Advertisement

ಡ್ಯಾಂ ಗೇಟ್ ದುರಸ್ತಿ ಶೇ. 80 ಯಶಸ್ವಿ

11:46 AM Aug 17, 2019 | Team Udayavani |

ಕೊಪ್ಪಳ: ತುಂಗಭದ್ರಾ ಜಲಾಶಯದ ಎಡದಂಡೆ ಮೇಲ್ಮಟ್ಟದ ಕಾಲುವೆ ಕಿತ್ತು ಹೋದ ಪ್ರಕರಣಕ್ಕೆ ಸಂಬಂಸಿದಂತೆ ಕಳೆದ ನಾಲ್ಕು ದಿನಗಳಿಂದ ಕಾರ್ಯಾಚರಣೆ ನಡೆಸಿದ್ದು, ಶುಕ್ರವಾರ ಸಂಜೆ ವೇಳೆ ಶೇ. 80ರಷ್ಟು ಕಾರ್ಯಾಚರಣೆ ಯಶಸ್ವಿಯಾಗಿದ್ದು, ಅಧಿಕಾರಿ ವರ್ಗ ಹಾಗೂ ಜನ ನಾಯಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

Advertisement

ತುಂಗಭದ್ರಾ ಡ್ಯಾಂಗೆ ಈ ವರ್ಷ ಭಾರಿ ಪ್ರಮಾಣದಲ್ಲಿ ಒಳ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಡ್ಯಾಂನಲ್ಲಿ ಆ. 13ರೊಳಗೆ 90 ಟಿಎಂಸಿಯಷ್ಟು ನೀರು ಸಂಗ್ರಹವಾಗಿತ್ತು. ನದಿಪಾತ್ರದಡಿ ಮಳೆ ಸುರಿದ ಹಿನ್ನೆಲೆಯಲ್ಲಿ ಒಳ ಹರಿವಿನ ಪ್ರಮಾಣವೂ 2 ಲಕ್ಷ ಕ್ಯೂಸೆಕ್‌ಗೂ ಹೆಚ್ಚಾಗಿತ್ತು. ಹಾಗಾಗಿ ನೀರಾವರಿ ಇಲಾಖೆ ಅಧಿಕಾರಿಗಳು ನೀರನ್ನು ನದಿಪಾತ್ರಗಳಿಗೆ ಹರಿ ಬಿಟ್ಟಿದ್ದರು. ಆದರೂ ಡ್ಯಾಂ ಎಡದಂಡೆ ಮೇಲ್ಮಟ್ಟದ ಕಾಲುವೆ ಗೇಟ್ ಸರಿಯಾದ ನಿರ್ವಹಣೆ ಇಲ್ಲದೇ ಮುರಿದು ಹೋದ ಹಿನ್ನೆಲೆಯಲ್ಲಿ ಡ್ಯಾಂನಿಂದ ಆ. 13ರಂದು ಬೆಳಗ್ಗೆ 8:30ಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿತ್ತು. ಇದರಿಂದ ಆತಂಕಗೊಂಡ ಅಧಿಕಾರಿ ವರ್ಗ ಮೊದಲ ದಿನವೇ ನೀರು ನಿಲ್ಲಿಸುವ ಪ್ರಯತ್ನ ನಡೆಸಿ ವಿಫಲವಾಗಿತ್ತು. ಇದು ಸುತ್ತಲಿನ ಅಚ್ಚುಕಟ್ಟು ಪ್ರದೇಶದ ರೈತರಲ್ಲೂ ಆತಂಕ ಮೂಡಿಸಿದ್ದಲ್ಲದೇ, ಈ ಬಾರಿ ಕಾಲುವೆಗೆ ನೀರು ಹರಿದು ಬರುತ್ತದೆಯೋ ಇಲ್ಲವೋ ಎನ್ನುವ ಆತಂಕ ವ್ಯಕ್ತಪಡಿಸಿದ್ದರು.

