ಹುಣಸೂರು: ತಾಲೂಕಿನಲ್ಲಿ ಮಂಗಳವಾರ ಬಿರುಗಾಳಿ ಸಹಿತ ಮಳೆಗೆ 19 ಗ್ರಾಮಗಳಲ್ಲಿ ಈವರೆಗೆ 405 ಮನೆಗಳಿಗೆ ಹಾನಿಯಾಗಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು 67 ಎಕರೆಯಲ್ಲಿ ಬೆಳೆ ಹಾನಿಯಾಗಿ ಒಂದು ಕೋಟಿ ರೂ.ಗೂ ಹೆಚ್ಚು ನಷ್ಟ ಉಂಟಾಗಿರ ಬಹುದೆಂದು ಅಂದಾಜಿಸಲಾಗಿದೆ ಎಂದು ತಹಶೀಲ್ದಾರ್ ಬಸವರಾಜು ತಿಳಿಸಿದರು.
ಸುಮಾರು 67 ಎಕರೆಗೂ ಹೆಚ್ಚು ಪ್ರದೇಶದ ಬೆಳೆ ಹಾನಿಯಲ್ಲಿ ಬಾಳೆ ಬೆಳೆಗೆ ಹೆಚ್ಚು ಹಾನಿಯಾಗಿದೆ. ತೆಂಗು, ಅಡಕೆ, ಮಾವು, ಸಪೋಟ ಅಲ್ಲಲ್ಲಿ ಜೋಳ, ತಂಬಾಕು ಸಸಿಮಡಿ ಸೇರಿದಂತೆ ಇತರೆ ಬೆಳೆಗಳು ನಷ್ಟ ಉಂಟಾಗಿದೆ. ಹಾನಿ ಪ್ರಮಾಣ, ನಷ್ಟದ ಅಂದಾಜು ತಯಾರಿಸಲಾಗುತ್ತಿದ್ದು, ಮತ್ತಷ್ಟು ಹಾನಿ ಬಗ್ಗೆ ವರದಿ ಬರುತ್ತಲೇ ಇದೆ ಎಂದರು.
8 ತಂಡ ರಚನೆ: ತ್ವರಿತಗತಿಯಲ್ಲಿ ಮಳೆ ಹಾನಿ ನಿಖರ ಪ್ರಮಾಣ ತಿಳಿಯುವ ಸಲುವಾಗಿ ನುರಿತ ತಲಾ ಇಬ್ಬರಂತೆ ಗ್ರಾಮಲೆಕ್ಕಿಗರ 8 ತಂಡ ರಚಿಸಲಾಗಿದ್ದು, ಹಾನಿ ಪ್ರದೇಶಕ್ಕೆ ತೆರಳಿ ನಿಖರ ವರದಿ ನೀಡಲಿದ್ದಾರೆ. ಕೃಷಿ ಮತ್ತು ತೋಟಕಾರಿಕೆ ಇಲಾಖೆಯಿಂದಲೂ ಹಾನಿ ಬಗ್ಗೆ ವರದಿ ಆಯಾ ಇಲಾಖೆಗಳಿಂದ ಬರಬೇಕಿದೆ ಎಂದು ಹೇಳಿದರು.
90 ಲಕ್ಷರೂ., ಹಾನಿ: ಪ್ರಕೃತಿ ವಿಕೋಪ ನಿಧಿಯಡಿ 25 ಲಕ್ಷ ರೂ.ಗಳಿದ್ದು, ಜಿಲ್ಲಾಕಾರಿಗಳ ಕಚೇರಿಯಿಂದ 53 ಲಕ್ಷರೂ. ಬರಲಿದೆ. ಉಳಿದಂತೆ ಪರಿಹಾರಕ್ಕಾಗಿ 90 ಲಕ್ಷರೂ.ಗಳ ಬೇಡಿಕೆ ಸಲ್ಲಿಸಲಾಗಿದೆ. ಮನೆ ಹಾನಿಗೊಳಗಾದವರಿಗೆ ತಾಲೂಕಿನ ಸಾಮಿಲ್, ಚಿನ್ನಬೆಳ್ಳಿ ವ್ಯಾಪಾರಸ್ಥರು ಸೇರಿದಂತೆ ವಿವಿಧ ವಾಣಿಜ್ಯೋದ್ಯಮಿಗಳ ಸಭೆ ನಡೆಸಿ ಸಂತ್ರಸ್ಥರಿಗೆ ಸಿಮೆಂಟ್, ಹೆಂಚು, ಚಾವಣಿಯ ಮರಗಳು, ಕಲ್ನಾರ್ ಶೀಟ್ ನೀಡಿ ಸಹಕರಿಸುವಂತೆ ಕೋರ ಲಾಗುವುದೆಂದು ತಿಳಿಸಿದರು.
