ಬಾಳೆಹೊನ್ನೂರು: ಸಮೀಪದ ಬನ್ನೂರು ಗ್ರಾಮದಲ್ಲಿ ಅರಣ್ಯ ಇಲಾಖೆಯ ಅವೈಜ್ಞಾನಿಕವಾಗಿ ಟ್ರೆಂಚ್ ತೆಗೆದಿರುವುದರಿಂದ ಗ್ರಾಮದ ಸುಮಾರು 30 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಅನಾಹುತವಾಗಿದೆಎಂದು ಬಿಜೆಪಿ ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ವೆನಿಲ್ಲಾ ಬಾಸ್ಕರ್ ಆರೋಪಿಸಿದ್ದಾರೆ.
ಗ್ರಾಮದ ಸರ್ವೆ ನಂ.95 ರ ಪ್ರದೇಶದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ನೀರು ನುಗ್ಗಿ ಹಾನಿಗೊಳಗಾದ ಮನೆಗಳಿಗೆ ಭೇಟಿ ನೀಡಿಪರಿಶೀಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಬನ್ನೂರು ಸರ್ವೆ ನಂ.95ರ ಪ್ರದೇಶದಲ್ಲಿ ಸುಮಾರು 200ಕ್ಕೂ ಹೆಚ್ಚು ಕೂಲಿಕಾರ್ಮಿಕರ ಕುಟುಂಬಗಳು ವಾಸಿಸುತ್ತಿವೆ. ಇಲ್ಲಿ ವೈಜ್ಞಾನಿಕವಾಗಿ ಟ್ರೆಂಚ್ ನಿರ್ಮಾಣಮಾಡಬಹುದಾಗಿದ್ದರೂ ದುರುದ್ದೇಶದಿಂದ ಇಳಿಜಾರು ಪ್ರದೇಶದಲ್ಲಿ ಚರಂಡಿ ತೆಗೆದಿದ್ದು ತಡರಾತ್ರಿ ಸುರಿದ ಭಾರಿ ಮಳೆಯಿಂದ 30ಕ್ಕೂ ಹೆಚ್ಚು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದೆ.
ನೀರು ನುಗ್ಗಿದ್ದರಿಂದ ಮನೆಯಲ್ಲಿದ್ದ ಭತ್ತ ಹಾಗೂ ಇತರೆ ದವಸ ಧಾನ್ಯಗಳು ನೀರು ಪಾಲಾಗಿವೆ.ಗೃಹೋಪಯೋಗಿ ವಸ್ತುಗಳು ನಾಶವಾಗಿದೆ. ರಾತ್ರಿಯಿಡೀ ನಿವಾಸಿಗಳು ಜಾಗರಣೆ ಮಾಡಿದ್ದಾರೆ ಎಂದರು.
ಈ ಬಗ್ಗೆ ಅರಣ್ಯಾಧಿಕಾರಿಗಳು, ಡಿ.ಆರ್. ಎಫ್.ಒ ಅವರಿಗೆ ದೂರವಾಣಿ ಕರೆ ಮಾಡಿದರೆ ಸ್ವೀಕರಿಸುತ್ತಿಲ್ಲ. ನಂತರ ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್. ಜೀವರಾಜ್ ರವರಿಗೆ ದೂರವಾಣಿ ಮೂಲಕ ವಿಷಯ ತಿಳಿಸಲಾಗಿದೆ. ನಂತರ ಅವರು ಕೊಪ್ಪ ಡಿ.ಎಫ್.ಒ ರವರಿಗೆ ದೂರವಾಣಿಯಲ್ಲಿ ಪರಿಸ್ಥಿತಿ ತಿಳಿಸಿದ್ದಾರೆ. ಇಷ್ಟೆಲ್ಲಅನಾಹುತವಾಗಿದ್ದರೂ ಮಧ್ಯಾಹ್ನದವರೆಗೆ ಯಾವ ಅಧಿಕಾರಿಗಳೂ ಸ್ಥಳಕ್ಕೆ ಬಂದಿಲ್ಲ ಎಂದು ಆರೋಪಿಸಿದರು.
ಬನ್ನೂರು ಗ್ರಾ.ಪಂ.ಅಧ್ಯಕ್ಷೆ ಮಧುರಾಮಾತನಾಡಿ, ಅವೈಜ್ಞಾನಿಕ ಚರಂಡಿ ಮುಚ್ಚಿ ಬದಲಿ ಚರಂಡಿ ನಿರ್ಮಿಸಬೇಕು. ಗುಡ್ಡದ ತಪ್ಪಲಿನಲ್ಲಿ ವಾಸಿಸುತ್ತಿರುವ ಕೂಲಿ ಕಾರ್ಮಿಕರ ಕುಟುಂಬಕ್ಕೆ ರಕ್ಷಣೆ ನೀಡಬೇಕೆಂದರು.
ಗ್ರಾಮಸ್ಥ ಇಬ್ರಾಹಿಂ ಮಾತನಾಡಿ, ಮನೆಯೊಳಗೆ ಕೆಸರು ಮಣ್ಣು ತುಂಬಿದ್ದು ಅಪಾರ ಹಾನಿಯಾಗಿದೆ. ಅರಣ್ಯ ಇಲಾಖೆ ನ್ಯಾಯ ಕೊಡಿಸದಿದ್ದರೆ ಗ್ರಾಮಸ್ಥರೊಂದಿಗೆ ಪ್ರತಿಭಟನೆ ನಡೆಸಲಾಗುವುದು ಎಂದರು. ಸುಬ್ರಮಣ್ಯ, ಪ್ರಶಾಂತ್, ಭಾಗ್ಯ, ಗಂಗಮ್ಮ,ಅಬ್ಬು, ಖಾಸಿಂ, ಸೇರಿದಂತೆ ಗ್ರಾಮಸ್ಥರು ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು ಈ ಸಂದರ್ಭದಲ್ಲಿ ಬನ್ನೂರು ಗ್ರಾ.ಪಂ. ಸದಸ್ಯರುಗಳಾದ ಉಮಾ, ಮಂಜುನಾಥ್, ಸುಜಿತ್ ಹಾಗೂ ಗ್ರಾಮಸ್ಥರು ಇದ್ದರು.