Advertisement

ಕುಂದಾಪುರ ತಾಲೂಕಿನಾದ್ಯಂತ ಗಾಳಿ ಮಳೆಗೆ ಹಾನಿ

11:26 PM Jul 11, 2019 | Team Udayavani |

ಕುಂದಾಪುರ: ಹಕ್ಲಾಡಿ ಗ್ರಾಮದ ಚಿಲ್ಲರೆ ಗುಡ್ಡ ಎನ್ನುವಲ್ಲಿ ಭಾರೀ ಮಳೆಯಿಂದಾಗಿ ಮೂರು ಕಡೆಗಳಲ್ಲಿ ಗುಡ್ಡ ಕುಸಿತಕ್ಕೆ ಒಳಗಾಗಿದ್ದು, ಇದರಿಂದ ಸ್ಥಳೀಯ ನಿವಾಸಿಗಳು ಆತಂಕದಲ್ಲಿದ್ದಾರೆ. ಇನ್ನು ಸ್ಥಳಕ್ಕೆ ಕುಂದಾಪುರ ಎಸಿ ಡಾ| ಎಸ್‌. ಮಧುಕೇಶ್ವರ್‌, ತಹಶೀಲ್ದಾರ್‌ ತಿಪ್ಪೇಸ್ವಾಮಿ ಭೇಟಿ ನೀಡಿದ್ದಾರೆ.

Advertisement

ಚಿಲ್ಲರೆ ಗುಡ್ಡದ ಕುಸಿದ ಜಾಗದಲ್ಲಿ ಬೃಹದಾಕಾರದ ಬಂಡೆ ಶಿಥಿಲಗೊಂಡಿದ್ದು, ಬಂಡೆ ಬದಿಯ ಮಣ್ಣು ಕಳಚಿಕೊಳ್ಳುತ್ತಿದ್ದು, ಬಂಡೆ ಜಾರಿದರೆ ಆ ಗುಡ್ಡದ ತಪ್ಪಲಿನಲ್ಲಿರುವ ಎರಡು ಮನೆಗೆ ಅಪಾಯ ಉಂಟಾಗುವ ಭೀತಿ ಎದುರಾಗಿದೆ. ಗುಡ್ಡದ ಮತ್ತೂಂದು ಬದಿ ಕುಸಿದ ಪಕ್ಕದಲ್ಲೇ ಮನೆಯಿದ್ದು, ಇನ್ನೊಂದು ಕಡೆ ಕೂಡ ಗುಡ್ಡ ಸೀಳಿದ್ದು, ಅಲ್ಲೂ ಸಾಕಷ್ಟು ಕುಸಿತ ಆಗಿದ್ದು, ಪದೇ ಪದೇ ಮಣ್ಣು ಕುಸಿಯುತ್ತಿದೆ.

ಗುಡ್ಡದಲ್ಲಿರುವ ಬಂಡೆ ಕುಸಿಯುವ ಹಾಗಿದ್ದು, ಅದು ಹೊರಳಿ ಬಂದರೆ ಬೆಟ್ಟದ ಅಕ್ಕ- ಪಕ್ಕದ ಮನೆಗಳಿಗೆ ಅಪಾಯ ಸಂಭವಿಸುವ ಸ್ಥಿತಿ ಇದೆ. ಮುಂಜಾಗರೂಕತೆ ಹಿನ್ನೆಲೆಯಲ್ಲಿ ಈ ರಸ್ತೆಯಲ್ಲಿ ರಾತ್ರಿ ವೇಳೆ ಸಂಚಾರ ನಿಷೇಧಿಸಲಾಗಿದ್ದು ಅಪಾಯಕಾರಿ ಪ್ರದೇಶ ಎನ್ನುವ ಸೂಚನಾ ಫಲಕ ಅಳವಡಿಸಲಾಗಿದೆ. ಮಳೆ ಜೋರಾದರೆ ಮತ್ತಷ್ಟು ಮಣ್ಣು ಕುಸಿಯುವ ಅಪಾಯವಿದ್ದು, ಪರಿಸರದ ಮನೆಗಳ ಜನರ ಸ್ಥಳಾಂತರ ಮಾಡುವ ಯೋಚನೆ ಕೂಡ ಇದೆ ಎಂದು ಕುಂದಾಪುರ ತಹಶೀಲ್ದಾರ್‌ ತಿಪ್ಪೇಸ್ವಾಮಿ ತಿಳಿಸಿದ್ದಾರೆ.

