ಸುಳ್ಯ : ಶನಿವಾರ ತಡರಾತ್ರಿ ಬೀಸಿದ ಗಾಳಿ ಮಳೆಯ ಅಬ್ಬರದ ಪರಿಣಾಮ ಸುಳ್ಯ 33 ಕೆವಿ ಸಬ್ ಸ್ಟೇಷನ್ ವ್ಯಾಪ್ತಿಯಿಂದ ಹೊರಡುವ ವಿದ್ಯುತ್ ಪೂರೈಕೆ ಮಾರ್ಗಗಳು ಪೂರ್ಣ ಪ್ರಮಾಣದಲ್ಲಿ ಸ್ಥಗಿತಗೊಂಡು ಹತ್ತಾರು ಗ್ರಾಮಗಳು ಕತ್ತಲಲ್ಲೆ ಕಾಲ ಕಳೆದವು. ಬರೋಬ್ಬರಿ 24 ತಾಸು ಮಿಕ್ಕಿ ವಿದ್ಯುತ್ ಇಲ್ಲದೆ, ದಿನವಿಡೀ ಪರದಾಡುವ ಪರಿಸ್ಥಿತಿ ಉಂಟಾಯಿತು.
ಸುಳ್ಯ ನಗರ, ಜಾಲ್ಸೂರು, ಕನಕಮಜಲು, ಮಂಡೆಕೋಲು, ಮಡಪ್ಪಾಡಿ, ಮರ್ಕಂಜ, ಗುತ್ತಿಗಾರು, ದುಗಲಡ್ಕ, ದೇವಚಳ್ಳ, ನೆಲ್ಲೂರು ಕೆಮ್ರಾಜೆ, ಅರಂತೋಡು ಮೊದಲಾದ ಗ್ರಾಮಗಳಲ್ಲಿ ಶನಿವಾರ ತಡರಾತ್ರಿಯಿಂದ ರವಿವಾರ ದಿನಪೂರ್ತಿ ವಿದ್ಯುತ್ ಇರಲಿಲ್ಲ. ಹಲವು ಭಾಗದಲ್ಲಿ ಗಾಳಿ ಮಳೆಯಿಂದ ಉಂಟಾದ ತೊಂದರೆಯಿಂದ ಯಾವುದೇ ಫೀಡರ್‌ಗಳು ಕಾರ್ಯ ನಿರ್ವಹಿಸಲಿಲ್ಲ.
ಸುಳ್ಯ 33 ಕೆವಿ ಸಬ್‌ಸ್ಟೇಷನ್ ವ್ಯಾಪ್ತಿಯಲ್ಲಿ ನೂರಾರು ವಿದ್ಯುತ್ ಕಂಬ, ಟ್ರಾನ್ಸ್‌ಫಾರ್ಮರ್‌ಗಳಿಗೆ ಹಾನಿ ಉಂಟಾಗಿರುವುದು ವಿದ್ಯುತ್ ವ್ಯತಯಕ್ಕೆ ಕಾರಣವಾಗಿದೆ. ಹಲವೆಡೆ ಮರಗಳ ವಿದ್ಯುತ್ ಕಂಬ ಹಾಗೂ ಲೈನ್ ಮೇಲೆ ಬಿದ್ದಿದ್ದು, ಅದರ ತೆರವು ಕಾರ್ಯ ಆದ ಬಳಿಕ, ಹೊಸ ಕಂಬ ಅಳವಡಿಸಿ, ತಂತಿ ಎಳೆದು ವಿದ್ಯುತ್ ಸಂಪರ್ಕ ಕಲ್ಪಿಸಬೇಕಿದೆ.
33 ಕೆವಿ ಸಬ್‌ಸ್ಟೇಷನ್ ಕಚೇರಿ ಬಳಿಯೇ ವಿದ್ಯುತ್ ಕಂಬ ಧರೆಗುರಳಿದೆ. ನಗರದ ನಾನಾ ಭಾಗಗಳಲ್ಲಿ ಸಾಲು-ಸಾಲು ಕಂಬಗಳು ಉರುಳಿವೆ. ಮೆಸ್ಕಾಂ ಸಿಬಂದಿ ಕಂಬ ಜೋಡಣೆ ಕಾರ್ಯದಲ್ಲಿ ನಿರತರಾಗಿದ್ದು, ಪೂರ್ಣ ಪ್ರಮಾಣದಲ್ಲಿ ಅಳವಡಿಕೆಗೆ ಸೋಮವಾರ ತನಕವು ಕಾಯಬೇಕಿದೆ. ಕಾಡು ಆವರಿತ ಪ್ರದೇಶಗಳಲ್ಲೂ ಕಂಬಗಳಿಗೆ ಹಾನಿ ಉಂಟಾಗಿರುವುದು ತತ್‌ಕ್ಷಣ ಜೋಡಣೆಗೆ ಸವಾಲೆನಿಸಿದೆ.
ರವಿವಾರ ಪೇಟೆಯಲ್ಲಿ ವ್ಯವಹಾರ ನೀರಸವಾಗಿತ್ತು. ವಿದ್ಯುತ್ ಇಲ್ಲದ ಪರಿಣಾಮ ಸಣ್ಣ ಪುಟ್ಟ ಉದ್ಯಮದಾರರು, ಹೋಟೆಲ್, ಬೇಕರಿ, ಜ್ಯೂಸ್ ಸೆಂಟರ್ ಮೊದಲಾದ ಅಂಗಡಿ ಮುಂಗಟ್ಟುಗಳಿಗೆ ತೊಂದರೆ ಉಂಟಾಯಿತು. ಗ್ರಾಮಾಂತರ ಪ್ರದೇಶದಲ್ಲಿಯೂ ರಾತ್ರಿ ವಿದ್ಯುತ್ ಇಲ್ಲದೆ ಜನರು ಪರದಾಡಿದರು. ಕೊಳವೆಬಾವಿ, ನಳ್ಳಿ ನೀರು ಆಶ್ರಯ ಹೊಂದಿರುವ ಮಂದಿಯೂ ವಿದ್ಯುತ್ ಅಭಾವದಿಂದ ಸಮಸ್ಯೆಗೊಳಗಾದರು.