Advertisement

ಅರೆಹಳ್ಳ ಅಣೆಕಟ್ಟು ಕಾಮಗಾರಿ ಮುಕ್ತಾಯ ಹಂತಕ್ಕೆ : ಕೇಶ್ವಾರ

12:56 PM Jun 10, 2022 | Team Udayavani |

ಚಿಂಚೋಳಿ: ಪಟ್ಟಣದ ಹೊರ ವಲಯದಲ್ಲಿ ಜಮೀನುಗಳಿಗೆ ಅನುಕೂಲ ವಾಗಲು ಅರೆಹಳ್ಳ ನಾಲೆಗೆ ನಿರ್ಮಿಸುತ್ತಿರುವ ಸಣ್ಣ ಅಣೆಕಟ್ಟು ಕಾಮಗಾರಿ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ ಎಂದು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಶಿವಶರಣಪ್ಪ ಕೇಶ್ವಾರ ತಿಳಿಸಿದ್ದಾರೆ.

Advertisement

ಮುಲ್ಲಾಮಾರಿ ನದಿಗೆ ಜೋಡಿಸುವ ಅರೆಹಳ್ಳ ನಾಲೆಗೆ 2019-20ನೇ ಸಾಲಿನ ಡಿಎಂಎಫ್‌ ಯೋಜನೆ ಅಡಿಯಲ್ಲಿ 75.85ಲಕ್ಷ ರೂ. ಅನುದಾನದಲ್ಲಿ ನಿರ್ಮಿಸಲಾಗುತ್ತಿರುವ ಅಣೆಕಟ್ಟಿನಿಂದ ಒಳಬೇಸಾಯ ಜಮೀನು ಹೊಂದಿದ ರೈತರಿಗೆ ನೀರಾವರಿ ಪ್ರಯೋಜನವಾಗಲಿದೆ. ಅಣೆಕಟ್ಟು 44ಮೀಟರ್‌ ಉದ್ದ, 1.5ಮೀಟರ್‌ ಎತ್ತರವಿದ್ದು 1105 ಎಂ.ಎಂ. ಕ್ಯೂಬಿಕ್‌ ನೀರು ಸಂಗ್ರಹವಾಗಲಿದೆ. ಚಿಂಚೋಳಿ ಮತ್ತು ಐನೋಳಿ ಗ್ರಾಮಗಳ ಒಟ್ಟು 40 ಹೆಕ್ಟೇರ್‌ ಜಮೀನು ಪ್ರದೇಶಗಳಿಗೆ ನೀರಾವರಿ ಉಪಯೋಗವಾಗಲಿದೆ ಎಂದು ತಿಳಿಸಿದರು.

ಕಳಪೆ ಕಾಮಗಾರಿ ಆರೋಪ: ಅರೆಹಳ್ಳಕ್ಕೆ ಇನ್ನೊಂದು ಕಡೆ 95ಲಕ್ಷ ರೂ. ವೆಚ್ಚದಲ್ಲಿ ಅಣೆಕಟ್ಟು ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಒಂದೇ ಹಳ್ಳಕ್ಕೆ ಎರಡು ಕಡೆಗಳಲ್ಲಿ ಕೇವಲ 200 ಮೀಟರ್‌ ಅಂತರದಲ್ಲಿ ಒಟ್ಟು 1.70ಕೋಟಿ ರೂ. ಅನುದಾನ ಖರ್ಚು ಮಾಡಿ ಅಣೆಕಟ್ಟು ನಿರ್ಮಿಸಲಾಗಿದೆ. ಇದರ ಅಗತ್ಯವಿರಲಿಲ್ಲ. ಕಡಿಮೆ ಖರ್ಚು ಮಾಡಿ ಉಳಿದ ಹಣ ಎತ್ತಿ ಹಾಕುವ ಹುನ್ನಾರ ಇದರಲ್ಲಿದೆ ಎಂದು ಜಿಪಂ ಮಾಜಿ ಅಧ್ಯಕ್ಷ ದೀಪಕನಾಗ ಪುಣ್ಯಶೆಟ್ಟಿ ಆರೋಪಿಸಿದ್ದಾರೆ.

ಅಣೆಕಟ್ಟು ನಿರ್ಮಾಣ ಕಾಮಗಾರಿ ಯೋಜನೆಯಂತೆ ನಡೆಯುತ್ತಿಲ್ಲ. ಎರಡು ಬದಿಗಳಲ್ಲಿ ಚಿಪ್ಪು ಕಲ್ಲಿನಿಂದ ಮಾಡಿದ ಪಿಚ್ಚಿಂಗ್‌ ಕೆಲಸ ಸಂಪೂರ್ಣ ಕಳಪೆಯಾಗಿದೆ. ಅರೆಹಳ್ಳ ಮಳೆಗಾಲದಲ್ಲಿ ತುಂಬಿ ಹರಿಯುವುದರಿಂದ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುವ ಸಾಧ್ಯತೆ ಇದೆ. ಈ ಕುರಿತು ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next