ಚಿತ್ರದುರ್ಗ: ತಾಲೂಕಿನ ಹಿರೇಗುಂಟನೂರು ಗ್ರಾಮದ ಶಕ್ತಿದೇವತೆ ದ್ಯಾಮಲಾಂಬಾ ದೇವಿಯ ಸಿಡಿ ಮಹೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ಸಿಡಿ ಮಹೋತ್ಸವ ಆರಂಭಕ್ಕೂ ಮುನ್ನ ಸಿಡಿ ಕಂಬದ ಸುತ್ತ ಗ್ರಾಮದೇವತೆಗಳಾದ ದ್ಯಾಮಲಾಂಬಾ, ದುರ್ಗಮ್ಮ, ದುರ್ಗಾಂಬಿಕಾ ದೇವತೆಗಳ ಮೂರ್ತಿಗಳನ್ನು ಮೂರು ಸುತ್ತು ಪ್ರದಕ್ಷಿಣೆ ಹಾಕಿಸಲಾಯಿತು. ಕಳೆದ ಬಾರಿಗಿಂತ ಈ ಸಲ ಸಿಡಿ ಮಹೋತ್ಸವ ತಡವಾಗಿದ್ದರಿಂದ ಭಕ್ತರು ಸಿಡಿ ಆಡುವುದನ್ನು ಬಹು ನಿರೀಕ್ಷೆಯಿಂದ ಎದುರು ನೋಡುತ್ತಿದ್ದರು.
ಸಿಡಿ ಮಹೋತ್ಸವ ಪ್ರಾರಂಭವಾಗುತ್ತಿದ್ದಂತೆ ಭಕ್ತರಿಂದ ಹಷೋರ್ದ್ಘಾರವೇ ಮೊಳಗಿತು. ಹಿರೇಗುಂಟನೂರು ಹೋಬಳಿಯ ಸುತ್ತಮುತ್ತ ವಿವಿಧ ಗ್ರಾಮಗಳಿಂದ ಸುಮಾರು 80ಕ್ಕೂ ಹೆಚ್ಚು ಭಕ್ತರು ಸಿಡಿ ಆಡಿ ತಮ್ಮ ಹರಕೆ ತೀರಿಸಿಕೊಂಡರು.
ವಿವಿಧೆಡೆ ಸಿಡಿ ಮಹೋತ್ಸವಕ್ಕಾಗಿ ಭೂಮಿಗೆ ನೇರವಾಗಿ ಕಂಬ ನೆಡಲಾಗುತ್ತದೆ. ಅದಕ್ಕೆ ಮಲ್ಲಕಂಬ ಎನ್ನುವ ಹೆಸರಿದೆ. ಕಂಬದ ಮೇಲೆ ತಿರುಗಣಿ ಇಡಲಾಗುತ್ತದೆ. ಅದರ ಮೇಲೆ ಸಮಾನಾಂತರವಾಗಿ ಪ್ರತಿಷ್ಠಾಪಿಸುವ ಸಿಡಿಕಂಬ ಸುಲಭವಾಗಿ ತಿರುಗುವಂತೆ ವ್ಯವಸ್ಥೆ ಮಾಡಲಾಗುತ್ತದೆ. ಕಂಬದ ಒಂದು ತುದಿಗೆ ಮನುಷ್ಯನನ್ನು ಬಟ್ಟೆಯಿಂದ ಕಟ್ಟಿ ಮೂರು ಸಲ ತಿರುಗಿಸುವುದು ಈ ಉತ್ಸವದ ಸಂಪ್ರದಾಯ.
ಬಹಳ ದಿನಗಳ ಹಿಂದೆ ಸಿಡಿಕಂಬಕ್ಕೆ ಮನುಷ್ಯನನ್ನು ಕಟ್ಟುವ ಬದಲು ಬೆನ್ನಿಗೆ ಕೊಂಡಿ ಹಾಕಿ ತಿರುಗಿಸಲಾಗುತ್ತಿತ್ತು. ಅದು ಇಂದಿಗೂ ಕೆಲವು ಪ್ರದೇಶಗಳಲ್ಲಿ ಪ್ರಚಲಿತದಲ್ಲಿದೆ. ಆದರೆ ಇಲ್ಲಿನ ಸಿಡಿ ಮಹೋತ್ಸವದ ವಿಶೇಷತೆಯೇ ವಿಭಿನ್ನವಾಗಿದೆ. ಸಿಡಿ ಉತ್ಸವದ ಕಂಬದ ಕೆಳಗೆ ಎರಡು ಚಕ್ರವುಳ್ಳ ಗಾಡಿಯನ್ನು ಮಾಡಿ ಅದರ ಮೇಲೆ ಹರಕೆ ಹೊತ್ತ ಭಕ್ತರನ್ನು ಕಟ್ಟಿ ಸಿಡಿ ಆಡಿಸುತ್ತಾರೆ. ಇಲ್ಲಿ ಮೂರು ಸುತ್ತು ಸುತ್ತುವ ಪದ್ಧತಿ ಇಲ್ಲ.
ಸಿಡಿ ಮಹೋತ್ಸವ ಮುಗಿದ ಬಳಿಕ ಹೂವಿನ ಪಲ್ಲಕ್ಕಿ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಅವಭೃತೋತ್ಸವದ ನಂತರ ದ್ಯಾಮಲಾಂಬಾ ದೇವತೆಯ ಗುಡಿದುಂಬುವ ಕಾರ್ಯ ಜರುಗಿತು.