Advertisement

ಹದಗೆಟ್ಟರಸ್ತೆ: ರಾವೂರಿನಲ್ಲಿ ಧೂಳು..ಕುಂದನೂರಿನಲಿ ಗೋಳು

07:41 AM Feb 08, 2019 | Team Udayavani |

ವಾಡಿ: ವಾಡಿ ಪಟ್ಟಣದಿಂದ ವಿವಿಧ ಗ್ರಾಮಗಳಿಗೆ ಕೂಡುವ ರಸ್ತೆಗಳು ವಿಪರೀತ ಹದಗೆಟ್ಟಿದ್ದು, ಧೂಳಿನ ಗೋಳು ಹೇಳತೀರದಂತಾಗಿದೆ. ಚೀಪುಗಲ್ಲುಗಳ ರಾಶಿಯಲ್ಲಿ ತಗ್ಗುದಿನ್ನೆಗಳ ರಸ್ತೆಯೊಂದೆಡೆಯಾದರೆ, ವಾಹನಗಳ ಹಿಂದೆ ಹಾರುವ ಕೆಂಪು ಮಣ್ಣಿನ ಧೂಳು ಮತ್ತೂಂದೆಡೆ. ಡಾಂಬರ್‌ ಕಿತ್ತು ಗುಂಡಿಗಳು ಕಾಣಿಸಿಕೊಂಡರೂ ಅಧಿಕಾರಿಗಳು ಮಾತ್ರ ಕಣ್ಣು ತೆರೆದಿಲ್ಲ. ಶಾಸಕ, ಸಚಿವ ಪ್ರಿಯಾಂಕ್‌ ಖರ್ಗೆ ಅವರು ಚಿತ್ತಾಪುರ ಕ್ಷೇತ್ರದ ಬಹುತೇಕ ಹದಗೆಟ್ಟ ರಸ್ತೆಗಳನ್ನು ಸುಧಾರಣೆ ಮಾಡಿಸಿದ್ದಾರೆ. ಅದೇಕೋ ವಾಡಿ ವಲಯದ ಕೆಲ ಗ್ರಾಮಗಳಿಗೆ ಅವರು ಮಲತಾಯಿ ಧೋರಣೆ ತೋರುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬರುತ್ತಿದೆ.
ವಾಡಿ-ಕುಂದನೂರು, ವಾಡಿ-ರಾವೂರ, ವಾಡಿ-ಇಂಗಳಗಿ ಹಾಗೂ ವಾಡಿ-ಸೂಲಹಳ್ಳಿ ಗ್ರಾಮೀಣ ರಸ್ತೆಗಳು ಅಭಿವೃದ್ಧಿ ಕಾಣದೆ ಜನರ ಗೋಳಾಟಕ್ಕೆ ಕಾರಣವಾಗಿವೆ.

