Advertisement

ಹದಗೆಟ್ಟ ಗಾವಳಿ-ಶಿರಿಯಾರ ಜಿಲ್ಲಾ ಮುಖ್ಯ ರಸ್ತೆ

11:23 PM Oct 17, 2019 | Team Udayavani |

ವಿಶೇಷ ವರದಿ-ಬಿದ್ಕಲ್‌ಕಟ್ಟೆ: ಉಡುಪಿಯಿಂದ ಬಾರಕೂರು ಮೂಲಕವಾಗಿ ತೀರ್ಥಹಳ್ಳಿಗೆ ಸಂಪರ್ಕ ಕಲ್ಪಿಸುವ ಗಾವಳಿಯಿಂದ ಶಿರಿಯಾರದವರೆಗಿನ ಜಿಲ್ಲಾ ಮುಖ್ಯ ರಸ್ತೆಯ ಹಲವೆಡೆಗಳಲ್ಲಿ ಹೊಂಡ – ಗುಂಡಿ ಗಳಿಂದಾಗಿ ಸಂಚಾರ ದುಸ್ತರವೆನಿಸಿದೆ. ಗಾವಳಿ ಬಳಿ ಕೆಲವು ತಿಂಗಳ ಹಿಂದೆ ಮಾಡಿದ ಡಾಮರೀಕರಣವೂ ಅಲ್ಲಲ್ಲಿ ಎದ್ದು ಹೋಗಿದ್ದು, ಕಳಪೆ ಕಾಮಗಾರಿ ಆರೋಪ ಕೇಳಿ ಬಂದಿದೆ.

Advertisement

ಬಿದ್ಕಲ್‌ಕಟ್ಟೆ – ಶಿರಿಯಾರ – ಬಾರಕೂರು – ಬ್ರಹ್ಮಾವರ ಮಾರ್ಗವಾಗಿ ಉಡುಪಿಯಿಂದ ತೀರ್ಥಹಳ್ಳಿಗೆ ಸಂಪರ್ಕ ಕಲ್ಪಿಸುವ ಗಾವಳಿಯಿಂದ ಶಿರಿಯಾರದವರೆಗಿನ ಹಲವೆಡೆ ರಸ್ತೆ ಹದಗೆಟ್ಟು ಹೋಗಿದೆ.

ಕಳಪೆ ಕಾಮಗಾರಿ ಆರೋಪ
ಇನ್ನು ಈ ರಸ್ತೆಯ ಗಾವಳಿಯಲ್ಲಿರುವ ತಿರುವು ಅಪಾಯಕಾರಿ ಎನ್ನುವ ನಿಟ್ಟಿನಲ್ಲಿ ತಿರುವು ವಿಸ್ತರಣೆ ಹಾಗೂ ಗಾವಳಿಯಿಂದ ಹಳ್ಳಾಡಿಯವರೆಗಿನ ರಸ್ತೆ ಮರು ಡಾಮರೀಕರಣಕ್ಕೆ 1 ಕೋ.ರೂ. ಪ್ಯಾಕೇಜ್‌ನಡಿ ಕಾಮಗಾರಿ ಕೆಲವು ತಿಂಗಳ ಹಿಂದಷ್ಟೇ ನಡೆದಿತ್ತು. ಆದರೆ ಅದು ಈಗಲೇ ಅಲ್ಲಲ್ಲಿ ಡಾಮರು ಎದ್ದು ಹೋಗಿದೆ. ಕೆಲವೆಡೆಗಳಲ್ಲಿ ರಸ್ತೆ ಹೊಂಡ ಬಿದ್ದಿದೆ. ಇದು ಕೆಲವೇ ತಿಂಗಳ ಹಿಂದೆ ನಡೆದ ಡಾಮರೀಕರಣ ಹೀಗೆ ಎದ್ದು ಹೋಗಲು ಕಳಪೆ ಕಾಮಗಾರಿಯೇ ಕಾರಣ ಎಂದು ವಾಹನ ಸವಾರರು ಆರೋಪಿಸಿದ್ದಾರೆ.

