ವಾಷಿಂಗ್ಟನ್: ಇರಾನ್ ವಿರುದ್ಧ ಅಮೆರಿಕ ನಿಷೇಧದ ಪರಿಣಾಮ ದಿನದಿಂದ ದಿನಕ್ಕೆ ತೀವ್ರವಾಗುತ್ತಾ ಸಾಗುತ್ತಿದೆ. ಕೆಲವೇ ದಿನಗಳ ಹಿಂದೆ ಇರಾನ್ ಪ್ರೇರಿತ ಬಂಡುಕೋರರು ಸೌದಿ ಅರೇಬಿಯಾ ಕರಾವಳಿಯಲ್ಲಿ ತೈಲ ಪೈಪ್‌ಗ್ಳನ್ನು ಸ್ಫೋಟಿಸಿ ಆತಂಕ ಹುಟ್ಟಿಸಿದ್ದರೆ, ಈಗ ಅಮೆರಿಕ, ಇರಾನ್ ಮಧ್ಯೆ ಯುದ್ಧ ಭೀತಿ ಕಾಡ ತೊಡಗಿದೆ. ಒಂದು ವೇಳೆ ಇರಾನ್ ಯುದ್ಧ ಬಯಸಿದರೆ, ಅದು ಇರಾನ್‌ನ ಅಂತ್ಯವಾಗಲಿದೆ. ಅಮೆರಿಕವನ್ನು ಬೆದರಿಸಬೇಡಿ ಎಂದು ಇರಾನ್‌ಗೆ ಅಮೆರಿಕ ಅಧ್ಯಕ್ಷ ಟ್ರಂಪ್ ಸೋಮವಾರ ಎಚ್ಚರಿಸಿದ್ದಾರೆ. ರವಿವಾರ ಇರಾಕ್‌ನ ಬಾಗ್ಧಾದ್‌ನಲ್ಲಿ ಅಮೆರಿಕದ ಕಚೇರಿಗಳಿರುವ ಭಾಗಗಳ ಮೇಲೆ ಕ್ಷಿಪಣಿ ದಾಳಿ ನಡೆಸಲಾಗಿದೆ. ಆದರೆ ಈ ದಾಳಿಯ ಹಿಂದೆ ಯಾರ ಕೈವಾಡ ಇದೆ ಎಂಬುದು ಇನ್ನೂ ತಿಳಿದುಬಂದಿಲ್ಲವಾದರೂ, ಇರಾನ್‌ನದ್ದೇ ಕುಕೃತ್ಯವಿದು ಎಂದು ಅಮೆರಿಕ ಊಹಿಸಿದೆ. ಆದರೆ ಇರಾನ್ ಯುದ್ಧವನ್ನು ಬಯಸುತ್ತಿಲ್ಲ. ಅಂತಹ ಸನ್ನಿವೇಶ ಎದುರಾಗದು ಎಂದು ಅಲ್ಲಿನ ವಿದೇಶಾಂಗ ಸಚಿವ ಮೊಹಮ್ಮದ್ ಜವಾದ್ ಜಾಫ್ರಿ ಹೇಳಿದ್ದಾರೆ.