Advertisement

ವಾಡಿಯಿಂದ ಕುಂದನೂರು, ರಾವೂರ, ಸೂಲಹಳ್ಳಿ ಹಾಗೂ ಇಂಗಳಗಿ ಗ್ರಾಮಗಳು ತಲಾ 6 ಕಿಮೀ ದೂರದಲ್ಲಿವೆ. ಕುಂದನೂರು ಗ್ರಾಮದ ರಸ್ತೆ ಅರ್ಧ ಡಾಂಬರೀಕರಣ ಇನ್ನರ್ಧ ಸಿಮೆಂಟ್‌ ರಸ್ತೆಯಾಗಿ ಅಭಿವೃದ್ಧಿ ಹೊಂದಿದ ವರ್ಷದಲ್ಲೇ ಕಿತ್ತುಹೋಗಿದೆ. ಡಾಂಬರ್‌ ಜಾಗದಲ್ಲಿ ತೆಗ್ಗುಗಳು ಬಿದ್ದಿದ್ದು, ಚೀಪುಗಲ್ಲುಗಳಿಂದ ಭರ್ತಿ ಮಾಡಿ ಎಡವಟ್ಟು ಮಾಡಲಾಗಿದೆ. ಸೂಲಹಳ್ಳಿ ಹಾಗೂ ಕಮರವಾಡಿ ಗ್ರಾಮದ ರಸ್ತೆ ಹದಗೆಟ್ಟಿದೆ. ರಾವೂರಿನ ರಸ್ತೆ ಅಭಿವೃದ್ಧಿಗೆ ಅಧಿಕಾರಿಗಳ ನಿರ್ಲಕ್ಷ್ಯ ವಾಡಿ ವಲಯದ ಕೆಲ ಗ್ರಾಮಗಳಿಗೆ ಸಚಿವ ಖರ್ಗೆ ಮಲತಾಯಿ ಧೋರಣೆ ಚಾಲನೆ ನೀಡಲಾಗಿದೆಯಾದರೂ ಕಾಮಗಾರಿ ನಿಧಾನಗತಿಯಲ್ಲಿ ಸಾಗಿ ವಿಪರೀತ ಧೂಳಿನಿಂದ ಆವರಿಸಿಕೊಂಡಿದೆ. ಓಡುವ ವಾಹನಗಳಷ್ಟೇ ವೇಗದಲ್ಲಿ ಹಾರುತ್ತಿರುವ ಧೂಳು ಜನರ ಉಸಿರಾಟದಲ್ಲಿ ಬೆರೆಯುತ್ತಿದೆ. ಇದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ರಸ್ತೆಗಳ ಅಭಿವೃದ್ಧಿ ಜತೆಗೆ ಪ್ರತಿ ವರ್ಷ ಅವುಗಳ ನಿರ್ವಹಣೆಯೂ ಮಾಡಬೇಕಾದ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದರಿಂದ ಜನರು ಜೀವ ಸಂಕಟ ಅನುಭವಿಸಬೇಕಾಗಿದೆ. ಅಧಿಕಾರಿಗಳನ್ನು ಎಚ್ಚರಿಸಬೇಕಾದ ಚುನಾಯಿತ ಜನಪ್ರತಿನಿಧಿಗಳೂ ಜನರ ಸಮಸ್ಯೆಗೆ ಸ್ಪಂದಿಸದ ಕಾರಣ ಹದಗೆಟ್ಟ ರಸ್ತೆಯಲ್ಲಿ ಆಡಳಿತವನ್ನು ಶಪಿಸುತ್ತಲೇ ಸಾಗಬೇಕಾದ ದುಸ್ಥಿತಿ ಮುಂದುವರಿದಿದೆ.

ಚಿತ್ತಾಪುರ ಮತಕ್ಷೇತ್ರದಲ್ಲಿ ವಾಡಿ ವಲಯ ಪ್ರಮುಖ ಕೈಗಾರಿಕಾ ಪ್ರದೇಶವಾಗಿದೆ. ಈ ಭಾಗದ ಗ್ರಾಮೀಣ ರಸ್ತೆಗಳು ನರಕಯಾತನೆ ಸೃಷ್ಟಿಸಿವೆ. ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ಸಿಸಿ ರಸ್ತೆಗಳು ಬಿರುಕುಬಿಟ್ಟು ಇಬ್ಭಾಗವಾಗಿವೆ. ಅಪಘಾತ ಸಂಖ್ಯೆಗಳು ಹೆಚ್ಚಾಗಲು ಕಾರಣವಾಗಿವೆ. 2000 ಕೋಟಿ ರೂ. ಅನುದಾನ ತಂದಿದ್ದೇನೆ. ಚಿತ್ತಾಪುರ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಿದ್ದೇನೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಅವರು ಪದೇ ಪದೇ ಹೇಳಿಕೊಳ್ಳುತ್ತಾರೆ. ಕುಂದನೂರ, ಸೂಲಹಳ್ಳಿ, ಇಂಗಳಗಿ ರಸ್ತೆಗಳ ಸ್ಥಿತಿ ನೋಡಿದರೆ ಗೊತ್ತಾಗುತ್ತದೆ ಅವರ ಅಭಿವೃದ್ಧಿ ಎಂತಹದ್ದು ಎಂಬುದು.  ಶ್ರೀಶೈಲ ನಾಟೀಕಾರ,ಇಂಗಳಗಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ.

ಮಡಿವಾಳಪ್ಪ ಹೇರೂರ

Advertisement

Udayavani is now on Telegram. Click here to join our channel and stay updated with the latest news.

Next