Advertisement

ಕೂಳೂರು ಸೇತುವೆ; ಕುಸಿದ ತಡೆಗೋಡೆ ರಿಪೇರಿ ಆಗಲೇ ಇಲ್ಲ !

03:15 AM Jun 12, 2018 | Team Udayavani |

ಮಹಾನಗರ: ರಾಷ್ಟ್ರೀಯ ಹೆದ್ದಾರಿ ಕೂಳೂರುವಿನಲ್ಲಿರುವ ಹಳೆಯ ಸೇತುವೆ ಪಕ್ಕದಲ್ಲಿ ತಡೆಗೋಡೆ ಕುಸಿದು ತಿಂಗಳು ಹಲವಾದರೂ ಅದನ್ನು ಸರಿಪಡಿಸುವ ಗೋಜಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಮುಂದಾಗಿಲ್ಲ. ಪರಿಣಾಮವಾಗಿ ನಿತ್ಯ ಇಲ್ಲಿ ವಾಹನಗಳು ಆತಂಕದಲ್ಲಿಯೇ ಸಂಚರಿಸಬೇಕಾದ ಅನಿವಾರ್ಯ ಎದುರಾಗಿದೆ.

Advertisement

ಇದೇ ಸ್ಥಳದಲ್ಲಿ ಖಾಸಗಿ ಬಸ್ಸೊಂದು ಓವರ್‌ ಟೇಕ್‌ ಮಾಡುವ ಭರದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕೂಳೂರು ಸೇತುವೆಯ ತಡೆಗೋಡೆಗೆ ಢಿಕ್ಕಿ ಹೊಡೆದು ಅಪಾಯಕಾರಿಯಾಗಿ ನಿಂತ ಘಟನೆ ಜನವರಿ 15ರಂದು ಸಂಭವಿಸಿತ್ತು. ಢಿಕ್ಕಿ ಹೊಡೆದ ರಭಸಕ್ಕೆ ಸೇತುವೆಯ ತಡೆಗೋಡೆ ಮುರಿದಿದ್ದು ಬಸ್‌ ನ ಅರ್ಧ ಭಾಗ ಸೇತುವೆಯಿಂದ ಹೊರನುಗ್ಗಿತ್ತು. ಪ್ರಯಾಣಿಕರಿಂದ ತುಂಬಿದ್ದ ಬಸ್‌ ಈ ಮೂಲಕ ಸಂಭಾವ್ಯ ಅಪಾಯದಿಂದ ಕೂದಳೆಲೆ ಅಂತರದಲ್ಲಿ ಪಾರಾಗಿತ್ತು. ಅಂದು ಕುಸಿದಿದ್ದ ತಡೆಗೋಡೆ ಇನ್ನೂ ಕೂಡ ಮರು ನಿರ್ಮಾಣವಾಗಿಲ್ಲ!

ಗೋಳು ಕೇಳುವವರೇ ಇಲ್ಲ
ಕುಸಿದ ತಡೆಗೋಡೆಯನ್ನು ಕಟ್ಟಿಕೊಡುತ್ತೇವೆ ಎಂದು ರಾ.ಹೆ. ಪ್ರಾಧಿಕಾರದವರು ಕೆಲವು ಬಾರಿ ಹೇಳಿದರೂ ಕೂಡ ಇನ್ನೂ ಅದು ಕಾರ್ಯರೂಪಕ್ಕೆ ಬಂದಿಲ್ಲ. ಹೀಗಾಗಿ ಹೆದ್ದಾರಿ ಬದಿಯ ಈ ಗೋಳು ಕೇಳುವವರೇ ಇಲ್ಲ. ಜತೆಗೆ, ಇತರ ಸಂದರ್ಭದಲ್ಲಿಯೂ ಇಲ್ಲಿನ ತಡೆಗೋಡೆಗೆ ವಾಹನಗಳು ಬಡಿದು ಬಹುತೇಕ ಧರಶಾಯಿಯಾದ ಘಟನೆಯೂ ಸಂಭವಿಸಿದೆ. ಆದರೆ ಯಾವುದು ಕೂಡ ದುರಸ್ತಿ ಕಾರ್ಯ ಶಾಶ್ವತವಾಗಿ ಇಲ್ಲಿ ನಡೆದಿಲ್ಲ. ತಡೆಗೋಡೆಯ ಕಾಂಕ್ರೀಟ್‌ ಕಂಬಗಳು ನದಿಯ ಪಾಲಾಗಿದ್ದರೆ ಅಪಾಯವಾಗದಂತೆ ಪೊಲೀಸರು ತಡೆಯಾಗಿ ಇಟ್ಟಿದ್ದ ಬ್ಯಾರಿಕೇಡ್‌ ಗಳು ಕೂಡ ಇಲ್ಲಿ ನದಿಗೆ ಬಿದ್ದಿವೆ. ರಾತ್ರಿ ಸೇತುವೆಯ ಮೇಲೆ ಬೀದಿದೀಪವೂ ಇಲ್ಲದ ಕಾರಣ ಯಾವುದೇ ಕ್ಷಣದಲ್ಲಾದರೂ ಅಪಾಯ ಕಟ್ಟಿಟ್ಟ ಬುತ್ತಿ. ಸೇತುವೆ ಮೊದಲೇ ಅಗಲ ಕಿರಿದಾಗಿರುವುದರಿಂದ ಪಾದಚಾರಿಗಳು ಅಪಾಯದಲ್ಲಿ ಸೇತುವೆ ದಾಟ ಬೇಕಾಗುತ್ತದೆ.

