ಸಿರುಗುಪ್ಪ: ನಗರದ ತಾಪಂ ಕಚೇರಿಯಲ್ಲಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಶುದ್ಧ ಕುಡಿಯುವ ನೀರಿನ ಫಿಲ್ಟರ್‌ಗಳನ್ನು ಅಳವಡಿಸಲಾಗಿದೆ. ಆದರೆ ಈ ಫಿಲ್ಟರ್‌ಗಳಲ್ಲಿ ನೀರು ಶುದ್ಧೀಕರಣಗೊಳ್ಳದೆ ಕಚ್ಚಾ ನೀರು ಬರುತ್ತಿದ್ದು, ಈ ನೀರನ್ನು ಕುಡಿದವರು ಬೋರ್‌ವಲ್ ನೀರಿಗಿಂತ ಈ ಫಿಲ್ಟರ್‌ನ ನೀರು ಅಶುದ್ಧವಾಗಿವೆ ಎಂದು ಶಾಪ ಹಾಕುತ್ತಿದ್ದಾರೆ.
ನಗರದಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಸಾರ್ವಜನಿಕರು ಮತ್ತು ಶಿಕ್ಷಕರು ತಮ್ಮ ಕೆಲಸ ಕಾರ್ಯಗಳಿಗಾಗಿ ನಿತ್ಯವೂ ಬರುತ್ತಿದ್ದು, ಕಚೇರಿಗೆ ಬರುವ ಜನರಿಗೆ ಶುದ್ಧ ಕುಡಿಯುವ ನೀರು ಸಿಗಬೇಕೆನ್ನುವ ಉದ್ದೇಶದಿಂದ ಒಂದೂವರೆ ವರ್ಷದ ಹಿಂದೆ ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಫಿಲ್ಟರ್‌ನ್ನು ರೂ.1ಲಕ್ಷ 80ಸಾವಿರ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಆದರೆ ಈ ಫಿಲ್ಟರ್‌ಗಳು ನಿರ್ಮಾಣವಾದ ವರ್ಷದೊಳಗೆ ಕಾರ್ಯನಿರ್ವಹಿಸದೆ ಕೆಟ್ಟುನಿಂತಿವೆ. ಕಚೇರಿಗೆ ಬರುವ ಶಿಕ್ಷಕರು ಮತ್ತು ಸಾರ್ವಜನಿಕರು ನೀರು ಕುಡಿಯಲು ಹೋಟೆಲ್ ಹೋಗಬೇಕಾಗಿದೆ.
ಇನ್ನೂ ತಾಪಂ ಕಚೇರಿಯಲ್ಲಿ 2 ವರ್ಷದ ಹಿಂದೆ ಶುದ್ಧ ಕುಡಿಯುವ ನೀರನ್ನು ಕಚೇರಿಯಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗೆ ಮತ್ತು ತಮ್ಮ ಕೆಲಸ ಕಾರ್ಯಗಳಿಗಾಗಿ ನಿತ್ಯವೂ ವಿವಿಧ ಗ್ರಾಮಗಳಿಂದ ಬರುವ ಜನಪ್ರತಿನಿಧಿಗಳು, ಸಾರ್ವಜನಿಕರಿಗೆ ಒದಗಿಸಲು ನಿರ್ಮಿಸಲಾದ ಶುದ್ಧ ಕುಡಿಯುವ ನೀರಿನ ಫಿಲ್ಟರ್ ಕೆಟ್ಟು ಹೋಗಿದ್ದು, ಕಚ್ಚಾನೀರು ಪೂರೈಕೆಯಾಗುತ್ತಿದ್ದು, ಈ ಕಚೇರಿಗೆ ಬರುವವರು ಶುದ್ಧ ಕುಡಿಯುವ ನೀರು ಎನ್ನುವ ಉದ್ದೇಶದಿಂದ ಈ ನೀರನ್ನು ಕುಡಿಯುತ್ತಿದ್ದಾರೆ. ಆದರೆ ನೀರು ಶುದ್ಧೀಕರಣಗೊಳ್ಳದೆ ಇರುವುದರಿಂದ ಈ ನೀರು ಒಂದು ರೀತಿಯ ಕೆಟ್ಟವಾಸನೆ ಬರುತ್ತಿದ್ದು, ನೀರು ಕುಡಿದರೆ ವಾಂತಿ ಬರುವ ಅನುಭವವಾಗುತ್ತಿರುವುದರಿಂದ ಒಂದು ಬಾರಿ ನೀರು ಕುಡಿದವರು ಮತ್ತೂಮ್ಮೆ ಈ ಫಿಲ್ಟರ್‌ನ ನೀರು ಕುಡಿಯಲು ಮುಂದಾಗುತ್ತಿಲ್ಲ.
ಆದರೂ ಈ ಫಿಲ್ಟರ್‌ನ್ನು ರಿಪೇರಿ ಮಾಡಿಸಲು ತಾ.ಪಂ ಅಧಿಕಾರಿಗಳು ಮುಂದಾಗಿಲ್ಲದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಫಿಲ್ಟರ್ ಇದ್ದರೂ ಶುದ್ಧ ನೀರು ಸಿಗದ ಕಾರಣ ಕಚೇರಿ ಸಿಬ್ಬಂದಿ ಮತ್ತು ಸಾರ್ವಜನಿಕರು ಕುಡಿಯುವ ನೀರಿಗಾಗಿ ಹೋಟೆಲ್ಗಳ ಮೊರೆ ಹೋಗುತ್ತಿದ್ದಾರೆ.
ತಾಪಂ ಕಚೇರಿಯ ರಿಪೇರಿ ಕಾರ್ಯ ಇನ್ನೊಂದು ವಾರದಲ್ಲಿ ಮುಗಿಯುತ್ತಿದ್ದು, ನಂತರ ಶುದ್ಧ ಕುಡಿಯುವ ನೀರಿನ ಫಿಲ್ಟರ್‌ನ್ನು ರಿಪೇರಿ ಮಾಡಿಸಿ ಸಿಬ್ಬಂದಿಗೆ ಮತ್ತು ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರೋದಗಿಸಲು ಕ್ರಮ ಕೈಗೊಳ್ಳಲಾಗುವುದು.
•
ಶಿವಪ್ಪ ಸುಬೇದಾರ್, ತಾಪಂ, ಇಒ.
ಕೆಟ್ಟು ನಿಂತಿರುವ ಕುಡಿಯುವ ನೀರಿನ ಫಿಲ್ಟರ್‌ನ್ನು ರಿಪೇರಿ ಮಾಡಿಸಿ ಕಚೇರಿ ಸಿಬ್ಬಂದಿ ಮತ್ತು ಸಾರ್ವಜನಿಕರಿಗೆ ಶುದ್ಧ ನೀರೋದಗಿಸಲು ಕ್ರಮ ಕೈಗೊಳ್ಳಲಾಗುವುದು.
•
ಪಿ.ಡಿ. ಭಜಂತ್ರಿ,
ಕ್ಷೇತ್ರ ಶಿಕ್ಷಣಾಧಿಕಾರಿ.