ಕಾರ್ಯಾಚರಣೆ ಹೇಗೆ ನಡೆಯಿತು? : ಆ. 13ರಂದು ಒಂದು ಇಂಚ್ ಕಬ್ಬಿಣದ ಪ್ಲೇಟ್ನ್ನು ಗೇಟ್ ಕೆಳಗಿಳಿಸುವ ಕಾರ್ಯ ಜರುಗಿತು. ಆದರೆ ನೀರಿನ ರಭಸಕ್ಕೆ ಪ್ಲೇಟ್ ಕಿತ್ತು ಹೋಯಿತು. ಇನ್ನೂ ಎರಡನೇ ಹಂತದಲ್ಲಿ 5 ಟನ್‌ ಮರಳಿನ ಚೀಲಗಳನ್ನು ಇಳಿಸುವ ಕಾರ್ಯವೂ ಜರುಗಿತು. ಆಗಲೂ ನೀರಿನ ಒತ್ತಡ ಹೆಚ್ಚಾಗಿದ್ದರಿಂದ ಮರಳು ಕೊಚ್ಚಿ ಹೋಯಿತು. ಅಷ್ಟರೊಳಗೆ ಎರಡು ದಿನ ಕಾರ್ಯಾಚರಣೆ ವಿಳಂಬವಾಯಿತು. ಇನ್ನೂ ಆ. 14ರಂದು 1500 ಅಡಿ ಉದ್ದದ ದಪ್ಪನೆಯ ಹಗ್ಗವನ್ನು ತರಿಸಿ 12 ಟನ್‌ನಷ್ಟು ಮರಳನ್ನು ಚೀಲಗಳಲ್ಲಿ ತುಂಬಿಸಿ ಕಬ್ಬಿಣದ ಸರಪಳಿಯಿಂದ ಮೂಟೆಯಾಕಾರದಂತೆ ಸಿದ್ಧಪಡಿಸಲಾಯಿತು. ಮೂಟೆ ಸಿದ್ಧಪಡಿಸಲು ಎರಡು ದಿನ ಕಳೆದವು. ಶುಕ್ರವಾರ ಸಂಜೆ 100 ಟನ್‌ ಸಾಮರ್ಥ್ಯದ ಕ್ರೇನ್‌ ಮೂಲಕ ಬೃಹದಾಕಾರದ ಮೂಟೆಯನ್ನು ಡ್ಯಾಂನಲ್ಲಿ ಇಳಿ ಬಿಡುವ ಪ್ರಕ್ರಿಯೆ ಜರುಗಿತು. ಒಂದು ಹಂತಕ್ಕೆ ಮೂಟೆ ಇಳಿಯುತ್ತಿದ್ದಂತೆ ನೀರಿನ ಸೆಳೆತದಿಂದ ಮೂಟೆ ಹೊಯ್ದಾಡುತ್ತಿತ್ತು. ಇದನ್ನರಿತ ತಾಂತ್ರಿಕ ವರ್ಗ ಆ ಮೂಟೆಗೆ ಕಟ್ಟಲಾಗಿದ್ದ ದಪ್ಪನೆಯ ತಂತಿಯನ್ನು ಇಳಿ ಬಿಟ್ಟಿತ್ತು. ಮೂಟೆಯೂ ನೀರು ಹರಿಯುವ ಗೇಟಿನ ದ್ವಾರಕ್ಕೆ ಕುಳಿತಿದ್ದು, ಶೇ.70-80ರಷ್ಟು ನೀರು ಹರಿಯುವ ಪ್ರಮಾಣ ಕಡಿಮೆಯಾಗಿದೆ.

