Advertisement

ಇನ್ನೂ ಒಂದೆರಡು ದಿನ ವಿದ್ಯುತ್‌ ವ್ಯತ್ಯಯ?

05:18 AM Feb 01, 2019 | Team Udayavani |

ಮಹಾನಗರ: ಕಾವೂರಿನಲ್ಲಿರುವ ಶರಾವತಿ ವಿದ್ಯುತ್‌ ಸ್ವೀಕರಣಾ ಕೇಂದ್ರದಿಂದ ಬಿಜೈಯ 110 ಕೆವಿ ವಿದ್ಯುತ್‌ ಉಪಕೇಂದ್ರಕ್ಕೆ ವಿದ್ಯುತ್‌ ಸರಬರಾಜು ಆಗುವ 110 ಕೆವಿ ಭೂಗತ ಕೇಬಲ್‌ಗೆ, ಕುಂಟಿಕಾನ ಪ್ಲೈಓವರ್‌ ಬಳಿ ಖಾಸಗಿ ಕಂಪೆನಿಯೊಂದರ ಕೇಬಲ್‌ ಅಳವಡಿಕೆ ಕಾಮಗಾರಿಯಿಂದ ಹಾನಿಯಾಗಿದ್ದು, ಕಳೆದೆರಡು ದಿನಗಳಲ್ಲಿ ನಗರದ ಬಹಳಷ್ಟು ಪ್ರದೇಶದಲ್ಲಿ ವಿದ್ಯುತ್‌ ಸಂಪರ್ಕದಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ. ಆದರೆ, ಕೇಬಲ್‌ ಸರಿಪಡಿಸುವ ಕಾರ್ಯ ಮುಂದುವರಿದಿದ್ದು, ಇನ್ನೂ ಒಂದೆರಡು ದಿನ ವಿದ್ಯುತ್‌ ಸಮಸ್ಯೆ ಮುಂದುವರಿಯುವ ಸಾಧ್ಯತೆಯಿದೆ.

Advertisement

ನಗರದಲ್ಲಿ ಕೇಬಲ್‌ ಹಾನಿಗೊಂಡಿರುವುದು, ಕೆಪಿಟಿಸಿಎಲ್‌, ಮೆಸ್ಕಾಂಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಪರ್ಯಾಯ ವ್ಯವಸ್ಥೆ ಕಲ್ಪಿಸುವತ್ತ ಪ್ರಯತ್ನ ಕೂಡ ನಡೆಯುತ್ತಿದೆ. ಏಕೆಂದರೆ, ಕುಂಟಿಕಾನ ಫ್ಲೈಓವರ್‌ನ ಕೆಳಭಾಗದಲ್ಲಿ ಭೂಗತ ಕೇಬಲ್‌ನ ದುರಸ್ತಿ ಕಾರ್ಯವನ್ನು ಕೆಪಿಟಿಸಿಎಲ್‌ ಕೈಗೆತ್ತಿಕೊಂಡಿದ್ದು, ಗುರುವಾರವೂ ಅದು ಮುಂದು ವರಿದಿತ್ತು. ಭೂಗತ ಕೇಬಲ್‌ಗ‌ಳಿಗೆ ಆಗಿರುವ ತೊಂದರೆ ಸರಿಪಡಿಸಲು ಈಗಾಗಲೇ ಚೆನ್ನೈಯಿಂದ ಎಂಜಿನಿಯರ್‌ಗಳನ್ನು ಕರೆಸಿ, ಕಾಮಗಾರಿ ನಡೆಸಲಾಗುತ್ತಿದೆ. ಬುಲ್ಡೋಜರ್‌ ಸಹಾಯದಿಂದ ಪ್ಲೈಓವರ್‌ನ ಕೆಳಭಾಗದ ರಸ್ತೆಯ ಬದಿಯಲ್ಲಿ ಸುಮಾರು ಮೂರೂವರೆ ಮೀಟರ್‌ನಷ್ಟು ಆಳಕ್ಕೆ ಕೊರೆದು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

