Advertisement

ಪ್ಲಾಸ್ಟಿಕ್ ನಿಂದ ಅರಣ್ಯಕ್ಕೆ ಹಾನಿ: ಶಶಿಧರ

06:02 PM Jul 11, 2022 | Team Udayavani |

ಜೋಯಿಡಾ: ಉಳವಿಗೆ ಬರುವ ಪ್ರವಾಸಿಗರು ಅರಣ್ಯದಲ್ಲಿ ರಸ್ತೆ ಪಕ್ಕದಲ್ಲಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ಎಸೆಯುತ್ತಿದ್ದಾರೆ. ಈ ರೀತಿ ಬೇಕಾಬಿಟ್ಟಿ ಪ್ಲಾಸ್ಟಿಕ್‌ ಎಸೆಯುವುದರಿಂದ ಪರಿಸರಕ್ಕೆ ನಾನಾ ರೀತಿ ಹಾನಿಯಾಗುತ್ತದೆ ಎಂದು ಧಾರವಾಡ ಜಿಎಸ್‌ ಎಂ ಪ್ಲಾಸ್ಟಿಕ್‌ ಇಂಡಸ್ಟ್ರೀಸ್‌ನ ಮಾಲಕ ಶಶಿಧರ ಮದರಖಂಡಿ ಹೇಳಿದರು.

Advertisement

ಅವರು ತಾಲೂಕಿನ ಚಾಪೇಲಿ ಗ್ರಾಮದಲ್ಲಿ ವನ್ಯಜೀವಿ ವಲಯ ಗುಂದ, ಗ್ರಾಮ ಅಭಿವೃದ್ಧಿ ಸಮಿತಿ ಚಾಪೇಲಿ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಪ್ಲಾಸ್ಟಿಕ್‌ ಬಳಕೆ ಕಡಿಮೆ ಮಾಡುವ ಕುರಿತು ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಜೀವನದಲ್ಲಿ ಪ್ಲಾಸ್ಟಿಕ್‌ ಬಳಕೆ ಕಡಿಮೆ ಮಾಡಬೇಕು, ಗುಂದ ವನ್ಯಜೀವಿ ವಲಯದ ಅಧಿಕಾರಿಗಳು ಸಿಬ್ಬಂದಿ ಚಾಪೇಲಿ ಗ್ರಾಮ ಅರಣ್ಯ ಸಮಿತಿ ಉತ್ತಮ ಕೆಲಸ ಮಾಡುತ್ತಿದೆ. ಅರಣ್ಯದಲ್ಲಿ ಎಸೆದ ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ಸಂಗ್ರಹಿಸಿದ್ದಾರೆ. ಅದನ್ನು ನಮ್ಮ ಪ್ಲಾಸ್ಟಿಕ್‌ ಇಂಡಸ್ಟ್ರೀಸ್‌ಗೆ ಒಯ್ದು ಪುನರ್‌ ಬಳಕೆ ಮಾಡುತ್ತೇವೆ ಎಂದರು.

ಉಳವಿ ಭಕ್ತ ಪ್ರಕಾಶ ಶೃಂಗೇರಿ ಮಾತನಾಡಿ, ಮಡಕೇರಿ, ಚಿಕ್ಕಮಗಳೂರು ಕಡೆಗಳಲ್ಲಿ ಅಲ್ಲಿನ ಗ್ರಾಮಸ್ಥರು ಎಲ್ಲೆಂದರಲ್ಲಿ ಪ್ಲಾಸ್ಟಿಕ್‌ ಎಸೆಯದಂತೆ ತಿಳಿ ಹೇಳುತ್ತಾರೆ. ಅದೇ ರೂಢಿಯನ್ನು ಇಲ್ಲಿನ ಗ್ರಾಮಸ್ಥರು ಮಾಡಿದರೆ ಉತ್ತಮ ಪರಿಸರ ಕಾಣಬಹುದು ಎಂದರು.

ಗುಂದ ವಲಯ ಅರಣ್ಯಾಧಿಕಾರಿ ರವಿಕಿರಣ ಸಂಪಗಾವಿ ಮಾತನಾಡಿ, ಪರಿಸರ ಸ್ವಚ್ಛವಾಗಿದ್ದರೆ ಆರೋಗ್ಯವೂ ಉತ್ತಮವಾಗಿರುತ್ತದೆ. ನಮ್ಮ ಆರೋಗ್ಯ ಉತ್ತಮವಾಗಿರಲು ನಾವು ನಮ್ಮ ಸುತ್ತಮುತ್ತ ತ್ಯಾಜ್ಯಗಳು, ಕೊಳಚೆಗಳು ಇಲ್ಲದಂತೆ ನೋಡಿಕೊಂಡು ಪ್ಲಾಸ್ಟಿಕ್‌ ಬಳಕೆ ನಿಲ್ಲಿಸಬೇಕು ಎಂದರು.

Advertisement

ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ದಿಲೀಪ ಮಿರಾಶಿ, ಉಳವಿ ಮತ್ತು ನಂದಿಗದ್ದೆ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರು ಮಾತನಾಡಿ ಪ್ಲಾಸ್ಟಿಕ್‌ ಮುಕ್ತ ವಲಯವನ್ನಾಗಿ ಮಾಡಲು ಗ್ರಾಪಂ ಸಹಕರಿಸುವ ಭರವಸೆ ನೀಡಿದರು. ಗುಂದ ವಲಯದಲ್ಲಿ ಸಂಗ್ರಹಿಸಿದ ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ಧಾರವಾಡದ ಉದ್ಯಮಿಗೆ ಹಸ್ತಾಂತರಿಸಿದರು. ಗುಂದ ವನ್ಯಜೀವಿ ವಲಯದ ಡಿಆರ್‌ಎಫ್‌ಒ ಮಧು ಹೊನ್ನಾಳಿ, ಕೃಷ್ಣಾ ಎಡಗೆ ಹಾಗೂ ಇತರ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next