ಕೂಳೂರು ಹಳೆ ಸೇತುವೆ ನಿರ್ಮಾಣಗೊಂಡು ಹಲವು ದಶಕಗಳೇ ಕಳೆದಿವೆ. ಉಡುಪಿ, ಉತ್ತರಕನ್ನಡ ಜಿಲ್ಲೆಗಳ ಕಡೆಯಿಂದ ಮಂಗಳೂರಿಗೆ ಬರುವ ಎಲ್ಲ ರೀತಿಯ ಸಾವಿರಾರು ವಾಹನಗಳು ಇದೇ ಸೇತುವೆ ಮೂಲಕವೇ ಸಾಗುತ್ತವೆ. ಎನ್‌.ಎಂ.ಪಿ.ಟಿ., ಎಂ.ಆರ್‌.ಪಿ.ಎಲ್‌., ಎಂ.ಸಿ.ಎಫ್‌. ಸೇರಿದಂತೆ ಬೃಹತ್‌ ಕೈಗಾರಿಕೆಗಳ ಉದ್ಯೋಗಿಗಳು ಕೂಡ ಇದೇ ಮಾರ್ಗದಲ್ಲಿ ಸಂಚರಿಸುತ್ತಾರೆ. ಹೀಗಾಗಿ ಈ ಸೇತುವೆಯ ಕುಸಿದುಬಿದ್ದ ತಡೆಗೋಡೆಯನ್ನು ತುರ್ತಾಗಿ ಸರಿಪಡಿಸಬೇಕಾಗಿದೆ.

ತಡೆಗೋಡೆ ಕುಸಿತ; ಪ್ರತಿಕ್ರಿಯೆಗೆ ಸಿಗುತ್ತಿಲ್ಲ!
ಕೂಳೂರು ಸೇತುವೆಯ ತಡೆಗೋಡೆ ಕುಸಿದಿರುವುದು ಇಲ್ಲಿಯವರೆಗೆ ಯಾವ ಕಾರಣಕ್ಕಾಗಿ ರಿಪೇರಿ ಆಗಲಿಲ್ಲ ಹಾಗೂ ಯಾವಾಗ ರಿಪೇರಿ ಆಗಬಹುದು? ಎಂಬ ಪ್ರಶ್ನೆಯೊಂದಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನ ನಿರ್ದೇಶಕರಿಗೆ ಜೂ. 6ರಿಂದ ಕರೆ ಮಾಡಿ ಸಂಪರ್ಕಕ್ಕೆ ಪ್ರಯತ್ನಿಸಿದರೂ ಅವರು ಸಿಗುತ್ತಿಲ್ಲ. ಈ ಬಗ್ಗೆ ಇಲಾಖೆಯ ಇತರ ಅಧಿಕಾರಿಗಳಿಗೆ ತಿಳಿಸಿದಾಗ, ‘ಈ ಕುರಿತು ನಾವು ಪ್ರತಿಕ್ರೀಯೆ ನೀಡುವಂತಿಲ್ಲ’ ಎಂದು ಸುಮ್ಮನಾಗುತ್ತಾರೆ. ಇಲಾಖೆಯ ಈ ನಿಲುವಿನ ಕಾರಣದಿಂದಾಗಿಯೇ ಕಳೆದ ಕೆಲವು ತಿಂಗಳಿನಿಂದ ಈ ತಡೆಗೋಡೆ ಇನ್ನೂ ದುರಸ್ತಿ ಕಂಡಿಲ್ಲ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ!.

Advertisement

ತಡೆಗೋಡೆ ಸರಿಪಡಿಸಿ
ನಿತ್ಯ ಈ ರಸ್ತೆಯಲ್ಲಿ ನಾವು ಸಂಚರಿಸುತ್ತಿದ್ದು, ಸೇತುವೆಯ ಪಕ್ಕದ ತಡೆಗೋಡೆ ಕೆಲವು ತಿಂಗಳಿನಿಂದ ಕುಸಿದು ಇನ್ನೂ ಅದರ ರಿಪೇರಿ ಆಗಿಲ್ಲ. ಉಡುಪಿಯಿಂದ ಮಂಗಳೂರು ಕಡೆ ಸಾಗುವ ಮೇಲ್ಸೇತುವೆ ಕಡಿದಾದ ತಿರುವು ಹೊಂದಿರುವುದರಿಂದ ನಿಯಂತ್ರಣ ತಪ್ಪಿದರೆ ವಾಹನಗಳು ನೇರ ನದಿಗೆ ಉರುಳಿ ಬೀಳುವ ಅಪಾಯವೂ ಇದೆ. ಹೀಗಾಗಿ ಇದನ್ನು ಸರಿಪಡಿಸುವುದು ಅಗತ್ಯ.
– ಅವಿನಾಶ್‌ ಉಪ್ಪಿನಂಗಡಿ, ಸ್ಥಳೀಯ ಉದ್ಯೋಗಿ

Advertisement

Udayavani is now on Telegram. Click here to join our channel and stay updated with the latest news.

Next