ಹಳಿಯಾಳ: ಹಳಿಯಾಳದಲ್ಲಿ ಶನಿವಾರ ಮಧ್ಯಾಹ್ನ ಭಾರೀ ಬಿರುಗಾಳಿ, ಗುಡುಗು, ಮಿಂಚಿನೊಂದಿಗೆ ಧೋ ಎಂದು ವರ್ಷ ಧಾರೆಯಾಗಿದ್ದು ಅಪಾರ ಹಾನಿ ಸಂಭವಿಸಿದೆ.
ಹಳಿಯಾಳ ಪಟ್ಟಣ ಸೇರಿದಂತೆ ಗ್ರಾಮಾಂತರ ಭಾಗದಲ್ಲಿ ಎರಡು ಗಂಟೆಗೂ ಹೆಚ್ಚು ಕಾಲ ಭಾರೀ ಬಿರುಗಾಳಿಯಿಂದ ಕೂಡಿ ಸುರಿದ ಮಳೆಗೆ ಲಕ್ಷಾಂತರ ರೂ. ಆಸ್ತಿ ಪಾಸ್ತಿ ಹಾನಿ ಸಂಭವಿಸಿದೆ.
ಪಟ್ಟಣದ ಅಂಚಿನ ಹಲವೆಡೆ ಹೆದ್ದಾರಿಗಳಲ್ಲಿ ಹಾಗೂ ಗ್ರಾಮಾಂತರ ಭಾಗದಲ್ಲಿ ಗಿಡ ಮರಗಳು, ವಿದ್ಯುತ್ ಕಂಬಗಳು ಧರಾಶಾಹಿಯಾಗಿದ್ದು ಅಪಾರ ಹಾನಿ ಸಂಭವಿಸಿದೆ.ವಿದ್ಯುತ್ ಕಂಬಗಳು ಮುರಿದು ಬಿದ್ದಿರುವುದರಿಂದ ಪಟ್ಟಣ ಸೇರಿದಂತೆ ಗ್ರಾಮಾಂತರ ಭಾಗದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.
ಈ ಹಿಂದೆ ಭಾರೀ ಬಿರುಗಾಳಿಗೆ ಸಿಲುಕಿ ಮಾವಿನ ಬೆಳೆ ಹಾನಿಗೊಳಗಾಗಿತ್ತು. ಅದಲ್ಲದೆ ಶನಿವಾರ ಭಾರೀ ಬಿರುಗಾಳಿಯೊಂದಿಗೆ ಸುರಿದ ಮಳೆಗೆ ಕೊಟ್ಯಂತರ ರೂ. ಮಾವಿನ ಬೆಳೆ ಹಾನಿಗೀಡಾಗಿದೆ.
ತಾಲೂಕಿನ ಭಾಗವತಿ ಗ್ರಾಮದಲ್ಲಿ ಮರಗಳು ವಾಹನಗಳ ಮೇಲೆ ಬಿದ್ದು ವಾಹನಗಳು ಜಖಂಗೊಂಡಿವೆ. ಇದಷ್ಟೇ ಅಲ್ಲದೆ ಇನ್ನೂ ಹಲವೆಡೆ ಭಾರೀ ಬಿರುಗಾಳಿಗೆ ಮನೆಯ ಛಾವಣಿಗಳು ಹಂಚುಗಳು ಹಾರಿಹೋಗಿ ಅಪಾರ ಪ್ರಮಾಣದ ಹಾನಿ ಸಂಭವಿಸಿ ಜನಜೀವನ ಅಸ್ತವ್ಯಸ್ತವಾಗಿದೆ.