Advertisement
ಹಾನಿ ಬಗ್ಗೆ ಪ್ರಥಮ ಮಾಹಿತಿ ಪಡೆದು ಮಾಹಿತಿ ನೀಡಿರುವ ತಹಶೀಲ್ದಾರ್ ಅವರು ಮನೆಗಳಿಗೆ ಹಾನಿಯಾಗಿರುವ ಪೈಕಿ ಹನಗೋಡು ಹೋಬಳಿ ಯಲ್ಲಿ ಅತಿ ಹೆಚ್ಚು ಅಂದರೆ 395, ಗಾವಡಗೆರೆಯಲ್ಲಿ 10 ಮನೆಗಳ ಚಾವಣಿ ಸೇರಿದಂತೆ ಹೆಂಚು, ಕಲ್ನಾರ್‌ಶೀಟ್‌ಗಳು ಹಾನಿಗೊಳಗಾಗಿವೆ. ಹುಣಸೇಗಾಲ ವೊಂದರಲ್ಲೇ 147 (ತೀವ್ರ ಹಾನಿ-25), ಕಲ್ಲಹಳ್ಳಿ ಯಲ್ಲಿ 94, (ತೀವ್ರ ಹಾನಿ-7), ಆಡಿಗನಹಳ್ಳಿಯಲ್ಲಿ 75 (ತೀವ್ರ ಹಾನಿ-9) ಹಾನಿಯಾಗಿದೆ.
Related Articles
Advertisement
ಗಾವಡಗೆರೆ ಹೋಬಳಿಯಲ್ಲಿ ಹಾನಿ: ಬಿರುಗಾಳಿ ಮಳೆಗೆ ಮೋದೂರು ಎಂ.ಕೊಪ್ಪಲಿನಲ್ಲಿ 7, ತಿಪ್ಪಲಾ ಪುರದಲ್ಲಿ 2, ಚಿಟ್ಟಕ್ಯಾತನಹಳ್ಳಿಯಲ್ಲಿ 1 ಮನೆಗಳಿಗೆ ಹಾಗೂ ಅಲ್ಲಲ್ಲಿ 10ಕ್ಕೂ ಹೆಚ್ಚು ತಂಬಾಕು ಬ್ಯಾರನ್‌ಗಳ ಚಾವಣಿ ಹೆಂಚುಗಳಿಗೂ ಹಾನಿಯಾಗಿದೆ. ಜಮೀನಿನಲ್ಲಿದ್ದ ಹತ್ತಾರು ಮರಗಳು ನೆಲಕ್ಕುರುಳಿವೆ.
ಬಾಳೆ, ಪರಂಗಿ ಬೆಳೆ ನಷ್ಟ: ಮೋದೂರಿನ ಮಾದೇಗೌಡರಿಗೆ ಸೇರಿದ 2 ಎಕರೆ, ಬಾಳೆ ಬೆಳೆ, ತಿಪ್ಲಾಪುರದ ಮರಿಸ್ವಾಮಿಗೌಡರಿಗೆ ಸೇರಿದ ಪಪ್ಪಾಯಿ, ಬಾಳೆಗಿಡ, ರಾಮೇನಹಳ್ಳಿಯಲ್ಲಿಯಲ್ಲೂ ಹಲವರ ಬಾಳೆ ಬೆಳೆ ಬಿರುಗಾಳಿಗೆ ಬಿದ್ದು ಹೋಗಿದೆ. ಹಾನಿಗೀಡಾದ ಪ್ರದೇಶಗಳಿಗೆ ಉಪ ತಹಶೀಲ್ದಾರ್ ಲೋಕೇಶ್, ಗ್ರಾಮ ಲೆಕ್ಕಾಧಿಕಾರಿ ನಾಗರಾಜ್ ಭೇಟಿ ನೀಡಿ, ಹಾನಿ ಬಗ್ಗೆ ವರದಿ ಮಾಡಿದ್ದಾರೆ.