ಕೆಪಿಟಿಸಿಎಲ್‌ನ ಕಾವೂರಿನಲ್ಲಿರುವ 220 ಕೆ.ವಿ. ಸಾಮರ್ಥ್ಯದ ಶರಾವತಿ ವಿದ್ಯುತ್‌ ಸ್ವೀಕರಣೆ ಕೇಂದ್ರದಿಂದ ಜಿಲ್ಲೆಯ ಬೇರೆ ಬೇರೆ ಭಾಗದ ಮೆಸ್ಕಾಂ ಸಬ್‌ ಸ್ಟೇಷನ್‌ಗೆ ವಿದ್ಯುತ್‌ ಸರಬರಾಜು ಆಗುತ್ತದೆ. ಇದರಂತೆ ಕಾವೂರಿನಿಂದ ಬಿಜೈಗೆ ಸುಮಾರು 5.8 ಕಿ.ಮೀ. ಉದ್ದದಲ್ಲಿ ಎರಡೂವರೆ ವರ್ಷದ ಹಿಂದೆ ಕೆಪಿಟಿಸಿಎಲ್‌ ಭೂಗತ ಕೇಬಲ್‌ಗ‌ಳನ್ನು ಅಳವಡಿಸಿತ್ತು. 3 ಕೇಬಲ್‌ಗ‌ಳನ್ನು ರಸ್ತೆಗಿಂತ ಮೂರೂವರೆ ಮೀಟರ್‌ ಅಡಿಯಷ್ಟು ಆಳ ಮಾಡಿ ಜೋಡಿಸಿಡಲಾಗಿದೆ. ಬಳಿಕ ಮಣ್ಣು ಹಾಕಿ ಮುಚ್ಚಲಾಗಿದೆ. ಕೆಪಿಟಿಸಿಎಲ್‌ನಿಂದ ಕಾವೂರು-ಬಿಜೈಗೆ ಮಾತ್ರ ಭೂಗತ ಕೇಬಲ್‌ಗ‌ಳಿದ್ದರೆ, ಮೆಸ್ಕಾಂನಿಂದ ನಗರದ ಬಹುತೇಕ ಭಾಗಗಳಲ್ಲಿ ಭೂಗತ ಕೇಬಲ್‌ಗ‌ಳು ಕಾರ್ಯನಿರ್ವಹಿಸುತ್ತಿವೆ.

ಕುಂಟಿಕಾನದಲ್ಲಿ ಆಗಿದ್ದೇನು?
ಖಾಸಗಿ ಕಂಪೆನಿಯ ಕೇಬಲ್‌ನವರು ಎಂದು ಹೇಳಲಾಗಿರುವವರು ಜ. 29ರಂದು ಮಧ್ಯರಾತ್ರಿ 12ರ ಸುಮಾರಿಗೆ ಕುಂಟಿಕಾನ ಫ್ಲೈಓವರ್‌ನ ಕೆಳಭಾಗದಲ್ಲಿ ಕೇಬಲ್‌ ಅಳವಡಿಸಲು ಡ್ರಿಲ್‌ ಮಾಡುತ್ತಿದ್ದಾಗ ಕೆಪಿಟಿಸಿಎಲ್‌ನ 3 ಭೂಗತ ಕೇಬಲ್‌ಗ‌ಳ ಪೈಕಿ ಎರಡಕ್ಕೆ ಹಾನಿಯಾಗಿದೆ. ಇದರಿಂದಾಗಿ ಬಿಜೈಗೆ ಬರುತ್ತಿದ್ದ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗಿತ್ತು. ಆದರೆ ಮಧ್ಯರಾತ್ರಿ ಎಲ್ಲಿ ಸಮಸ್ಯೆ ಆಗಿದೆ ಎಂದು ತಿಳಿಯಲು ಪ್ರಯತ್ನಿಸಿದರೂ ಫಲ ನೀಡಲಿಲ್ಲ. ಕುಂಟಿಕಾನ ಪ್ಲೈಓವರ್‌ ಕೆಳಗೆ ಕೇಬಲ್‌ಗೆ ಹಾನಿಯಾದ ಬಗ್ಗೆ ‘ಫಾಲ್ಟ್ ಲೊಕೇಟರ್‌’ ಸಹಾಯದಿಂದ ಬುಧವಾರ ಬೆಳಗ್ಗೆ ಪತ್ತೆ ಹಚ್ಚಲಾಯಿತು. ಆ ಕ್ಷಣದಿಂದ ಕೆಪಿಟಿಸಿಎಲ್‌ ಅಧಿಕಾರಿಗಳು ಸರಿಪಡಿಸುವ ಕಾಮಗಾರಿ ಆರಂಭಿಸಿದರು.