ಪ್ರಮುಖ ಸಂಪರ್ಕ ರಸ್ತೆ
ಇದೇ ಮಾರ್ಗವಾಗಿ ಮಂಗಳೂರು – ಉಡುಪಿ – ತೀರ್ಥಹಳ್ಳಿ ಬಸ್‌ಗಳು, ಉಡುಪಿಯಿಂದ – ಹಾಲಾಡಿ – ಸಿದ್ದಾಪುರ ಕಡೆಗೆ ನಿತ್ಯ ಹತ್ತಾರು ಬಸ್‌ಗಳು ಸಂಚರಿಸುತ್ತವೆ. ಇದಲ್ಲದೆ ಉಡುಪಿಯಿಂದ ನೂರಾರು ವಾಹನಗಳು ಇದೇ ಮಾರ್ಗವಾಗಿ ತೆರಳುತ್ತವೆ. ಅದರಲ್ಲೂ ಪ್ರಮುಖವಾಗಿ ಬಿದ್ಕಲ್‌ಕಟ್ಟೆ, ಗಾವಳಿ, ಹಳ್ಳಾಡಿಯಿಂದ ಬಾಕೂìರು, ಬ್ರಹ್ಮಾವರಕ್ಕೆ ತೆರಳುವವರು ಸಂಕಷ್ಟ ಅನುಭವಿಸುತ್ತಾರೆ.

ಇದು ಕರಾವಳಿ ಜಿಲ್ಲೆಗಳನ್ನು ಮಲೆನಾಡಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದ್ದರೂ, ಇನ್ನೂ ಕೂಡ ಜಿಲ್ಲಾ ಮುಖ್ಯ ರಸ್ತೆಯಾಗಿಯೇ ಇದೆ. ಮಂಗಳೂರು, ಉಡುಪಿಯಿಂದ ತೀರ್ಥಹಳ್ಳಿಗೆ ಹಾಗೂ ತೀರ್ಥಹಳ್ಳಿಯಿಂದ ಉಡುಪಿ, ಮಂಗಳೂರು, ಸಾಗರಕ್ಕೆ ನಿತ್ಯ ಬಸ್‌ಗಳು ಸಂಚರಿಸುತ್ತವೆ. ಆದ್ದರಿಂದ ಈ ರಸ್ತೆಯನ್ನು ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಿ, ಅಭಿವೃದ್ಧಿಪಡಿಸಬೇಕು ಎಂದು ಈ ಭಾಗದ ಜನರು ಆಗ್ರಹಿಸಿದ್ದಾರೆ.

Advertisement

ಶೀಘ್ರ ಕಾಮಗಾರಿ ಆರಂಭ
ಗಾವಳಿಯಿಂದ ಹಳ್ಳಾಡಿಯವರೆಗಿನ ರಸ್ತೆ ಅಗಲೀಕರಣ, ತಿರುವು ವಿಸ್ತರಣೆ ಕಾಮಗಾರಿಗೆ 1 ಕೋ.ರೂ. ಪ್ಯಾಕೇಜ್‌ ಮಂಜೂರಾಗಿ ಕಾಮಗಾರಿಯೂ ಆರಂಭಗೊಂಡಿದೆ. ಆದರೆ ಮಳೆ ಬಂದಿದ್ದರಿಂದ ಆಗ ನಿಲ್ಲಿಸಲಾಗಿದ್ದು, ಮಳೆ ಕಡಿಮೆಯಾದ ಅನಂತರ ಶೀಘ್ರ ಕಾಮಗಾರಿ ನಡೆಯಲಿದೆ. ನವೆಂಬರ್‌ನಲ್ಲಿ ಡಾಮರೀಕರಣ ಹಾಗೂ ಅಗಲೀಕರಣ ಕಾಮಗಾರಿ ಆರಂಭಿಸಲಾಗುವುದು.
-ದುರ್ಗಾದಾಸ್‌, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌,
ಲೋಕೋಪಯೋಗಿ ಇಲಾಖೆ ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next