ಹಕ್ಕಾಡಿ ಗ್ರಾ.ಪಂ. ಉಪಾಧ್ಯಕ್ಷ ಸುಭಾಸ್‌ ಶೆಟ್ಟಿ ಹೊಳ್ಮಗೆ, ಸದಸ್ಯ ಕೋಟಿ ಸುಧಾಕರ ಶೆಟ್ಟಿ, ಕಟ್ಟಡ ಕಾರ್ಮಿಕ ಸಂಘದ ಕಾರ್ಯದರ್ಶಿ ಚಂದ್ರಶೇಖರ್‌ ಹಕ್ಲಾಡಿ, ಶ್ರೀನಿವಾಸ ಮೊಗವೀರ, ಹಕ್ಲಾಡಿ ಗ್ರಾ.ಪಂ. ಪಿಡಿಒ ಚಂದ್ರ ಪೂಜಾರಿ, ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಕುಂದಾಪುರ, ಜು. 11: ಯಡಾಡಿ – ಮತ್ಯಾಡಿ ಗ್ರಾಮದ ಸಿರಿಮಠ ಎನ್ನುವಲ್ಲಿ ಸರೋಜಿನಿ ಎನ್‌. ಶೆಟ್ಟಿ ಅವರ ತೋಟಕ್ಕೆ ಬುಧವಾರ ಗಾಳಿ – ಮಳೆಗೆ ಸುಮಾರು 100 ಅಡಿಕೆ ಮರ, 8 ತೆಂಗಿನ ಮರ, ಮಾವಿನ ಮರ, ಇತರೆ ಮರಗಳು ಧರೆಗುರುಳಿವೆ.

Advertisement

ಅಂದಾಜು ಸುಮಾರು 2 ಲಕ್ಷ ರೂ. ಗೂ ಮಿಕ್ಕಿ ನಷ್ಟ ಸಂಭವಿಸಿರಬಹುದು ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಯಡಾಡಿ – ಮತ್ಯಾಡಿ ಗ್ರಾಮ ಲೆಕ್ಕಾಧಿಕಾರಿ ಆನಂದ, ಕುಂದಾಪುರ ತೋಟಗಾರಿಕಾ ಇಲಾಖಾ ಸಿಬಂದಿ ಮಧುಕರ, ಸ್ಥಳೀಯ ಜನಪ್ರತಿನಿಧಿಗಳಾದ ಬಿ. ಅರುಣ ಕುಮಾರ ಹೆಗ್ಡೆ, ಸಿ. ಜಗನ್ನಾಥ ಶೆಟ್ಟಿ ಚಿಟ್ಟೆಬೈಲು, ನರಾಡಿ ಬಾಲಕೃಷ್ಣ ಹೆಗ್ಡೆ ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸಂರಕ್ಷಿತ ಪ್ರದೇಶವಾಗಿ ಘೋಷಣೆ

ಬೆಟ್ಟ, ಗುಡ್ಡ, ಕೆರೆ ಕೊತ್ತಲು ಸಂರಕ್ಷಣೆ ನಿಯಮದ ಪ್ರಕಾರ ಚಿಲ್ಲರೆಗುಡ್ಡೆವನ್ನು ಕೂಡ ಸಂರಕ್ಷಿತ ಪ್ರದೇಶ ಎಂದು ಘೋಷಿಸಿದ್ದು, ಇಲ್ಲಿ ಮಣ್ಣು ತೆಗೆಯುವುದಾಗಲೀ ಇನ್ನಿತರ ಚಟುವಟಿಕೆ ಮಾಡಕೂಡದು. ಇನ್ನಷ್ಟು ಕುಸಿದಲ್ಲಿ ಇಲ್ಲಿನ ನಿವಾಸಿಗಳನ್ನು ಬೇರೆಡೆ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗುವುದು. ‘ಅಪಾಯಕಾರಿ ಸ್ಥಳ’ ಎಂದು ಪಂಚಾಯತ್‌ಗೆ ನಾಮಫಲಕ ಹಾಕಲು ತಿಳಿಸಲಾಗಿದೆ.
– ಡಾ| ಎಸ್‌. ಮಧುಕೇಶ್ವರ್‌, ಸಹಾಯಕ ಆಯುಕ್ತ, ಕುಂದಾಪುರ ಉಪ ವಿಭಾಗ

ಕುಸಿತಕ್ಕೆ ಕಾರಣವೇನು?

ಕೃಷಿ ಹೆಸರಿನಲ್ಲಿ ಜಾಗ ಮಂಜೂರು ಮಾಡಿಕೊಂಡು, ಯಾವುದೇ ಪೂರ್ವ ಯೋಜನೆಯಿಲ್ಲದೆ ಮಣ್ಣು ತೆಗೆದಿರುವುದೇ ಗುಡ್ಡ ಕುಸಿತಕ್ಕೆ ಕಾರಣ. ಮಳೆ ಬರುತ್ತಿರುವುದರಿಂದ ಮಣ್ಣು ಒದ್ದೆಯಾಗಿರುವುದರಿಂದ ಗುಡ್ಡ ಮುಟ್ಟಲು ಹೋದರೆ ಅಪಾಯವೇ ಹೆಚ್ಚು. ಗುಡ್ಡ ಕುಸಿಯದಂತೆ ಏನು ಮಾಡಬಹುದು ಎಂದು ಚರ್ಚಿಸಿ ಕ್ರಮ ತೆಗೆದುಕೊಳ್ಳಲಾಗುತ್ತದೆ. ಕೃಷಿಗೆಂದು ಜಾಗ ಮಂಜೂರು ಮಾಡಿಕೊಂಡು ಮಣ್ಣು ಮಾರಾಟದ ಮೂಲಕ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಜಾಗ ಮಂಜೂರು ಮಾಡಿಕೊಂಡವರ ಹಕ್ಕು ರದ್ದು ಮಾಡಲಾಗುತ್ತದೆ ಎಂದು ಎಸಿ ತಿಳಿಸಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next