ಜೋಡಿಸಲು 8 ತಾಸು ಬೇಕು!
ಬುಲ್ಡೋಜರ್‌ ಸಹಾಯದಿಂದ ಭೂಗತ ಕೇಬಲ್‌ ಹಾದು ಹೋದ ಸ್ಥಳವನ್ನು ಅಗೆದು ಹಾನಿಯಾದ ಜಾಗವನ್ನು ಗುರುವಾರ ಗುರುತಿಸಲಾಗಿದೆ. ಸುಮಾರು 10ರಿಂದ 15 ಫೀಟ್ವರೆಗೆ ಎಸ್ಕವೇಶನ್‌ ಮಾಡಿ ಮಣ್ಣು ಸರಿಸಿ ಕಾಮಗಾರಿ ನಡೆಸಲಾಗುತ್ತಿದೆ. ಎರಡೂವರೆ ವರ್ಷಗಳ ಹಿಂದೆ ಚೆನ್ನೈ ಮೂಲದ ಕಂಪೆನಿಯು ಭೂಗತ ಕೇಬಲ್‌ ಅಳವಡಿಸಿದ ಹಿನ್ನೆಲೆಯಲ್ಲಿ ಅದರ ನುರಿತ ಎಂಜಿನಿಯರ್‌ಗಳನ್ನೇ ಇದೀಗ ದುರಸ್ತಿ ಕಾರ್ಯಕ್ಕೆ ಕರೆಸಿಕೊಳ್ಳಲಾಗಿದೆ. ಇಬ್ಬರು ತಾಂತ್ರಿಕ ತಜ್ಞರು ಮಂಗಳೂರಿಗೆ ಗುರುವಾರ ಆಗಮಿಸಿದ್ದಾರೆ. ಜತೆಗೆ ಕೆಪಿಟಿಸಿಎಲ್‌ನ ಹಿರಿಯ ಅಧಿಕಾರಿಗಳು ಕೂಡ ಸ್ಥಳದಲ್ಲಿ ಇದ್ದಾರೆ. ಹಾನಿಯಾದ ಕೇಬಲ್‌ನ ಭಾಗವನ್ನು ತುಂಡರಿಸಿ ಅಲ್ಲಿಗೆ ಹೊಸ ಸೇರ್ಪಡೆಗೊಳಿಸಬೇಕಿದೆ. ಆದರೆ, ಒಂದೊಂದು ‘ಜಾಯಿಂಟ್’ ಮಾಡಬೇಕಾದರೂ ಕನಿಷ್ಠ 8ರಿಂದ 10 ತಾಸು ಬೇಕಾಗಬಹುದು. ಒಟ್ಟು ನಾಲ್ಕು ಜಾಯಿಂಟ್ ಮಾಡಬೇಕಾದ ಅಗತ್ಯವಿರುವ ಕಾರಣದಿಂದ ಕಾಮಗಾರಿ ಪೂರ್ಣಗೊಳಿಸಲು ಒಂದೆರಡು ದಿನ ಬೇಕಾಗಬಹುದು ಎಂದು ಕೆಪಿಟಿಸಿಎಲ್‌ನ ಕಿರಿಯ ಎಂಜಿನಿಯರ್‌ ರಾಕೇಶ್‌ ‘ಸುದಿನ’ಕ್ಕೆ ತಿಳಿಸಿದ್ದಾರೆ.

Advertisement

ಕೇಬಲ್‌ ಅಳವಡಿಕೆ; ಮನಪಾ ಅನುಮತಿ ಅಗತ್ಯ
‘ನಗರದ ಯಾವುದೇ ಭಾಗದಲ್ಲಿ ರಸ್ತೆ ಅಗೆದು ಯಾವುದೇ ಕೇಬಲ್‌ ಅಳವಡಿಸುವುದಾದರೂ ಪಾಲಿಕೆಯ ಅನುಮತಿ ಪಡೆಯಬೇಕು. ಬಹುತೇಕ ಕೇಬಲ್‌ನವರು ಇದನ್ನು ಪಾಲಿಸಿಕೊಂಡು ಬರುತ್ತಾರೆ. ಅನುಮತಿ ನೀಡುವಾಗಲೇ ಅವರಿಗೆ ಎಚ್ಚರಿಕೆಯನ್ನು ನೀಡಲಾಗುತ್ತದೆ. ಅದರಂತೆ, ಕೇಬಲ್‌ ಅಳವಡಿಸುವಾಗ ಯಾವುದೇ ಧಕ್ಕೆ ಆದರೆ ಅವರೇ ಜವಾಬ್ದಾರರು ಮತ್ತು ಆ ಪ್ರದೇಶದಲ್ಲಿ ಯಾವೆಲ್ಲ ಕೇಬಲ್‌ ಇದೆ ಹಾಗೂ ಇತರ ಮುಂಜಾಗೃತಾ ಕ್ರಮಗಳನ್ನು ಕಡ್ಡಾಯವಾಗಿ ಪರಿಗಣಿಸುವಂತೆ ಸ್ಪಷ್ಟ ನಿರ್ದೇಶನಗಳಿವೆ ಎಂದು ಮನಪಾ ಆಯುಕ್ತ ಮೊಹಮ್ಮದ್‌ ನಝೀರ್‌ ‘ಸುದಿನ’ಕ್ಕೆ ತಿಳಿಸಿದ್ದಾರೆ.

