Advertisement

ಪ್ರವಾಹದಿಂದ ಮನೆ ಹಾನಿ: ಕರಾವಳಿಗೆ 20 ಕೋ.ರೂ. ನೆರವು

12:57 AM Sep 24, 2019 | mahesh |

ಮಂಗಳೂರು: ಪ್ರವಾಹದಿಂದ ಮನೆ ಕಳೆದುಕೊಂಡವರಿಗಾಗಿ ದ.ಕ. ಜಿಲ್ಲೆಗೆ 15 ಕೋ.ರೂ. ಮತ್ತು ಉಡುಪಿ ಜಿಲ್ಲೆಗೆ 5 ಕೋ.ರೂ. ಸೇರಿದಂತೆ ಒಟ್ಟು 20 ಕೋ.ರೂ.ಗಳನ್ನು ರಾಜ್ಯ ಸರಕಾರ ಬಿಡುಗಡೆ ಮಾಡಿದೆ.

Advertisement

ಜಿಲ್ಲಾಡಳಿತದ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 944 ಮನೆಗಳು ಮತ್ತು ಉಡುಪಿಯಲ್ಲಿ 675 ಮನೆಗಳು ಪ್ರವಾಹ ಕಾರಣದಿಂದ ಸಂಪೂರ್ಣ/ಭಾಗಶಃ ಮತ್ತು ಅಲ್ಪಸ್ವಲ್ಪ ಹಾನಿಗೊಳಗಾಗಿವೆ.

ಸಂಪೂರ್ಣ ಮನೆ ಹಾನಿಗೆ (ಶೇ.75 ಕ್ಕಿಂತ ಅಧಿಕ ಪ್ರಮಾಣ) ಒಟ್ಟು 5 ಲಕ್ಷ ರೂ. ನಾಲ್ಕು ಕಂತುಗಳಲ್ಲಿ ದೊರೆಯ ಲಿದೆ. ಆರಂಭಿಕ ಹಂತದಲ್ಲಿ 1 ಲಕ್ಷ ರೂ., ತಳಪಾಯಕ್ಕೆ 1.50 ಲಕ್ಷ ರೂ., ಛಾವಣಿ ಹಂತದಲ್ಲಿ 1.50 ಲಕ್ಷ ರೂ. ಮತ್ತು ಪೂರ್ಣವಾಗುವಾಗ 1 ಲಕ್ಷ ರೂ. ದೊರೆಯಲಿದೆ. ಮನೆ ನಿರ್ಮಾಣವಾಗುವವರೆಗೆ ಮೊದಲ ಕಂತಿನ ಬಾಡಿಗೆಯಾಗಿ 5 ಸಾವಿರ ರೂ.ಗಳನ್ನು 10 ತಿಂಗಳವರೆಗೆ ಅಥವಾ ತಾತ್ಕಾಲಿಕ ಶೆಡ್‌ ನಿರ್ಮಾಣಕ್ಕೆ 50 ಸಾವಿರ ರೂ.ನೀಡಲಾಗುತ್ತದೆ.

ಭಾಗಶಃ ಹಾನಿಗೆ ಆರಂಭಿಕ ಹಂತದಲ್ಲಿ 25 ಸಾವಿರ ಮತ್ತು ಮನೆ ಪೂರ್ಣ ಗೊಳ್ಳುವಾಗ 75 ಸಾವಿರ ಸೇರಿ 2 ಕಂತುಗಳಲ್ಲಿ 1 ಲಕ್ಷ ರೂ. ದೊರೆಯ ಲಿದೆ. ಅಲ್ಪಸ್ವಲ್ಪ ಹಾನಿಗೆ 25 ಸಾವಿರ ರೂ. ನೀಡಲಾಗುತ್ತದೆ ಎಂದು ದ.ಕ. ಜಿ.ಪಂ. ಸಿಇಒ ಆರ್‌. ಸೆಲ್ವಮಣಿ “ಉದಯವಾಣಿ’ಗೆ ತಿಳಿಸಿದ್ದಾರೆ.

ವಸತಿ ನಿಗಮ ಮೂಲಕ ಬಿಡುಗಡೆ
ಜಿಲ್ಲಾಧಿಕಾರಿಗಳು ಬೇಡಿಕೆಗೆ ಅನುಗುಣವಾಗಿ ರಾಜೀವ್‌ ಗಾಂಧಿ ವಸತಿ ನಿಗಮಕ್ಕೆ ಹಣ ಬಿಡುಗಡೆ ಮಾಡಲಿದ್ದಾರೆ. ಹಾನಿಯಾದ ಮನೆಗಳ ಅರ್ಹ ಜಿಪಿಎಸ್‌ ಛಾಯಾ ಚಿತ್ರಗಳ ಆಧಾರದ ಮೇಲೆ ನಿಗಮದಿಂದ ಸಂತ್ರಸ್ತರ ಬ್ಯಾಂಕ್‌ ಖಾತೆಗೆ ನೇರವಾಗಿ ಬಿಡುಗಡೆ ಮಾಡಲಾಗುತ್ತದೆ. ಸಂತ್ರಸ್ತರ ಅರ್ಜಿಗಳನ್ನು ವಸತಿ ನಿಗಮದ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಲಾಗಿದೆ. ಇದಕ್ಕೆ ಡಿಸಿ ಅನುಮೋದನೆ ಮತ್ತು ಫಲಾನುಭವಿಗಳ ಜಿಪಿಎಸ್‌ ಫೋಟೋ ತೆಗೆದು ಆಡಿಟ್‌ಗಾಗಿ ತಹಶೀಲ್ದಾರ್‌ಗೆ ಕಳುಹಿಸುವ ಪ್ರಕ್ರಿಯೆ ಕೊನೆಯ ಹಂತದಲ್ಲಿದೆ. ಅಲ್ಲಿ ಒಪ್ಪಿಗೆ ದೊರೆತ ತತ್‌ಕ್ಷಣ ಫಲಾನುಭವಿಗಳಿಗೆ ನಿಗಮದಿಂದ ಆದೇಶ ಪತ್ರ ದೊರೆಯಲಿದೆ. ಕೆಲವರಿಗೆ ಈಗಾಗಲೇ ಸಿಕ್ಕಿದೆ ಎಂದು ಮಂಗಳೂರು ತಹಶೀಲ್ದಾರ್‌ ಗುರುಪ್ರಸಾದ್‌ ತಿಳಿಸಿದ್ದಾರೆ.