ಇಟ್ಟಿಗೆ ಕಾರ್ಖಾನೆಗೆ ಹಾನಿ: ಹುಣಸೂರು – ಮಡಿಕೇರಿ ಹೆದ್ದಾರಿ ಕಲ್ಬೆಟ್ಟ ಜಂಕ್ಷನ್ ಬಳಿಯ ದಿನೇಶ್‌ರಿಗೆ ಸೇರಿದ ಹೊರ ವಲಯದಲ್ಲಿನ ಶ್ರೀ ಸಾಯಿ ಬ್ರಿಕ್ಸ್ ಇಟ್ಟಿಗೆ ಫ್ಯಾಕ್ಟರಿ ಚಾವಣಿಗೆ ಹಾಸಿದ್ದ ತಗಡಿನ ಶೀಟ್‌ಗಳು ಬಿರುಸಿನ ಗಾಳಿ-ಮಳೆಗೆ ಹಾರಿ ಹೋಗಿ ಅನತಿ ದೂರದಲ್ಲಿ ಬಿದ್ದಿವೆ. ಗಾಳಿ-ಮಳೆ ವೇಳೆ ಕಾರ್ಮಿಕರು ಒಳಗೆ ಕೆಲಸ ನಿರ್ವಹಿಸುತ್ತಿದ್ದರು. ತಕ್ಷಣವೇ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಬಾರಿ ಅನಾಹುತ ತಪ್ಪಿದೆ.
ಲಕ್ಷ ಇಟ್ಟಿಗೆಗೆ ಹಾನಿ: ಜಂಕ್‌ಶೀಟ್ ಹಾರಿ ಹೋದ್ದರಿಂದ ಕೊಯ್ದು ಒಣಗಿ ಹಾಕಿದ್ದ ಒಂದು ಲಕ್ಷ ಇಟ್ಟಿಗೆ ನಾಶವಾಗಿದೆ. ಘಟನೆಯಿಂದ ಒಟ್ಟಾರೆ ಐದು ಲಕ್ಷರೂ. ನಷ್ಟು ನಷ್ಟ ಸಂಭವಿಸಿದೆ.
ಹಾನಿ ಪ್ರದೇಶಗಳಿಗೆ ಸಂಸದ ಭೇಟಿ: ಇತ್ತೀಚೆಗೆ ಹನಗೋಡು ಹೋಬಳಿಯ ಹಾನಿಗೀಡಾದ ಹುಣಸೆಗಾಲ ಹಾಗೂ ಕಲ್ಲಹಳ್ಳಿ ಗ್ರಾಮಗಳಿಗೆ ಸಂಸದ ಪ್ರತಾಪ ಸಿಂಹ ಭೇಟಿ ನೀಡಿ ಪರಿಶೀಲಿಸಿ ಹಾನಿಗೊಳಗಾದ ಕುಟುಂಬಗಳೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದರು.
ಇವರೊಂದಿಗೆ ತಾಲೂಕು ಬಿಜೆಪಿ ಅಧ್ಯಕ್ಷ ಯೋಗಾನಂದ ಕುಮಾರ್, ಮಾಜಿ ಅಧ್ಯಕ್ಷರಾದ ಹನಗೋಡು ಮಂಜುನಾಥ್, ರಮೇಶ್‌ಕುಮಾರ್, ನಗರ ಅಧ್ಯಕ್ಷ ರಾಜೇಂದ್ರ, ತಂಬಾಕು ಮಂಡಳಿ ಸದಸ್ಯ ಕಿರಣ್ ಕುಮಾರ್ ಮತ್ತಿತರರಿದ್ದರು.