ವಿದ್ಯುತ್‌ ವ್ಯತ್ಯಯವಾಗುತ್ತಿರುವ ಪ್ರದೇಶಗಳು
ಕುಂಟಿಕಾನದಲ್ಲಿ ಭೂಗತ ಕೇಬಲ್‌ನ ದುರಸ್ತಿ ಯಿಂದಾಗಿ, ಬಿಜೈ, ಕಾಪಿಕಾಡ್‌, ಆನೆಗುಂಡಿ, ಕುಂಟಿಕಾನ, ದಡ್ಡಲ್‌ಕಾಡು, ಉರ್ವಸ್ಟೋರ್‌, ಕೋಡಿಕಲ್‌, ಭಾರತೀನಗರ, ವಿವೇಕನಗರ, ಕೆಎಸ್‌ಆರ್‌ಟಿಸಿ, ಅತ್ತಾವರ, ಕದ್ರಿ, ವಲೆನ್ಸಿಯಾ, ಇನ್ಫೋಸಿಸ್‌, ಬಲ್ಮಠ, ಬಂದರು, ಕುದ್ರೋಳಿ, ಮಣ್ಣಗುಡ್ಡ, ಅಳಕೆ, ಹಂಪನಕಟ್ಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯವಾಗುತ್ತಿದೆ. ಆದರೆ, ಮಣ್ಣಗುಡ್ಡ ಸಹಿತ ಸಣ್ಣ ಸ್ಟೇಷನ್‌ಗಳಿಗೆ ಬಿಜೈನಿಂದ ಸರಬರಾ ಜಾಗುತ್ತಿರುವ ವಿದ್ಯುತ್‌ ಸ್ಥಗಿತವಾಗಿದ್ದರೂ ಇತರ ಸಬ್‌ಸ್ಟೇಷನ್‌ಗಳಿಂದ ಅಲ್ಲಿಗೆ ಹಂತ-ಹಂತವಾಗಿ ಮೆಸ್ಕಾಂ ವಿದ್ಯುತ್‌ ಸರಬರಾಜು ಮಾಡುತ್ತಿದೆ. ಆದರೂ, ಮಂಗಳೂರಿನ ಎಲ್ಲ ಕಡೆಗೂ ಸಮರ್ಪ ಕವಾಗಿ ವಿದ್ಯುತ್‌ ಸರಬರಾಜು ಮಾಡಲಾಗುತ್ತಿಲ್ಲ ಎಂದು ಮೆಸ್ಕಾಂ ಮೂಲಗಳು ತಿಳಿಸಿವೆ.

ಹಾನಿ ಮಾಡಿದವರ ವಿರುದ್ಧ ದೂರು
ಕಾವೂರಿನಿಂದ ಬಿಜೈಯ 110 ಕೆವಿ ವಿದ್ಯುತ್‌ ಉಪಕೇಂದ್ರಕ್ಕೆ ವಿದ್ಯುತ್‌ ಸರಬರಾಜಾಗುವ 110 ಕೆವಿ ಭೂಗತ ಕೇಬಲ್‌ಗೆ, ಕುಂಟಿಕಾನ ಪ್ಲೈಓವರ್‌ ಬಳಿ ಹಾನಿಯುಂಟಾಗಿದೆ. ಇದನ್ನು ಸರಿಪಡಿಸುವ ಕಾಮಗಾರಿ ನಡೆಸಲಾಗುತ್ತಿದೆ. ಹಾನಿ ಮಾಡಿದವರ ವಿರುದ್ಧ ಕ್ರಮ ಕ್ಕೆ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ. ಒಂದೆರಡು ದಿನದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ.
– ತೇಜಸ್ವಿ,
ಕಾರ್ಯನಿರ್ವಾಹಕ ಎಂಜಿನಿಯರ್‌ (ವಿದ್ಯುತ್‌) ಕೆಪಿಟಿಸಿಎಲ್‌

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next