ಕಾರ್ಯಾಚರಣೆಯಲ್ಲಿದ್ದ ತಂಡ:ಗೇಟ್ ಮುರಿದು ಹೋದ ವಿಷಯ ತಿಳಿಯುತ್ತಿದ್ದಂತೆ ನೀರಾವರಿ ನಿಗಮದ ಎಂಡಿ ಮಲ್ಲಿಕಾರ್ಜುನ ಗುಂಗೆ, ಸಿಇ ಮಂಜಪ್ಪ ಸ್ಥಳದಲ್ಲೇ ಠಿಕಾಣಿ ಹೂಡಿ ಹಲವು ಕಾರ್ಯತಂತ್ರಗಳ ಕುರಿತು ಯೋಜನೆ ರೂಪಿಸುತ್ತಿದ್ದರು. ಗೇಟ್‌ನ ಭಾಗದಲ್ಲಿ ಕೈಗೊಳ್ಳುವ ಕಾರ್ಯದ ಕುರಿತು ಚರ್ಚೆ ನಡೆಸಿದ್ದರು. ಇವರೊಂಡಿಗೆ ಬೆಳಗಾವಿ ಮುಳುಗು ತಜ್ಞರ ತಂಡ, ಜಿಂದಾಲ್ ತಜ್ಞರ ತಂಡ ಸೇರಿದಂತೆ ತುಂಗಭದ್ರಾ ಸ್ಟೀಲ್ ಪ್ರೊಡೆಕ್ಟ್ ತಂಡವು ನಿರಂತರ ಕಾರ್ಯಾಚರಣೆ ನಡೆಸಿ ಒಂದು ಹಂತಕ್ಕೆ ಯಶಸ್ವಿ ಕಂಡಿದೆ.

ನೀರಿನ ಸೆಳೆತ ಇಳಿಮುಖ: ಗೇಟ್ ಮುರಿದ ಮೊದಲ ದಿನದಂದು ನೀರು ಹರಿದು 70 ಎಕರೆ ವಿಸ್ತಾರದ ಪಂಪಾವನದಲ್ಲಿ ಸಂಗ್ರಹವಾಗಿತ್ತು. ಇದು ಇಂಜನಿಯರ್‌ ತಂಡ ಸೇರಿದಂತೆ ಜನರಲ್ಲೂ ಆತಂಕ ಉಂಟು ಮಾಡಿತ್ತು. ಶುಕ್ರವಾರ ಮರಳಿನ ಮೂಟೆ ಇಳಿ ಬಿಟ್ಟಿರುವುದರಿಂದ ಕಾರ್ಯಾಚರಣೆಯಲ್ಲಿ ಸ್ವಲ್ಪ ನಿರಾಳ ಭಾವ ಮೂಡಿದೆ. ಪಂಪಾವನಕ್ಕೆ ಹರಿದು ಬರುವ ನೀರಿನಲ್ಲಿ ಇಳಿಮುಖವಾಗಿದ್ದು, ಗುಳ್ಳೆ ಆಕಾರದ ಸ್ಥಿತಿ ಕಡಿಮೆಯಾಗಿವೆ. ಹೀಗಾಗಿ ಇಂಜನಿಯರ್‌ ಸೇರಿದಂತೆ ಕಾರ್ಮಿಕ ವರ್ಗವು ಖುಷಿಯಲ್ಲಿದೆ.

Advertisement

ಒಟ್ಟಿನಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆದ ಕಾರ್ಯಾಚರಣೆಯಲ್ಲಿ ಶುಕ್ರವಾರ ನೀರಾವರಿ ಇಲಾಖೆ ಅಧಿಕಾರಿಗಳು ಸ್ವಲ್ಪ ಯಶಸ್ಸು ಕಂಡಿದ್ದಾರೆ. ನೀರು ಹರಿದು ಹೋಗುವುದನ್ನು ತಡೆಯುವ ಕಾರ್ಯ ನಡೆದಿದ್ದು, ಶನಿವಾರ ಇದರ ಸ್ಪಷ್ಟ ಚಿತ್ರಣ ಸಿಗಲಿದೆ.

• 12 ಟನ್‌ ಮರಳಿನ ಮೂಟೆ ಇಳಿಬಿಟ್ಟ ಅಧಿಕಾರಿಗಳು

• 100 ಟನ್‌ ಸಾಮರ್ಥ್ಯದ ಕ್ರೇನ್‌ ಬಳಕೆ

• ನಾಲ್ಕು ದಿನಗಳಿಂದ ನಿರಂತರ ನಡೆದ ಕಾರ್ಯ

Advertisement

Udayavani is now on Telegram. Click here to join our channel and stay updated with the latest news.

Next