ಕುಂದಾಪುರ: ಇಲ್ಲಿನ ಪುರಸಭೆಯ ನೀರು ಪೂರೈಕೆ ಸಲುವಾಗಿ ಅಳವಡಿಸಲಾಗುತ್ತಿದ್ದ ಕಾಮಗಾರಿ ಹಂತದ ಕಬ್ಬಿಣದ ಪೈಪ್ (ಕಬ್ಬಿಣ ಮಿಶ್ರಿತ) ಒತ್ತಡದಿಂದ ಒಡೆದು, ಚಲಿಸುತ್ತಿದ್ದ ಕಾರಿಗೆ ಬಡಿದ ಪರಿಣಾಮ ಕಾರು ಜಖಂಗೊಂಡ ಘಟನೆ ಬುಧವಾರ ಚಿಕ್ಕನ್‌ಸಾಲ್ ರಸ್ತೆಯ ಸಂಗಮ್ ಜಂಕ್ಷನ್ ಬಳಿ ಸಂಭವಿಸಿದೆ.
ಕುಂದಾಪುರದಿಂದ ಉಪ್ಪಿನಕುದ್ರುವಿಗೆ ಚಿಕ್ಕನ್‌ಸಾಲ್ ಮಾರ್ಗವಾಗಿ ತೆರಳುತ್ತಿದ್ದ ಕಾರಿಗೆ ರಸ್ತೆ ಬದಿ ಅಳವಡಿಸಲಾಗಿದ್ದ ನೀರಿನ ಕಬ್ಬಿಣದ ಪೈಪ್ ಏಕಾಏಕಿ ನೀರಿನ ಒತ್ತಡ ಹೆಚ್ಚಾಗಿ ಒಮ್ಮಿಂದೊಮ್ಮೆಲೆ ಒಡೆದು, ಬಡಿದಿದೆ. ಪರಿಣಾಮ ಭಾರೀ ಶಬ್ದ ಕೇಳಿ ಬಂದಿದ್ದು, ಕಾರು ನಜ್ಜು ಗುಜ್ಜಾಗಿದ್ದಲ್ಲದೆ, ಗ್ಲಾಸ್ ಒಡೆದು ಹೋಗಿದೆ.
ಅದೃಷ್ಟವಶಾತ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಪ್ರಾಣಾ ಪಾಯದಿಂದ ಪಾರಾಗಿದ್ದಾರೆ. ಇದಲ್ಲದೆ ಇದರ ಹಿಂದೆ ಬೈಕ್‌ವೊಂದು ಬರುತ್ತಿದ್ದು, ಸವಾರ ಬ್ರೇಕ್ ಹಾಕಿ ನಿಲ್ಲಿಸಿದ ಪರಿಣಾಮ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಗುತ್ತಿಗೆದಾರರ ವಿರುದ್ಧ ದೂರು
ಇನ್ನು ಘಟನಾ ಸ್ಥಳಕ್ಕೆ ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಭೇಟಿ ನೀಡಿದ್ದು,’ ಉದಯವಾಣಿ’ ಜತೆ ಮಾತನಾಡಿದ ಅವರು, ಇದು ನಿತ್ಯದ ನೀರು ಪೂರೈಕೆ ಮಾಡುವ ಪೈಪ್ ಅಲ್ಲ. ಈಗ ಕಾಮಗಾರಿ ಹಂತದಲ್ಲಿದೆ. ಇನ್ನೂ ಪೂರ್ಣಗೊಂಡಿಲ್ಲ. ಆದರೂ ಸರಿಯಾದ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳದೆ ಕಾಮಗಾರಿ ನಡೆಸಿ, ಕಾರಿಗೆ ಹಾನಿಯಾಗಿರುವುದರಿಂದ ಕಾಮಗಾರಿ ವಹಿಸಿಕೊಂಡಿರುವ ಗುತ್ತಿಗೆದಾರರ ವಿರುದ್ಧವೇ ದೂರು ದಾಖಲಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಘಟನಾ ಸ್ಥಳಕ್ಕೆ ಸಂಚಾರಿ ಎಸ್‌ಐ ಪುಷ್ಪಾ, ಎಎಸ್‌ಐ ಸುಧಾ ಪ್ರಭು, ಪೊಲೀಸ್ ಸಿಬಂದಿ ಭೇಟಿ ನೀಡಿ, ಪರಿಶೀಲಿಸಿದರು.