವ್ವ ಊರ ಮಂದಿ ತೆಲ್ಯಾಗ ಹಾಕಿ ಜಾತ್ರಿ ಮಾಡಸಾಕತ್ತಾಳ. ಇನ್ನ ಮುಂದ ಈ ಪದ್ಧತಿ ಮುಂದುವರಿಸಿಕೊಂಡ ಹೋಗೋ ಜವಾಬ್ದಾರಿ ನಮ್ಮ ಸಣ್ಣಾವರ ಮ್ಯಾಲ ಐತಿ’
– ಕೆ.ಎಸ್. ಕುರಗುಂದ, 81 ವರ್ಷ ವಯಸ್ಸಿನ ಹಿರಿಯರು -ಭೈರೋಬಾ ಕಾಂಬಳೆ