Advertisement

10 ತಿಂಗಳೊಳಗೆ ಮನೆ ಪೂರ್ಣ; ಸೂಚನೆ
ಫಲಾನುಭವಿಯು ಸ್ವತಃ ಮನೆ ಪುನರ್‌ ನಿರ್ಮಾಣ/ದುರಸ್ತಿ ಮಾಡಬೇಕು. ಕನಿಷ್ಠ 350 ಚದರ ಅಡಿಗೆ ಕಡಿಮೆ ಇಲ್ಲದಂತೆ, ತಿಂಗಳೊಳಗೆ ತಳಪಾಯ ಆರಂಭಿಸಿ ಗರಿಷ್ಠ 10 ತಿಂಗಳೊಳಗೆ ಪೂರ್ಣಗೊಳಿಸಬೇಕು. ಭಾಗಶಃ/ಅಲ್ಪಸ್ವಲ್ಪ ಹಾನಿಯಾದ ಮನೆಯ ದುರಸ್ತಿಯನ್ನು ತಿಂಗಳೊಳಗೆ ಪೂರ್ಣಗೊಳಿಸಬೇಕು. ನಿಗದಿತ ಸಮಯದಲ್ಲಿ ಇದು ಸಾಧ್ಯವಾಗದಿದ್ದರೆ ಅನುದಾನ ವಾಪಸಾಗುತ್ತದೆ. ಡಿಆರ್‌ಐ ಬಡ್ಡಿ ದರದಲ್ಲಿ ಸ್ಥಳೀಯ ಬ್ಯಾಂಕ್‌ಗಳಿಂದ ಸಾಲ ಪಡೆಯಲು ಅವಕಾಶವಿದ್ದು, ಗ್ರಾ.ಪಂ/ಸ್ಥಳೀಯ ಸಂಸ್ಥೆಯನ್ನು ಸಂಪರ್ಕಿಸಬಹುದು ಎಂದು ನಿಗಮ ತಿಳಿಸಿದೆ.

13 ಜಿಲ್ಲೆಗಳಿಗೆ 1 ಸಾವಿರ ಕೋ.ರೂ. ಬಿಡುಗಡೆ
ನೆರೆಯಿಂದ ತೀವ್ರ ಹಾನಿಯಾದ ಮನೆಗಳ ನಿರ್ಮಾಣಕ್ಕಾಗಿ ರಾಜ್ಯದ 13 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಖಾತೆಗೆ 1 ಸಾವಿರ ಕೋ.ರೂ.ಗಳನ್ನು ಸರಕಾರ ಬಿಡುಗಡೆ ಮಾಡಿದೆ. ಬೆಳಗಾವಿ ಜಿಲ್ಲೆಗೆ ಅತೀ ಹೆಚ್ಚು, 500 ಕೋ.ರೂ., ಚಿಕ್ಕಮಗಳೂರಿಗೆ 25 ಕೋ.ರೂ., ಕೊಡಗಿಗೆ 25 ಕೋ.ರೂ., ಉತ್ತರ ಕನ್ನಡಕ್ಕೆ 30 ಕೋ.ರೂ. ಬಿಡುಗಡೆ ಆಗಿದೆ.

ದ.ಕ: 15 ಕೋ.ರೂ. ಬಿಡುಗಡೆ
ನೆರೆ ಹಾನಿ ಮನೆಗಳ ಪುನರ್‌ ನಿರ್ಮಾಣಕ್ಕಾಗಿ ದ.ಕ. ಜಿಲ್ಲೆಗೆ ಸರಕಾರ 15 ಕೋ.ರೂ. ಬಿಡುಗಡೆ ಮಾಡಿದೆ. ಹಾನಿಯಾದ ಮನೆಗಳ ಅರ್ಹ ಜಿಪಿಎಸ್‌ ಛಾಯಾಚಿತ್ರಗಳ ಆಧಾರದ ಮೇಲೆ ಅನುದಾನವನ್ನು ಸಂತ್ರಸ್ತರಿಗೆ ರಾಜೀವ್‌ ಗಾಂಧಿ ವಸತಿ ನಿಗಮದ ಮೂಲಕ ನೀಡಲಾಗುವುದು. – ಸಿಂದೂ ಬಿ. ರೂಪೇಶ್‌, ದ.ಕ. ಜಿಲ್ಲಾಧಿಕಾರಿ

-ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next